ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಜಾಸ್ತಿಯಾಗಿದೆ. ಈ ಗುಂಪುಗಾರಿಕೆಯಿಂದಲೇ ಸರ್ಕಾರ ಬಿದ್ದು ಹೋಗಲಿದೆ. ನಾವು ಏನೂ ಆಪರೇಷನ್ ಮಾಡುವ ಅವಶ್ಯಕತೆಯೇ ಬರಲ್ಲ ಎಂದರು.
ಲೋಕಸಭೆ ಚುನಾವಣೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟೆ ಕೊಡುತ್ತಾರೆ. ಇದಕ್ಕೆ ಗುಬ್ಬಿ ಶಾಸಕರ ಬಹಿರಂಗ ಹೇಳಿಕೆಯೇ ಸಾಕ್ಷಿ. ಅಧಿಕಾರಕ್ಕಾಗಿ ಕಾಂಗ್ರೆಸ್‌ನಲ್ಲೇ ಕಿತ್ತಾಟ ಬಲುಜೋರಾಗಿ ನಡೆದಿದೆ. ಕೆಲವು ದಿನಗಳ ಹಿಂದೆಯಷ್ಟೇ ದಲಿತ ಸಿಎಂ ಕೂಗು ಕೇಳಿ ಬಂದಿತ್ತು. ಅನಂತರ ನಾಲ್ಕು ಡಿಸಿಎಂ ಮಾಡಬೇಕೆಂಬುದು ಮುನ್ನೆಲೆಗೆ ಬಂದಿತ್ತು. ಈಗ ಸಿಎಂ ಬದಲಾವಣೆ ವಿಚಾರ ಜೋರಾಗಿ ಚರ್ಚೆ ಆಗುತ್ತಿದೆ ಎಂದರು.2014ರಲ್ಲೂ ಸಿದ್ದರಾಮಯ್ಯ ಸಿಎಂ ಆಗಿದ್ದರು. ಆಗ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಕಡಿಮೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಆ ವೇಳೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ದರಾ? ಇದೆಲ್ಲವನ್ನು ನೋಡಿದಾಗ ಚುನಾವಣೆ ನಂತರ ರಾಜ್ಯ ಸರ್ಕಾರ ಪತನವಾಗುವುದು ಖಚಿತ ಎಂದು ನುಡಿದರು.
ಆದರೆ ವಿನಾಕಾರಣ ಬಿಜೆಪಿಯ ಮೇಲೆ ಗೂಬೆ ಕೂರಿಸುವ ಕೆಲಸ ನಡೆದಿದೆ. ಕಾಂಗ್ರೆಸ್ ಶಾಸಕರಿಗೆ ₹50 ಕೋಟಿ ಆಮಿಷ ಒಡ್ಡಿರುವುದು ಹಸಿ ಸುಳ್ಳು. ಇದನ್ನು ಶಾಮನೂರು ಶಿವಶಂಕರಪ್ಪ ಅವರೇ ಸ್ಪಷ್ಟಪಡಿಸಿದ್ದಾರೆ ಎಂದರು.ಸಿದ್ದರಾಮಯ್ಯ ಸರ್ಕಾರ ಬೀಳಿಸಲು ಕಾಂಗ್ರೆಸ್‌ನಲ್ಲೇ ಒಳತಂತ್ರ ರೂಪಿಸಲಾಗುತ್ತಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಹಸಿ ಹಸಿ ಸುಳ್ಳು ಹೇಳುತ್ತಿದ್ದಾರೆ ಎಂದರು.
ರಾಜಕೀಯ ಸ್ಟಂಟ್:ಬರ ಪರಿಹಾರಕ್ಕಾಗಿ ಸುಪ್ರೀಂಕೋರ್ಟ್ ಮೊರೆ ಹೋಗಿರುವುದು ರಾಜಕೀಯ ಸ್ಟಂಟ್ ಅಷ್ಟೇ. ಚುನಾವಣೆ ಸಮಯದಲ್ಲಿ ಜನರ ಗಮನವನ್ನು ಬೇರೆ ಕಡೆ ಸೆಳೆಯಲು ತಂತ್ರ ಮಾಡುತ್ತಿದೆ. ಅನುದಾನ ಬಂದಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ಹೋಗಿದ್ದು ಇತಿಹಾಸದಲ್ಲೇ ಮೊದಲು. ಅನುದಾನದ ಕುರಿತು ಚರ್ಚಿಸಲು ಬೇರೆ ಬೇರೆ ವೇದಿಕೆಗಳಿವೆ. ಲೋಕಸಭಾ ಮತ್ತು ರಾಜ್ಯಸಭೆಯಲ್ಲಿ ಚರ್ಚಿಸಬಹುದಿತ್ತು. ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರೇ ವಿರೋಧ ಪಕ್ಷದ ನಾಯಕರು. ಆದರೆ ಅಲ್ಲಿ ಚರ್ಚಿಸುತ್ತಿಲ್ಲ. ಕೆಲವೊಮ್ಮೆ ಕೇಂದ್ರ ಸರ್ಕಾರದ ಅನುದಾನ ವಿಳಂಬ ಆಗಿರುತ್ತದೆ. ರಾಜ್ಯ ಸರ್ಕಾರ ತನ್ನ ಬಳಿ ಇದ್ದ ಹಣ ಖರ್ಚು ಮಾಡಿದ ಉದಾಹರಣೆ ಇದೆ. ಮೋದಿ ಅವರ ಮೇಲೆ ಅಪ್ರಚಾರ ಮಾಡುವುದು ಅಕ್ಷಮ್ಯ ಅಪರಾಧ ಎಂದರು.
ಬೆಳಗಾವಿ ಟಿಕೆಟ್ ನನಗೆ: ಶೆಟ್ಟರ್ಹುಬ್ಬಳ್ಳಿ: ಬೆಳಗಾವಿ ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಕಗ್ಗಂಟಿಲ್ಲ. ಇಂದು ಅಥವಾ ನಾಳೆ ಟಿಕೆಟ್ ಘೋಷಣೆಯಾಗಲಿದೆ. ನನಗೆ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಹಲವು ನಾಯಕರು ನನಗೆ ಈಗಾಗಲೇ ಆಹ್ವಾನ ನೀಡುತ್ತಿದ್ದಾರೆ. ಅವರ ಜತೆಗೆ ನಾನೂ ಸಂಪರ್ಕದಲ್ಲಿದ್ದೇನೆ. ನನಗೆ ಯಾವುದೇ ವಿರೋಧವೂ ಇಲ್ಲ ಎಂದರು.ಕಾಂಗ್ರೆಸ್ ಗ್ಯಾರಂಟಿ ಲೋಕಸಭೆ ಚುನಾವಣೆಯಲ್ಲಿ ವರ್ಕೌಟ್ ಆಗಲ್ಲ. ಏನಿದ್ದರೂ ಪ್ರಧಾನಿ ಮೋದಿ ನೋಡಿ ಜನ ಮತ ಹಾಕುತ್ತಾರೆ. ಗ್ಯಾರಂಟಿ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಆರು ಮಹಿಳೆಯರಿಗೆ ಟಿಕೆಟ್ ನೀಡಿದೆ. ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಮಹಿಳೆಯರಿಗೆ ನ್ಯಾಯ ಒದಗಿಸಿದ್ದು ಬಿಜೆಪಿ. ಮಹಿಳಾ ಮೀಸಲಾತಿ ಜಾರಿಗೆ ತರುತ್ತಿರುವುದು ಮೋದಿ ಎಂದರು.
ಧಾರವಾಡ ಲೋಕಸಭಾ ಕ್ಷೇತ್ರದಿಂದ ದಿಂಗಾಲೇಶ್ವರ ಶ್ರೀಗಳು ಸ್ಪರ್ಧೆ ಮಾಡುವುದು ನನಗೆ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಬಂದ ಸುದ್ದಿಯನ್ನು ಗಮನಿಸಿದ್ದೇನೆ ಅಷ್ಟೇ ಎಂದರು.