ನೂರಕ್ಕೆ ನೂರು ಇದು ಲೂಟಿ ಸರ್ಕಾರ. ರಸ್ತೆಗಳು ಹಳ್ಳ ಹಿಡಿದಿವೆ. ಕಾಂಗ್ರೆಸ್ ಉದ್ಧಾರ ಆಗಲ್ಲ. ಕಾಂಗ್ರೆಸ್ ಸತ್ಯದಿಂದ ಅಧಿಕಾರಕ್ಕೆ ಬಂದಿದ್ದಲ್ಲ. ನೂರು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದೆ ಎಂದು ಮಾಚಿ ಸಚಿವ ಹಾಲಪ್ಪ ಆಚಾರ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಕೊಪ್ಪಳ: ಹಗರಣಗಳನ್ನೇ ಸುತ್ತಿಕೊಂಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಐದು ವರ್ಷ ಉಳಿಯಲು ಸಾಧ್ಯವೇ ಇಲ್ಲ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದ್ದಾರೆ.

ಬಿಜೆಪಿ ಕಚೇರಿ ಸಭಾಂಗಣದಲ್ಲಿ ಶನಿವಾರ ಕೊಪ್ಪಳ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ವಾಲ್ಮಿಕಿ, ಮುಡಾ ಹಗರಣ ಸೇರಿದಂತೆ ಬರೋಬ್ಬರಿ 21 ಹಗರಣಗಳನ್ನು ಮೈಮೇಲೆ ಎಳೆದುಕೊಂಡಿದೆ. ಇಂಥ ಸರ್ಕಾರವನ್ನು ನಾವು ನೋಡಿರಲೇ ಇಲ್ಲ. ಈ ನಡುವೆ ಅಧಿಕಾರಕ್ಕಾಗಿ ಪಕ್ಷದಲ್ಲಿಯೇ ಪೈಪೋಟಿ, ಮುಖ್ಯಮಂತ್ರಿಯಾಗಲು ಹಲವರ ಪ್ರಯತ್ನ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಈ ಸರ್ಕಾರ ಐದು ವರ್ಷ ಉಳಿಯಲು ಸಾಧ್ಯವೇ ಇಲ್ಲ. ಯಾವಾಗ ಬೇಕಾದರೂ ಸರ್ಕಾರ ಪತನವಾಗಬಹುದು ಎಂದರು.

ನೂರಕ್ಕೆ ನೂರು ಇದು ಲೂಟಿ ಸರ್ಕಾರ. ರಸ್ತೆಗಳು ಹಳ್ಳ ಹಿಡಿದಿವೆ. ಕಾಂಗ್ರೆಸ್ ಉದ್ಧಾರ ಆಗಲ್ಲ. ಕಾಂಗ್ರೆಸ್ ಸತ್ಯದಿಂದ ಅಧಿಕಾರಕ್ಕೆ ಬಂದಿದ್ದಲ್ಲ. ನೂರು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದೆ. ಎಸ್ಸಿ-ಎಸ್ಟಿ ₹೨೫ ಸಾವಿರ ಕೋಟಿ ಬೇರೆಯ ಕಾರ್ಯಕ್ಕೆ ಬಳಕೆ ಮಾಡಿಕೊಂಡು ದಲಿತರಿಗೆ ಅನ್ಯಾಯ ಮಾಡಿದೆ. ಬಿಜೆಪಿ ರೈತರಿಗೆ ನೀಡಿದ್ದನ್ನು ಕಿತ್ತುಕೊಂಡಿದೆ. ರೈತರ ಖಾತೆಗೆ ರಾಜ್ಯ ಸರ್ಕಾರ ನೀಡುತ್ತಿದ್ದ ₹4 ಸಾವಿರ ಬಂದ್ ಮಾಡಿದೆ. ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡದ ಸರ್ಕಾರ. ಕೇವಲ ಅಧಿಕಾರಕ್ಕಾಗಿ ಆಡಳಿತ ಮಾಡುವ ಸರ್ಕಾರ. ಯಾವ ಮುಖ ಇಟ್ಟುಕೊಂಡು ಅಧಿಕಾರ ನಡೆಸುತ್ತಿದೆಯೋ ಎಂದು ಕಿಡಿಕಾರಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿನ ಹಗರಣ ತನಿಖೆ ಮಾಡುತ್ತೇವೆ ಎನ್ನುವವರು ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾದರೂ ಯಾಕೆ ತನಿಖೆ ಮಾಡಲಿಲ್ಲ? ಈಗ ವಾಲ್ಮೀಕಿ ಹಗರಣ ಬೆಳಕಿಗೆ ಬಂದಾಗ ಈಗ ಹಿಂದಿನ ಹಗರಣ ತನಿಖೆ ಮಾಡುವುದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದರು.

ಪೇ ಸಿಎಂ ಎಂದು ಮಾಡಿದಂತೆ ಈಗಲೂ ಮಾಡುತ್ತಿದ್ದಾರೆ. ಅದ್ಯಾವುದೂ ನಡೆಯಲ್ಲ, ಕಾಂಗ್ರೆಸ್ ನಾಯಕರ ಬಣ್ಣ ಬಯಲಾಗಿದೆ. ಜನರಿಗೋಸ್ಕರ ಅಧಿಕಾರ ಮಾಡುತ್ತಾ ಇಲ್ಲ ಇವರು, ತಮ್ಮ ಅಕ್ರಮಗಳನ್ನು ಮುಚ್ಚಿಕೊಳ್ಳಲು ಅಧಿಕಾರ ಮಾಡುತ್ತಿದ್ದಾರೆ. ಪಕ್ಷದ ಪದಾಧಿಕಾರಿಗಳು ಸಮಯಪ್ರಜ್ಞೆ ಇಟ್ಟುಕೊಂಡು ಕೆಲಸ ಮಾಡಬೇಕು. ಸಮಯಪ್ರಜ್ಞೆ ಇರದಿದ್ದರೆ ಜೀವನದಲ್ಲಿ ಏನು ಮಾಡಲು ಆಗುವುದಿಲ್ಲ. ಅದೇ ರೀತಿ ಪಕ್ಷವನ್ನು ಕಟ್ಟಲು ಸಹ ಆಗುವುದಿಲ್ಲ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ ಮಾತನಾಡಿ, ರಾಜ್ಯ ಕಾರ್ಯಕಾರಿಣಿಯಲ್ಲಿ ನೀಡಿರುವ ಸೂಚನೆಗಳನ್ನು ಜಿಲ್ಲಾ ಕಾರ್ಯಕಾರಣಿಯಲ್ಲಿ ಮಾಹಿತಿ ನೀಡಲಾಗುವುದು. ಇದನ್ನು ಬೂತ್ ಮಟ್ಟಕ್ಕೆ ಒಯ್ಯಬೇಕಾಗಿದೆ. ಹೀಗಾಗಿ ಪ್ರಧಾನ ಪದಾಧಿಕಾರಿಗಳು ಈ ಜವಾಬ್ದಾರಿ ನಿಭಾಯಿಸಬೇಕಾಗುತ್ತದೆ‌ ಎಂದರು.

ಪಕ್ಷ ಸಂಘಟನೆಯ ಜತೆಗೆ ಜಿಲ್ಲೆಯ ಸಮಸ್ಯೆಯನ್ನು ಮುಂದಿಟ್ಟುಕೊಂಡು ಹೋರಾಟ ಮಾಡಬೇಕಾಗಿದೆ. ಅಭಿವೃದ್ದಿಗಾಗಿಯೂ ನಮ್ಮ ಪ್ರಯತ್ನ ಮಾಡಬೇಕಾಗಿದೆ. ನನಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ‌. ಅದಕ್ಕೆ ತಕ್ಕಂತೆ ನಾನು ಪಕ್ಷ ಸಂಘಟನೆ ಮಾಡುತ್ತೇನೆ ಎಂದರು.

ನಾನು ಚಿಕ್ಕವನಾಗಿದ್ದರೂ ಪಕ್ಷದ ಹಿರಿಯರು ನನಗೆ ಉತ್ತಮ ಸಹಕಾರ ನೀಡುತ್ತಿದ್ದಾರೆ. ನಮ್ಮಲ್ಲಿ ಯಾವುದೇ ಹೊಂದಾಣಿಕೆಯ ಕೊರತೆ ಇಲ್ಲ ಎಂದರು. ವಿರೋಧಪಕ್ಷದ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಲಲಿತಾ ಅನಾಪುರ, ಮಾಜಿ ಶಾಸಕ ಪರಣ್ಣ ಮನವಳ್ಳಿ, ಡಾ. ಬಸವರಾಜ , ಜಿ. ವೀರಪ್ಪ ಕೆಸರಟ್ಟಿ, ಶಿವರಾಮಗೌಡ, ಬಸವರಾಜ ದಢೇಸೂಗೂರು ಇದ್ದರು.