ರಾಜ್ಯದ ಕಾಂಗ್ರೆಸ್ ಸರ್ಕಾರ ಪಿಕ್ ಪಾಕೆಟ್ ಸರ್ಕಾರ: ಎಚ್.ಡಿ ಕುಮಾರಸ್ವಾಮಿ

| Published : Apr 30 2024, 02:00 AM IST / Updated: Apr 30 2024, 02:01 AM IST

ರಾಜ್ಯದ ಕಾಂಗ್ರೆಸ್ ಸರ್ಕಾರ ಪಿಕ್ ಪಾಕೆಟ್ ಸರ್ಕಾರ: ಎಚ್.ಡಿ ಕುಮಾರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಭದ್ರಾವತಿ ಕನಕಮಂಟಪ ಮೈದಾನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಬಹಿರಂಗ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮತ್ತು ಸಂಸದ ಬಿ.ವೈ ರಾಘವೇಂದ್ರ ಅವರಿಗೆ ಪಕ್ಷದ ಕಾರ್ಯಕರ್ತರು ಕ್ರೇನ್ ಬಳಸಿ ಬೃಹತ್ ಗಾತ್ರದ ಹೂವಿನ ಹಾಕುವ ಮೂಲಕ ಸಂಭ್ರಮಿಸಿದರು.

ಭದ್ರಾವತಿ: ಗ್ಯಾರಂಟಿ ಹೆಸರಿನಲ್ಲಿ ಎರಡು ಸಾವಿರ ನೀಡಿ ತೆರಿಗೆ ಹೆಚ್ಚಳದ ಮೂಲಕ ಒಂದು ಕುಟುಂಬದಿಂದ 6 ಸಾವಿರ ಪಡೆಯುತ್ತಿರುವ ರಾಜ್ಯ ಸರ್ಕಾರ ಪಿಕ್ ಪಾಕೆಟ್ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಆರೋಪಿಸಿ, ರಾಜ್ಯದ ಜನತೆಯನ್ನು ಸಾಲದ ಸುಲಿಗೆ ಸಿಲುಕಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅವರು ಸೋಮವಾರ ಬಹಿರಂಗಸಭೆಯಲ್ಲಿ ಮಾತನಾಡಿ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಲೋಕಸಭೆ ಚುನಾವಣೆಯಲ್ಲಿ ಮತಪಡೆಯಲು ಮಾಡಿರುವ ತಂತ್ರವಾಗಿದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾದರೆ, ಅದರ ಪರಿಣಾಮ ರಾಜ್ಯದ ಜನರೇ ಅನುಭವಿಸಬೇಕಾಗುತ್ತದೆ. ಸರ್ಕಾರ ಸಾಲಮಾಡಿ ಜನರನ್ನು ಜವಾಬ್ದಾರಿಯಾಗಿಸಲಿದೆ ಎಂದು ದೂರಿದರು.

ನಮ್ಮ ನೀರು ನಮ್ಮ ಹಕ್ಕು ಎಂಬ ಘೋಷಣೆಯೊಂದಿಗೆ ಮೇಕೆದಾಟು ಯೋಜನೆ ಬಗ್ಗೆ ಹೋರಾಟಮಾಡಿದವರು, ಅಧಿಕಾರಕ್ಕೆ ಬಂದ ನಂತರ ಯೋಜನೆ ಮರೆತ್ತಿದ್ದಾರೆ. ತಮಿಳುನಾಡಿನವರು ಮೇಕೆದಾಟು ಅಣೆಕಟ್ಟು ಕಟ್ಟಲು ಬಿಡುವುದಿಲ್ಲ ಅನ್ನುತ್ತಿದ್ದಾರೆ. ಕಾಂಗ್ರೆಸ್ಸಿಗರು ತಮಿಳುನಾಡು ಜೊತೆ ಕೈಜೋಡಿಸಿದ್ದಾರೆಂದು ಆರೋಪಿಸಿದರು.

7800 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಮುಖ್ಯಮಂತ್ರಿಯಿಂದ ಸಚಿವರವರೆಗೆ ಯಾರಿಗೂ ಕಾಳಜಿಯಿಲ್ಲ. ಎಲ್ಲದಕ್ಕೂ ಕೇಂದ್ರ ಸರ್ಕಾರವನ್ನು ದೂರುವುದೇ ಕೆಲಸ. ರೈತರಿಗೆ ಭರವಸೆ ತುಂಬುವ ಪ್ರಯತ್ನಗಳಾಗಿಲ್ಲ. ಜನತೆಯ ಬಗ್ಗೆ ಕಾಳಜಿ ಇಲ್ಲ. ಇದೊಂದು ಕೆಟ್ಟ ಸರ್ಕಾರ. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿಐಎಸ್ಎಲ್ ಉಳಿಸುವುದು ನಮ್ಮ ಜವಾಬ್ದಾರಿ ಎಂದರು.