ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಅಪರಾಧ ಘಟನೆ ಹಿನ್ನೆಲೆಯಲ್ಲಿ ಒಂದು ಮಗುವಿನ ಜೀವ ಹೊಗಿರುವುದರ ಜೊತೆಗೆ ಹಲವಾರು ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬಗಳಿಗೆ ತೊಂದರೆ ಉಂಟಾಗಿದೆ.

ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿರುವ ವಸತಿ ಶಾಲೆಗಳಲ್ಲಿರುವ ಮಕ್ಕಳು ಡ್ರಗ್ಸ್‌, ಸಿಗರೇಟ್, ಮಧ್ಯ ಹಾಗೂ ಇತರೆ ಮಾದಕ ವಸ್ತುಗಳನ್ನು ಸೇವಿಸದಂತೆ ಮತ್ತು ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಯದಂತೆ ತಡೆಗಟ್ಟಲು ಕಣ್ಗಾವಲು ಪಡೆ ಸ್ಥಾಪಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಇತ್ತೀಚೆಗೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಅಪರಾಧ ಘಟನೆ ಹಿನ್ನೆಲೆಯಲ್ಲಿ ಒಂದು ಮಗುವಿನ ಜೀವ ಹೊಗಿರುವುದರ ಜೊತೆಗೆ ಹಲವಾರು ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬಗಳಿಗೆ ತೊಂದರೆ ಉಂಟಾಗಿದೆ. ಈ ಘಟನೆ ಸಮಾಜದಲ್ಲಿ ಆತಂಕ ಮೂಡಿಸಿದ್ದು, ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನ ಹರಿಸುವ ಅಗತ್ಯವನ್ನು ಮೂಡಿಸಿದೆ. ಈ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯಲ್ಲಿರುವ ಎಲ್ಲ ವಸತಿ ಶಾಲೆಗಳಲ್ಲಿಯೂ ಇಂತಹ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಸಂಬಂಧಪಟ್ಟ ವಸತಿ ಶಾಲೆಗಳ ಮುಖ್ಯಸ್ಥರನ್ನು ಕರೆದು ಸಭೆ ನಡೆಸಿ, ವಿದ್ಯಾರ್ಥಿಗಳು ಡ್ರಗ್ಸ್, ಸಿಗರೇರ್, ಮಧ್ಯ ಹಾಗೂ ಇತರೆ ಮಾದಕ ವಸ್ತುಗಳನ್ನು ಸಿವಿಸದಂತೆ ಕಟ್ಟುನಿಟ್ಟಿನಿ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಜೊತೆಗೆ ವಸತಿ ಶಾಲೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂತಹ ಮಾದಕ ವಸ್ತುಗಳ ಮಾರಾಟ, ಕಾನೂನುಬಾಹಿರ ಚಟುವಟಿಕೆಗಳು ನಡೆಯದಂತೆ ತಡೆಯಲು ವಿಶೇಷ ಕಣ್ಗಾವಲು ಪಡೆ ಸ್ಥಾಪಿಸುವಂತೆ, ನಿಯಮಿತವಾಗಿ ಪರಿಶೀಲನೆ ನಡೆಸುವಂತೆ ಕ್ರಮ ಕೈಗೊಳ್ಳಬೇಕು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ, ರೈತ ಸಂಘದ ಮುಖಂಡರಾದ ಶಿವರಾಜ ಎಂ. ಹೊಳಗುಂದಿ, ಎಲ್‌. ಸೇವಾನಾಯ್ಕ, ದುರುಗಪ್ಪ, ರವಿಕುಮಾರ್ ತಂಬ್ರಹಳ್ಳಿ, ಎನ್‌. ರಮೇಶ್‌ ಸೇರಿದಂತೆ ಇತರರು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.