ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯರಾಮಮಂದಿರ ಕರಸೇವೆ ಹೋರಾಟದಲ್ಲಿ ಭಾಗಿಯಾಗಿದ್ದ ೩೧ ವರ್ಷದ ಪ್ರಕರಣವನ್ನು ಕೆದಕಿ ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಅವರನ್ನು ಬಂಧಿಸಿರುವ ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರದ ಕ್ರಮವನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಬಿಜೆಪಿ ವಿಕಾಸ ಭವನದ ಬಳಿ ಸೇರಿದ ಕಾರ್ಯಕರ್ತರು, ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ರಾಜ್ಯದಲ್ಲಿರುವುದು ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ. ತಾನು ಹಿಂದೂ ವಿರೋಧಿ ಎಂಬುದನ್ನು ರಾಜ್ಯ ಮತ್ತು ದೇಶದ ಜನರಿಗೆ ಪದೇ ಪದೇ ನೆನಪು ಮಾಡುವ ರೀತಿ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ದೇಶದ ಕೋಟ್ಯಂತರ ಜನರ ರಾಮಮಂದಿರ ನಿರ್ಮಾಣದ ಸಂಕಲ್ಪವನ್ನು ಪ್ರಧಾನಿ ನರೇಂದ್ರ ಮೋದಿ ಈಡೇರಿಸಿದ್ದಾರೆ. ಒಂದೆಡೆ ರಾಮಮಂದಿರ ಉದ್ಘಾಟನೆಗೆ ದಿನ ನಿಗದಿಯಾಗಿದೆ. ಇನ್ನೊಂದು ಕಡೆ ಕಾಂಗ್ರೆಸ್ ಸರ್ಕಾರ ಹಳೆಯ ಕೇಸುಗಳನ್ನು ತೆಗೆದು ಹಿಂದೂಗಳನ್ನು ಬಂಧಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜ.೨೨ರಂದು ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಪ್ರತಿಷ್ಠಾಪನೆ ಆಗುವ ಸಂದರ್ಭದಲ್ಲಿ ಇಡೀ ರಾಜ್ಯ ಮಾತ್ರವಲ್ಲದೆ ಕೋಟ್ಯಂತರ ಹಿಂದೂ ಕಾರ್ಯಕರ್ತರು ಸಂತಸದಲ್ಲಿದ್ದಾರೆ. ಇಂತಹ ಸಂದರ್ಭವನ್ನು ಆಯ್ಕೆ ಮಾಡಿಕೊಂಡು ಕೈಗೊಂಡ ಕ್ರಮದ ಮೂಲಕ ತಮ್ಮದು ಹಿಂದೂ ವಿರೋಧಿ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತೋರಿಸಿಕೊಟ್ಟಿದ್ದಾರೆ ಎಂದು ಕಿಡಿಕಾರಿದರು.
ಪದೇಪದೇ ಅಲ್ಪಸಂಖ್ಯಾತರನ್ನು ಓಲೈಸುವ ಕಾಂಗ್ರೆಸ್ ಸರ್ಕಾರ, ಬರಗಾಲದ ಸಂದರ್ಭದಲ್ಲೂ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದೆ. ಇಡೀ ದೇಶದಲ್ಲಿ ಸಂಭ್ರಮ ಇರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಿಂದೂಗಳ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಂಡಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಮತದಾರರು ತಕ್ಕ ಉತ್ತರ ನೀಡುತ್ತಾರೆ ಎಂದು ಎಚ್ಚರಿಕೆ ನೀಡಿದರು.ಅಯೋಧ್ಯೆಯ ಮಂತ್ರಾಕ್ಷತೆಯನ್ನು ಮಾತ್ರವಲ್ಲದೆ, ದೇಶಾದ್ಯಂತ ಪ್ರತಿ ಮನೆಗೂ ತಲುಪಿಸುತ್ತಿದ್ದಾರೆ. ಅಲ್ಲಿ ಕೂಡ ಕಾಂಗ್ರೆಸ್ ಸರ್ಕಾರ ಅಡ್ಡಿ ಮಾಡುತ್ತಿದೆ. ಪುಡಾರಿತನ ಮಾಡುತ್ತಿದೆ. ದೇಶವೇ ಸಂಭ್ರಮದಲ್ಲಿರುವಾಗ ರಾಮಭಕ್ತನನ್ನು ಬಂಧಿಸುವ ಮೂಲಕ ಕಾನೂನು- ಸುವ್ಯವಸ್ಥೆಗೆ ಭಂಗ ತರುವ ದುಸ್ಸಾಹಸಕ್ಕೆ ಮುಖ್ಯಮಂತ್ರಿ, ಗೃಹಸಚಿವರು ಕೈ ಹಾಕುತ್ತಿದ್ದಾರೆ ಎಂದು ದೂರಿದರು.
ರಾಜ್ಯ ಸರ್ಕಾರಕ್ಕೆ ಆದ್ಯತೆ ಯಾವುದು? ಹಳೆಯ ಕೇಸನ್ನು ಈಗಲೇ ರೀ ಓಪನ್ ಮಾಡಬೇಕಿತ್ತೇ?. ಮುಂದೆ ನಡೆಯುವ ಘಟನೆಗೆ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರೇ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.ಸಿದ್ದರಾಮಯ್ಯನವರಿಗೆ ಬದ್ಧತೆ, ಹಿಂದುತ್ವದ ಬಗ್ಗೆ ನೈಜ ಕಳಕಳಿ ಇದ್ದರೆ ಚುನಾವಣೆಯ ಹಿಂದೂ ಆಗದೆ, ನೈಜ ಹಿಂದೂ ಎಂದು ಪ್ರಕಟ ಮಾಡಬೇಕಿದ್ದರೆ ೨೨ರಂದು ರಾಜ್ಯದ ಎಲ್ಲ ಮುಜರಾಯಿ ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡಿಸಲು ಸೂಚಿಸಬೇಕು. ೧೦೦ ದೇವಾಲಯಗಳಿಗೆ ತಲಾ ೧೦೦ ಕೋಟಿ ರು. ಅನುದಾನವನ್ನು ಮುಂದಿನ ೩ ವರ್ಷಗಳಲ್ಲಿ ಕೊಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಮುಖಂಡರಾದ ಡಾ. ಸಿದ್ದರಾಮಯ್ಯ, ಡಾ.ಇಂದ್ರೇಶ್, ಅಶೋಕ್ ಜಯರಾಂ, ಮುನಿರಾಜು, ಎಸ್.ಪಿ. ಸ್ವಾಮಿ, ಇಂಡುವಾಳು ಸಚ್ಚಿದಾನಂದ, ಎಚ್.ಆರ್.ಅರವಿಂದ್, ಅಶೋಕ್, ವಿವೇಕ್, ಪ.ನಾ. ಸುರೇಶ್, ಹೆಬ್ಬಣಿ ಬಸವರಾಜು, ಹರ್ಷ, ಕಾಂತರಾಜು, ಸಿ.ಟಿ.ಮಂಜುನಾಥ್, ನವನೀತ್‌ಗೌಡ, ಹೊಸಹಳ್ಳಿ ಶಿವು, ಪ್ರಸನ್ನಕುಮಾರ್, ಶಿವಕುಮಾರ್, ಕೆಂಪಯ್ಯ, ಚಂದ್ರು, ವಿನೋಬಾ, ಹೇಮಾವತಿ, ನಾಗರತ್ನ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.