ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕೆಆರ್ ಎಸ್ ಅಣೆಕಟ್ಟೆಯಿಂದ ಸ್ಥಳೀಯ ನಾಲೆಗಳ ಮೂಲಕ ನೀರು ಹರಿಸದೆ ಬೆಳೆಗಳನ್ನು ಒಣಗಿಸಿದ ಸರ್ಕಾರ ರೈತರಿಗೆ ಸೂಕ್ತ ಪರಿಹಾರವನ್ನಾದರೂ ನೀಡಬೇಕು ಎಂದು ಭೂಮಿತಾಯಿ ಹೋರಾಟ ಸಮಿತಿ ಕಾರ್ಯಕರ್ತರು ತಹಸೀಲ್ದಾರ್ ರನ್ನು ಒತ್ತಾಯಿಸಿದರು.ಸಮಿತಿ ಹಿರಿಯ ಹೋರಾಟಗಾರ ಕೆ.ಎಸ್‍ ನಂಜುಂಡೇಗೌಡ ನೇತೃತ್ವದಲ್ಲಿ ಸಮಿತಿ ಅಧ್ಯಕ್ಷ ಬಿ.ಸಿ. ಕೃಷ್ಣೇಗೌಡ ಸೇರಿದಂತೆ ಇತರೆ ಕಾರ್ಯಕರ್ತರು ತಾಲೂಕು ಕಚೇರಿ ಮುತ್ತಿಗೆ ಹಾಕಿ, ಜಿಲ್ಲೆಯಲ್ಲಿ ಒಣಗಿರುವ ವಿವಿಧ ಬೆಳೆಗಳಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಕೆ.ಎಸ್‍ ನಂಜುಂಡೇಗೌಡ ಮಾತನಾಡಿ, ಅಣೆಕಟ್ಟೆ ವ್ಯಾಪ್ತಿ ಲಕ್ಷಾಂತರ ಎಕರೆ ಭೂಮಿಯಲ್ಲಿ ಕಬ್ಬು, ಬಾಳೆ, ಅಡಿಕೆ ಹಾಗೂ ತೆಂಗಿನ ಬೆಳೆಗಳು ಬೆಳೆದಿದ್ದು, ಈ ಬೆಳೆಗೆ ನಿಗದಿತ ಸಮಯದಲ್ಲಿ, ಅಣೆಕಟ್ಟೆಯಲ್ಲಿ ನೀರಿದ್ದರೂ ಸಹ ನಾಲೆಗಳ ಮೂಲಕ ನೀರು ಕೊಡದೆ ಕಟಾವಿಗೆ ಬಂದ ಬೆಳೆಗಳು ಒಣಗಿ ರೈತರಿಗೆ ನಷ್ಟ ಉಂಟಾಗಿದೆ ಎಂದರು.

ರೈತರು ನೀರು ಹರಿಸಿ ಎಂದು ಹೋರಾಟಗಳನ್ನು ಮಾಡಿದರೂ ನೀರು ಬಿಡದೆ ಇದೀಗ ನೀರಾವರಿ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳದೆ ಮೌನವಾದ ಕಾರಣ ಬೆಳೆದ ಬೆಳೆಗಳು ಒಣಗಲು ಕಾರಣವಾಗಿದೆ. ರಾಜ್ಯದ ಆಡಳಿತದಲ್ಲಿ ಉತ್ತಮ ಆಡಳಿತ ವ್ಯವಸ್ಥೆ, ಆಡಳಿತಗಾರರಿದ್ದರೂ ರೈತರಿಗೆ ತೊಂದರೆಯಾಗಿದೆ ಎಂದು ದೂರಿದರು.

ಸಮಿತಿ ಅಧ್ಯಕ್ಷ ಬಿ.ಸಿ. ಕೃಷ್ಣೇಗೌಡ ಮಾತನಾಡಿ, ರೈತರೇ ಬೀದಿಗೆ ಇಳಿದು ನೀರಿಗಾಗಿ ಹೋರಾಟ ಮಾಡಿದಾಗ ಅನಿವಾರ್ಯ ಸ್ಥಿತಿಯಲ್ಲಿ ಕಾಲ ಮಿಂಚಿಹೋದ ಮೇಲೆ ನೀರು ಬಿಡುಗಡೆಯಾಗಿದೆ. ಕೂಡಲೇ ಒಣಗಿರುವ ಬೆಳೆ ನಷ್ಟವನ್ನು ಅಂದಾಜಿಸಿ ರೈತರಿಗೆ ಪರಿಹಾರ ಕೊಡಿಸಬೇಕು ಎಂದು ತಹಸೀಲ್ದಾರ್ ಚೇತನ ಅವರಿಗೆ ಮನವಿ ಸಲ್ಲಿಸಿದರು.


ಈ ವೇಳೆ ಸಮಿತಿ ಮುಖಂಡರಾದ ಉಂಡವಾಡಿ ಮಹದೇವು, ಕೃಷ್ಣ ಮಹದೇವಪುರ, ರಾಮಚಂದ್ರ, ಮಂಜುನಾಥ, ಜವರೇಗೌಡ, ಶ್ರೀನಿವಾಸ್‍ ಸೇರಿ ಇತರರು ಇದ್ದರು.