ಕನ್ನಡಪ್ರಭ ವಾರ್ತೆ ಮೈಸೂರುರಾಜ್ಯದ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಏಕಕಾಲಕ್ಕೆ ಬಿಡುಗಡೆಗೊಳಿಸಲು ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯವರು ಕಾಲೇಜು ಶಿಕ್ಷಣ ಇಲಾಖೆ ಮೈಸೂರು ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕಿ ಡಾ.ಡಿ.ಎಸ್. ಪ್ರತಿಮಾ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ 2025- 26ನೇ ಸಾಲಿಗೆ ರಾಜ್ಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸಲು ಅತಿಥಿ ಉಪನ್ಯಾಸಕರನ್ನು ರಾಜ್ಯಾದ್ಯಂತ ಏಕಕಾಲಕ್ಕೆ ನೇಮಕ ಮಾಡಿಕೊಳ್ಳಲಾಯಿತು. ಅದರಂತೆ ಅತಿಥಿ ಉಪನ್ಯಾಸಕರು ತಮ್ಮ ತಮ್ಮ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ, ಅತಿಥಿ ಉಪನ್ಯಾಸಕರನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಮಾತ್ರ ಆಯಾ ಕಾಲೇಜುಗಳ ಒಳ ಪಡುವ ವಿಶ್ವವಿದ್ಯಾನಿಲಯದ ವೇಳಾಪಟ್ಟಿಯನ್ನು ಅನುಸರಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಮೈಸೂರು ವಿವಿ 2, 4, 6ನೇ ಸೆಮಿಸ್ಟರ್ ವೇಳಾಪಟ್ಟಿಯು ಏ.29 ರಂದು ಕೊನೆಯಾದರೆ, ಹಾವೇರಿ ವಿವಿ 2, 4, 6ನೇ ಸೆಮಿಸ್ಟರ್ ವೇಳಾಪಟ್ಟಿ ಜೂ.20 ರಂದು ಕೊನೆಯಾಗಲಿದೆ. ಇದರಿಂದ ಅತಿಥಿ ಉಪನ್ಯಾಸಕರಲ್ಲಿ ತಾರತಮ್ಯ ಉಂಟಾಗಿ ಸಮಸ್ಯೆಯೂ ಗೊಂದಲದ ಗೂಡಾಗಿದೆ ಎಂದು ಅವರು ದೂರಿದರು.ಅತಿಥಿ ಉಪನ್ಯಾಸಕರಿಗೆ ನೀಡುವ ಕೃಪಾಂಕದಲ್ಲಿ ಏರುಪೇರು ಮತ್ತು ಇಲಾಖೆಯ ನಿಯಮದಂತೆ ಕೆಲವು ವಿವಿ ಅತಿಥಿ ಉಪನ್ಯಾಸಕರಿಗೆ 10 ತಿಂಗಳ ವೇತನವು ಸಹ ಸಿಗುವುದಿಲ್ಲ. ಹೀಗಾಗಿ, ವಿವಿಗಳ ವೇಳಾಪಟ್ಟಿಯನ್ನು ಅನುಸರಣೆ ಮಾಡದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯು ಹೇಗೆ ರಾಜ್ಯಾದಂತ ಏಕಕಾಲಕ್ಕೆ ಸಮಸ್ತ ಅತಿಥಿ ಉಪನ್ಯಾಸಕರನ್ನು ನೇಮಕಗೊಳಿಸಲಾಯಿತು. ಅದೇ ರೀತಿ ಬಿಡುಗಡೆಗೊಳಿಸುವ ಸಂದರ್ಭದಲ್ಲೂ ಏಕಕಾಲಕ್ಕೆ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಅತಿಥಿ ಉಪನ್ಯಾಸಕರನ್ನು ಒಂದೇ ಬಾರಿಗೆ ಹೇಗೆ ಆಯ್ಕೆ ಮಾಡಲಾಗಿದೆಯೋ ಅದೇ ರೀತಿ ಒಂದೇ ಬಾರಿಗೆ ಬಿಡುಗಡೆ ಮಾಡಬೇಕು. ಒಂದು ಬಿಡುಗಡೆಯ ದಿನಾಂಕದ ಬಗ್ಗೆ ಸ್ಪಷ್ಟ ನಿರ್ಧಾರವನ್ನು ತೆಗೆದುಕೊಳ್ಳದೆ ಹೋದರೆ 2, 4, 6ನೇ ಸೆಮಿಸ್ಟರ್ ಪರೀಕ್ಷಾ ಕಾರ್ಯ ಹಾಗೂ ಮೌಲ್ಯಮಾಪನ ಕಾರ್ಯವನ್ನು ಮಾಡುವುದಿಲ್ಲ ಎಂದು ಅವರು ಎಚ್ಚರಿಸಿದರು.ಈ ವೇಳೆ ಸಮಿತಿ ಜಿಲ್ಲಾಧ್ಯಕ್ಷ ಹನುಮಂತೇಶ್, ಪದಾಧಿಕಾರಿಗಳು ಹಾಗೂ ಅತಿಥಿ ಉಪನ್ಯಾಸಕರು ಇದ್ದರು.
ಅತಿಥಿ ಉಪನ್ಯಾಸಕರನ್ನು ಏಕಕಾಲಕ್ಕೆ ಬಿಡುಗಡೆಗೊಳಿಸಿ
ಅತಿಥಿ ಉಪನ್ಯಾಸಕರನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಮಾತ್ರ ಆಯಾ ಕಾಲೇಜುಗಳ ಒಳ ಪಡುವ ವಿಶ್ವವಿದ್ಯಾನಿಲಯದ ವೇಳಾಪಟ್ಟಿಯನ್ನು ಅನುಸರಿಸುವುದು ಎಷ್ಟರ ಮಟ್ಟಿಗೆ ಸರಿ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.