ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುರುವಾರ ನಗರದ ಟಿ. ಸೀನಪ್ಪ ಶೆಟ್ಟಿ (ಗೋಪಿ) ವೃತ್ತದಲ್ಲಿ ಜಿಲ್ಲಾ ಬಿಜೆಪಿ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುರುವಾರ ನಗರದ ಟಿ. ಸೀನಪ್ಪ ಶೆಟ್ಟಿ (ಗೋಪಿ) ವೃತ್ತದಲ್ಲಿ ಜಿಲ್ಲಾ ಬಿಜೆಪಿ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿ ಅಂಚಿನಲ್ಲಿದೆ. ಅಭಿವೃದ್ಧಿಗೆ ಒಂದು ರೂಪಾಯಿ ಇಲ್ಲ. ಬಡವರಿಗೆ, ರೈತರಿಗೆ ಪರಿಹಾರ ಕೊಡಲು ಹಣ ಇಲ್ಲ. ಕೇವಲ ಜಾಹೀರಾತುಗಳನ್ನು ಕೊಟ್ಟುಕೊಂಡು ದಿನಗಳನ್ನು ಕಳೆಯುತ್ತಿದ್ದಾರೆ ಎಂದು ಟೀಕಿಸಿದರು.
ಕಳೆದ ಎರಡೂವರೆ ವರ್ಷದಲ್ಲಿ 4 ಲಕ್ಷ ಕೋಟಿಗೂ ಹೆಚ್ಚು ಹೊಸ ಸಾಲ ಮಾಡಿ, ಒಟ್ಟು ಸಾಲದ ಮೊತ್ತ 8 ಲಕ್ಷ ಕೋಟಿಗೆ ತಲುಪಿದೆ. ಹಣಕಾಸು ಇಲಾಖೆಯೇ ಖಜಾನೆಯಲ್ಲಿ ಹಣ ಇಲ್ಲ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದೆ. ಇತಿಹಾಸದಲ್ಲೆ ಇದೇ ಮೊದಲು ಆರ್ಥಿಕ ಇಲಾಖೆ ಸರ್ಕಾರಕ್ಕೆ ಚಾಟಿ ಬೀಸಿರುವುದು. ಆದರೂ ಕರಾವಳಿ ಭಾಗಕ್ಕೆ ಹೋಗಿ 32 ಸಾವಿರ ಕೋಟಿ ಯೋಜನೆ ಘೋಷಣೆ ಮಾಡಿದ್ದಾರೆ. ಇದು ಮೂಗಿಗೆ ತುಪ್ಪ ಸವರುವ ಕೆಲಸ ಎಂದು ಆರೋಪಿಸಿದರು.ವಿಕಲಚೇತನರ ಪಿಂಚಣಿ, ವೃದ್ಧಾಪ್ಯವೇತನ, ವಿಧವಾ ವೇತನ ಜಮೆಯಾಗುತ್ತಿಲ್ಲ. ಇವರು ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಮಕ್ಕಳಿಗೆ ಕೊಟ್ಟ ಶೂ, ಸಾಕ್ಸ್ ಕಳಪೆ ಗುಣಮಟ್ಟದ್ದಾಗಿದ್ದು, ಭ್ರಷ್ಟಾಚಾರದ ವಾಸನೆ ಬರುತ್ತಿದೆ. ಶಿಕ್ಷಕರ ನೇಮಕಾತಿ ಇಲ್ಲ, ಶಿಕ್ಷಕರಿಗೆ ಸಂಬಳ ನೀಡಲು ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರಿಕೃಷ್ಣ ಮಾತನಾಡಿ, ರಾಜ್ಯದ ಹಣಕಾಸಿನ ವಾಸ್ತವ ಸ್ಥಿತಿ ಏನಿದೆ ಎಂಬ ಬಗ್ಗೆ ಮುಖ್ಯಮಂತ್ರಿಗಳು ಶ್ವೇತಪತ್ರ ಬಿಡುಗಡೆ ಮಾಡಬೇಕು. ಖಜಾನೆಯಲ್ಲಿ ಹಣವಿಲ್ಲದೆ ಮಂತ್ರಿಗಳು ಸ್ಥಳೀಯ ಸಂಸ್ಥೆಗಳಾದ ಮಹಾನಗರ ಪಾಲಿಕೆ, ಸೂಡಾ ಅಧಿಕಾರಿಗಳಿಂದ ವಸೂಲಿ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ರಿಯಲ್ ಎಸ್ಟೆಟ್ ದಂಧೆ ಬಿಟ್ಟು ಬಿಡದಿಯ ಕಡೆ ಮುಖ ಮಾಡದೆ ರೈತರ ನೈಜ ಸಮಸ್ಯೆಗಳತ್ತ ಮುಖ ಮಾಡಲಿ. ವಿರೋಧ ಪಕ್ಷವನ್ನು ವಿಶ್ವಾಸಕ್ಕೆ ಪಡೆದು ಒಳ್ಳೆಯ ಕೆಲಸ ಮಾಡಲಿ ಎಂದರು.ರಾಜ್ಯ ಬಿಜೆಪಿ ಪ್ರಕೋಷ್ಠಿ ಸಂಯೋಜಕ ಎಸ್. ದತ್ತಾತ್ರಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಆಪ್ತರೊಬ್ಬರು ಸೂಡಾದಲ್ಲಿ ಸರ್ಕಾರಿ ಅಧಿಕಾರಿಗಳ ಬಳಿ ಕಮಿಷನ್ ಕೇಳಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಆರೋಪವನ್ನ ಯಾವುದೇ ವಿರೋಧ ಪಕ್ಷ ಮಾಡಿಲ್ಲ. ಬದಲಿಗೆ ಕಾಂಗ್ರೆಸ್ ಪಕ್ಷದ ಜಿಲ್ಲಾ ಮಾಜಿ ಅಧ್ಯಕ್ಷ ಹಾಗೂ ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಮಾಡಿದ್ದಾರೆ. ಆ ಮೂಲಕ ಕಾಂಗ್ರೆಸ್ ನಾಯಕರು ಕಮಿಷನ್ ದಂಧೆಯಲ್ಲಿ ನಿರತರಾಗಿರುವುದು ಸಾಬೀತಾಗಿದೆ ಎಂದು ದೂರಿದರು.
ಬಿಜೆಪಿ ಕಾರ್ಯಕರ್ತರು ಚೊಂಬು ಹಿಡಿದು ಸರ್ಕಾರದ ವಿರುದ್ದ ಘೋಷಣೆ ಕೂಗುತ್ತಾ ಸರ್ಕಾರದ ಅಣಕು ಶವಯಾತ್ರೆ ಮಾಡಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರುಗಳಾದ ಎಸ್ ಜ್ಞಾನೇಶ್ವರ್, ಎನ್ ಜಿ ನಾಗರಾಜ್, ಪ್ರಮುಖರಾದ ಶಿವರಾಜ್, ಮಾಲತೇಶ್, ಬಳ್ಳೆಕೆರೆ ಸಂತೋಷ್, ಮೋಹನ್ ರೆಡ್ಡಿ, ಧರ್ಮ ಪ್ರಸಾದ್, ಮಲ್ಲೇಶಪ್ಪ, ಎಸ್. ಚಂದಶೇಖರ್, ಅನಿತಾ ರವಿಶಂಕರ್ ಹಾಗೂ ಪಕ್ಷದ ಪ್ರಮುಖರುಗಳು ಉಪಸ್ಥಿತರಿದ್ದರು.