ಸಾರಾಂಶ
ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸರ್ಕಾರ ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಸಭೆಯಲ್ಲಿ ಚರ್ಚಿಸದೇ ಇಲ್ಲ ಸಲ್ಲದ ವಿಷಯಗಳಿಗಾಗಿ ಕಿತ್ತಾಟದಲ್ಲಿ ನಿರತರಾಗಿ ರೈತಾಪಿ ವರ್ಗವನ್ನು ಸಂಕಷ್ಟಕ್ಕೀಡು ಮಾಡಿದ್ದಾರೆ
ರೋಣ: ರಾಜ್ಯದ ಜನತೆ ಹಾಗೂ ರೈತರ ಸಮಸ್ಯೆಗಳತ್ತ ಗಮನ ಹರಿಸಿ ಸ್ಪಂದಿಸುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವೈಫಲ್ಯ ಕಂಡಿದೆ. ಕೇವಲ ಭರವಸೆಯಲ್ಲಿಯೇ ಕಾಲ ಕಳೆಯುತ್ತಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಕ್ತುಂಸಾಬ್ ಮುಧೋಳ ಆಕ್ರೋಶ ವ್ಯಕ್ತಪಡಿಸಿದರು.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉತ್ತರ ಕರ್ನಾಟಕದ್ಯಂತ ಉಂಟಾದ ಅತಿವೃಷ್ಟಿಯಿಂದ ರೈತರು ಬೆಳೆದ ಬೆಳೆಗಳು ಸಂಪೂರ್ಣ ಹಾಳಾಗಿದ್ದು, ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸರ್ಕಾರ ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಸಭೆಯಲ್ಲಿ ಚರ್ಚಿಸದೇ ಇಲ್ಲ ಸಲ್ಲದ ವಿಷಯಗಳಿಗಾಗಿ ಕಿತ್ತಾಟದಲ್ಲಿ ನಿರತರಾಗಿ ರೈತಾಪಿ ವರ್ಗವನ್ನು ಸಂಕಷ್ಟಕ್ಕೀಡು ಮಾಡಿದ್ದಾರೆ. ರಾಜ್ಯ ಸರ್ಕಾರ ಜನರ ಪರ ಕೆಲಸ ಮಾಡುತ್ತಿಲ್ಲ. ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ತೊಂದರೆಗೀಡಾದ ಬಗ್ಗೆ ಈಗಾಗಲೇ ಪಕ್ಷದ ಪ್ರಮುಖರಿಗೆ ವರದಿ ನೀಡಿದ್ದು, ಮುಂದಿನ ದಿನಗಳಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಜೆಡಿಎಸ್ ಸಂಘಟನೆಗೆ ಈಗಾಗಲೇ ವ್ಯಾಪಕ ತಯಾರಿಗಳು ನಡೆದಿದ್ದು, ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಜಿಪಂ ಮತ್ತು ತಾಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸದೆ ಅಧಿಕಾರ ವಿಕೇಂದ್ರೀಕರಣಕ್ಕೆ ಅಡೆತಡೆ ಉಂಟು ಮಾಡುತ್ತಿರುವುದು ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಜಾತ್ಯತೀತ ಜನತಾದಳ ರೋಣ ತಾಲೂಕು ಘಟಕದ ನೂತನ ಅಧ್ಯಕ್ಷ ಜಿ.ಬಿ. ಹನುಮನಾಳ ಮಾತನಾಡಿ, ಅತಿವೃಷ್ಟಿಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು ರೈತರು ಸಾಲದ ಸುಳಿಗೆ ಸಿಲುಕಿಕೊಂಡಿದ್ದಾರೆ ಇಂತಹ ಸಂದರ್ಭದಲ್ಲಿ ರೈತರ ಹಿತ ಕಾಪಾಡಬೇಕಿದ್ದ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ ಧೋರಣೆ ತೋರುತ್ತಿದ್ದು ರೈತರು ಹಾಗೂ ಜನಸಾಮಾನ್ಯರ ಕಷ್ಟಗಳಿಗೆ ಜಾತ್ಯತೀತ ಜನತಾದಳ ಹಿಂದಿನಿಂದಲೂ ಸ್ಪಂದಿಸುತ್ತಾ ಬಂದಿದ್ದು ಪಕ್ಷ ಸಂಘಟನೆಯ ಮೂಲಕ ಮುಂದಿನ ದಿನಮಾನಗಳಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವಲ್ಲಿ ಕಾರ್ಯಕರ್ತರು ಶ್ರಮಿಸಲಿದ್ದಾರೆ ಎಂದರು.ಸುದ್ದಿಗೋಷ್ಠಿಗೂ ಮೊದಲು ಜೆಡಿಎಸ್ ರೋಣ ತಾಲೂಕು ನೂತನ ಘಟಕದ ಅಧ್ಯಕ್ಷರಾಗಿ ನೇಮಕಗೊಂಡ ವಕೀಲ ಜಿ.ಬಿ. ಹನಮನಾಳ ಅವರಿಗೆ ನೇಮಕ ಆದೇಶಪತ್ರ ವಿತರಿಸಲಾಯಿತು.ಈ ವೇಳೆ ಗದಗ ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಚ್.ಎಚ್.ಕೊಪ್ಪಳ, ಉಪಾಧ್ಯಕ್ಷ ಗಿರೀಶ ಸಂಶಿ, ನಿಂಗಪ್ಪ ಪ್ಯಾಟಿ, ಕೆ.ಎಫ್.ದೊಡ್ಡಮನಿ, ದೇವಪ್ಪ ಮಲಕಸಮುದ್ರ, ಸಂಗಪ್ಪ ಯಲಬುನಚಿ, ಎಂ.ಎಂ. ಜಾವೂರ, ರಮೇಶ ಹುಣಸಿಮರದ ಸೇರಿದಂತೆ ಇತರರು ಇದ್ದರು.