ಅಡಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರ ಭೇಟಿಯಾದ ರಾಜ್ಯದ ನಿಯೋಗ

| Published : Aug 22 2025, 01:01 AM IST

ಅಡಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರ ಭೇಟಿಯಾದ ರಾಜ್ಯದ ನಿಯೋಗ
Share this Article
  • FB
  • TW
  • Linkdin
  • Email

ಸಾರಾಂಶ

ಡಕೆ ಆಮದು ಮಾಡುವ ಮೊದಲು ಸ್ಥಳೀಯ ಸಹಕಾರಿ ಸಂಸ್ಥೆಗಳಾದ ಕ್ಯಾಂಪ್ಕೋ, ಟಿಎಸ್‌ಎಸ್, ಮಾಮ್ಕೋಸ್ ಇನ್ನಿತರ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸುವಂತೆ ಮನವಿ ಮಾಡಿದರು.

ಶಿರಸಿ: ದೆಹಲಿಯಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕೇಂದ್ರ ಸಚಿವರು ಹಾಗೂ ರಾಜ್ಯದ ಅಡಿಕೆ ಬೆಳೆಯುವ ಪ್ರದೇಶದ ಸಂಸದರು ಮತ್ತು ಅಡಿಕೆ ಬೆಳೆಗಾರರ ಸಂಘಗಳ ಪ್ರತಿನಿಧಿಗಳ ನಿಯೋಗವು ಭೇಟಿಯಾಗಿ ಕೇಂದ್ರ ಸರ್ಕಾರಕ್ಕೆ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಮನವಿ ಸಲ್ಲಿಸಲಾಯಿತು.ಹಳದಿ ಎಲೆ ರೋಗ ಮತ್ತು ಕೊಳೆ ರೋಗದಂತಹ ಮಾರಕ ರೋಗಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಹಾಗೂ ಅಡಕೆ ಬೆಳೆ ಮತ್ತು ಮಾನವನ ಆರೋಗ್ಯದ ಕುರಿತು ವೈಜ್ಞಾನಿಕ ವರದಿಯನ್ನು ತುರ್ತಾಗಿ ತರಿಸಿಕೊಳ್ಳಬೇಕು ಎಂದು ಸಚಿವರಿಗೆ ಒತ್ತಾಯಿಸಿತು.

ಅಡಕೆಯ ಅಕ್ರಮ ಆಮದನ್ನು ತಡೆಯಲು ಕಸ್ಟಮ್ಸ್ ವ್ಯವಸ್ಥೆಯನ್ನು ಬಲಪಡಿಸುವುದರ ಜತೆ ಅಕ್ರಮ ವ್ಯಾಪಾರ ಹತ್ತಿಕ್ಕಲು ದೊಡ್ಡ ಪ್ರಮಾಣದ ಅಡಿಕೆ ಸಾಗಣೆಗಳಿಗೆ ಜಿಪಿಎಸ್ ಟ್ರ್ಯಾಕಿಂಗ್ ಅಳವಡಿಸಬೇಕು. ಅಡಕೆ ಆಮದು ಮಾಡುವ ಮೊದಲು ಸ್ಥಳೀಯ ಸಹಕಾರಿ ಸಂಸ್ಥೆಗಳಾದ ಕ್ಯಾಂಪ್ಕೋ, ಟಿಎಸ್‌ಎಸ್, ಮಾಮ್ಕೋಸ್ ಇನ್ನಿತರ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸುವಂತೆ ಮನವಿ ಮಾಡಿದರು.

ರೈತರಿಗೆ ಅನುಕೂಲವಾಗುವಂತೆ ಅಡಿಕೆಯಲ್ಲಿನ ತೇವಾಂಶ ಮಟ್ಟವನ್ನು ಶೇ.೭ರಿಂದ ಶೇ.೧೧-೧೨ಕ್ಕೆ ಹೆಚ್ಚಿಸುವಂತೆ ಎಫ್‌ಎಸ್‌ಎಸ್‌ಎಐಗೆ ಮನವಿ ಸಲ್ಲಿಸಲಾಯಿತು. ಸೂರ್ಯನ ಬೆಳಕಿನಲ್ಲಿ ಶೇ.೭ ತೇವಾಂಶ ಕಾಯ್ದುಕೊಳ್ಳುವುದು ರೈತರಿಗೆ ಕಷ್ಟಕರ ಎಂದು ನಿಯೋಗವು ವಿವರಿಸಿತು. ಭಾರತೀಯ ಮಾನದಂಡಗಳ ಬ್ಯೂರೋ (ಬಿಐಎಸ್) ನಿಗದಿಪಡಿಸಿರುವ ಅಡಿಕೆ ಗ್ರೇಡಿಂಗ್ ಮಾನದಂಡಗಳನ್ನು ಪುನರ್ ಪರಿಶೀಲಿಸಿ, ಸ್ಥಳೀಯ ಭೌಗೋಳಿಕ ವ್ಯತ್ಯಾಸಗಳನ್ನು ಗಣನೆಗೆ ತೆಗೆದುಕೊಳ್ಳುವಂತೆ ಕೋರಿದರು.

ಸಹಕಾರಿ ಸಂಸ್ಥೆಗಳಿಗೆ ನೀಡುವ ಸಾಲಗಳ ಮೇಲಿನ ಬಡ್ಡಿದರ ಕಡಿಮೆಗೊಳಿಸಿ ಕಾರ್ಪೊರೇಟ್‌ಗಳ ಮಾದರಿಯಲ್ಲಿ ಕ್ರೆಡಿಟ್ ರೇಟಿಂಗ್ ಅನ್ವಯಿಸದೇ ಹೊಸ ಮಾನದಂಡಗಳನ್ನು ರೂಪಿಸುವಂತೆ ನಿಯೋಗವು ಸಚಿವರನ್ನು ಒತ್ತಾಯಿಸಿತು. ಇದರಿಂದ ರೈತರಿಗೆ ಸುಲಭವಾಗಿ ಸಾಲ ದೊರೆಯಲು ಸಹಾಯವಾಗುತ್ತದೆ ಎಂದು ನಿಯೋಗ ಹೇಳಿತು.

ಅಡಕೆಗೆ ಬಳಸುವ ಕಾಪರ್ ಸಲ್ಫೇಟ್ ಮೇಲಿನ ಜಿಎಸ್‌ಟಿ ದರವನ್ನು ಶೇ.೧೮ ರಿಂದ ಶೇ.೫ಕ್ಕೆ ಮತ್ತು ಅಡಿಕೆ ಮೇಲಿನ ಜಿಎಸ್‌ಟಿ ದರವನ್ನು ಇಳಿಸಬೇಕು. ಬೆಳೆ ನಷ್ಟದಿಂದ ರೈತರನ್ನು ರಕ್ಷಿಸಲು ಬೆಳೆ ವಿಮಾ ಸೌಲಭ್ಯಗಳನ್ನು ಬಲಪಡಿಸಬೇಕು. ರೈತರು ಕಡಿಮೆ ಬೆಲೆಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ತಪ್ಪಿಸಲು ಸಹಕಾರಿ ಸಂಸ್ಥೆಗಳಿಗೆ ಸಬ್ಸಿಡಿ ದರದಲ್ಲಿ ಹಣಕಾಸು ಒದಗಿಸಿ ಗೋದಾಮಿನ ಸೌಲಭ್ಯಗಳನ್ನು ನಿರ್ಮಿಸಲು ನೆರವಾಗುವಂತೆ ಕೋರಲಾಯಿತು.

ನಿಯೋಗದ ಎಲ್ಲ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಎಲ್ಲಾ ವಿಷಯಗಳನ್ನು ಪರಿಶೀಲಿಸಿ ಅಡಿಕೆ ಬೆಳೆಗಾರರಿಗೆ ಅನುಕೂಲವಾಗುವಂತಹ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದರು.

ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಗೋವಿಂದ ಕಾರಜೋಳ, ಕೋಟ ಶ್ರೀನಿವಾಸ್ ಪೂಜಾರಿ, ಬಿ.ವೈ.ರಾಘವೇಂದ್ರ, ಬ್ರಿಜೇಶ್ ಚೌಟ, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಪ್ರಭಾ ಮಲ್ಲಿಕಾರ್ಜುನ್, ಶಾಸಕ ಮತ್ತು ಅಡಕೆ ಮಹಾಮಂಡಳದ ಅಧ್ಯಕ್ಷ ಅರಗ ಜ್ಞಾನೇಂದ್ರ, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡಗಿ ಉಪಸ್ಥಿತರಿದ್ದರು.

ಇತರೆ ಪ್ರಮುಖ ಬೇಡಿಕೆಗಳು:

೧) ಅಮೆರಿಕದಲ್ಲಿ ಅಡಕೆ ಎಲೆಗಳಿಂದ ಮಾಡಿದ ಬಯೋಡಿಗ್ರೇಡೆಬಲ್ ಪ್ಲೇಟ್‌ಗಳನ್ನು ಕ್ಯಾನ್ಸರ್ ಕಾರಕ ಎಂದು ಘೋಷಿಸಿರುವುದರಿಂದ ಉಂಟಾದ ರಫ್ತು ಸಮಸ್ಯೆಗಳನ್ನು ಬಗೆಹರಿಸಲು ವೈಜ್ಞಾನಿಕ ಅಧ್ಯಯನ ನಡೆಸುವಂತೆ ಒತ್ತಾಯ.

೨) ಕಾರ್ಬನ್ ಫೈಬರ್ ದೋಟಿ ಮತ್ತು ಇತರೆ ಕೃಷಿ ಉಪಕರಣಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಲು ಮನವಿ.

ಅಡಕೆಯು ಅಲ್ಲಿನ ಮಣ್ಣಿನ ಅನುಗುಣವಾಗಿ ಬೆಳೆಯುತ್ತದೆ. ಉತ್ತರಕನ್ನಡ ಜಿಲ್ಲೆಯ ಅಡಕೆ ಗಾತ್ರ ದೊಡ್ಡದಾಗಿರುವುದರಿಂದ ದರದಲ್ಲಿ ವ್ಯತ್ಯಾಸವಾಗುತ್ತಿದೆ. ಅಡಕೆಗೆ ಬೇರೆ ಬೇರೆ ಸುಂಕವಿದೆ. ಅದನ್ನು ಸರಳೀಕರಣಗೊಳಿಸುವುದು ಸೇರಿದಂತೆ ಇನ್ನಿತರ ಅಡಕೆ ಬೆಳೆಗಾರರ ಬೇಡಿಕೆಯನ್ನು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ