ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಲೋಕಸಭಾ ಚುನಾವಣೆ ಮುಗಿದ ಕೆಲವೇ ತಿಂಗಳಲ್ಲಿ ಹಾಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರದಲ್ಲಿರುವುದಿಲ್ಲ. ಕಾಯ್ದು ನೋಡಿ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹೇಳಿದರು.ನಗರದ ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಗೃಹ ಕಚೇರಿಗೆ ಬುಧವಾರ ಭೇಟಿ ನೀಡಿ, ಜೆಡಿಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಆ ಕಾರಣಕ್ಕಾಗಿಯೇ ಜೆಡಿಎಸ್ ವರಿಷ್ಠ ಎಚ್.ಡಿ. ಕುಮಾರಸ್ವಾಮಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದು ತಿಳಿಸಿದರು.
ಮಾಜಿ ಪ್ರಧಾನಿ ದೇವೇಗೌಡರಿಗೆ ವಯಸ್ಸಾಗಿದ್ದರೂ ಅವರಲ್ಲಿನ ಹಠ, ಛಲ ಕಡಿಮೆಯಾಗಿಲ್ಲ. ಅವರು ಇಂದು ಕೇಂದ್ರದಲ್ಲಿ ನರೇಂದ್ರಮೋದಿಯನ್ನು ಹಾಗೂ ಬಿಜೆಪಿ ಸರ್ಕಾರ ಬೆಂಬಲಿಸುತ್ತಿದ್ದಾರೆ ಎಂದರೆ ದೇಶವನ್ನು ಅಭಿವೃದ್ಧಿ ಪಥದತ್ತ ಸಾಗಿಸುತ್ತಿ ರುವ ರೀತಿ ಅವರಿಗಿಷ್ಟವಾಗಿದೆ. ಮೋದಿಯವರ ಕೈಯಲ್ಲಿ ದೇಶ ಅತ್ಯಂತ ಸುರಕ್ಷಿತ ಹಾಗೂ ಮುಂದೆ ಭವ್ಯ ಭಾರತದ ಹಿತದೃಷ್ಟಿಯಿಂದ ಅವರನ್ನು ಬೆಂಬಲಿಸುತ್ತಿದ್ದಾರೆ ಎಂದು ತಿಳಿಸಿದರು.ನಾನು ಈಗಾಗಲೇ ತುಮಕೂರಿನಲ್ಲಿ ಮನೆ ಮಾಡಿದ್ದು, ಗೆದ್ದ ನಂತರ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಪ್ರತಿ ತಿಂಗಳಲ್ಲಿ ಎರಡು ದಿನ ತಂಗಿ ಅಲ್ಲಿನ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತೇನೆ. ಇನ್ನು ಕೆಲವೇ ದಿನಗಳಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಜೊತೆಗೂಡಿ ಕೆಲಸ ಮಾಡಲು ಪ್ರಾರಂಭಿಸಲಿದ್ದು, ಇದಕ್ಕಾಗಿ ಸಮನ್ವಯ ಸಮಿತಿಯನ್ನೂ ರಚಿಸುವುದಾಗಿ ತಿಳಿಸಿದರು.
ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಮಾತನಾಡಿ, ನಾನೂ ಕೂಡ ತುಮಕೂರು ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ವತಿಯಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದೆ. ಆದರೆ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರಿಂದ ಮೈತ್ರಿ ಸೂತ್ರದ ಅನುಸಾರ ಈ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡಲಾಗಿದೆ. ಏನೇ ವ್ಯತ್ಯಾಸವಿದ್ದರೂ ಅದನ್ನು ಸರಿದೂಗಿಸಿಕೊಂಡು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಗೆಲುವಿಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು.ತುಮಕೂರು ಜಿಲ್ಲೆ ಅದರಲ್ಲೂ ತಿಪಟೂರು ತಾಲೂಕು ತೆಂಗು ಬೆಳೆ ಆಶ್ರಿತ ಪ್ರದೇಶವಾಗಿದ್ದು, ಕೊಬ್ಬರಿಗೆ ಬೆಲೆ ಬಿದ್ದುಹೋಗಿರು ವುದರಿಂದ ಇಲ್ಲಿನ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಸೋಮಣ್ಣನವರು ತೆಂಗಿಗೆ ಉತ್ತಮ ಬೆಲೆ ದೊರಕಿಸಿಕೊಡುವ ನಿಟ್ಟಿನಲ್ಲಿ ಶ್ರಮ ವಹಿಸಿ ಕೆಲಸ ಮಾಡಬೇಕು. ಹಾಗೂ ಜಿಲ್ಲೆಯ ನೀರಾವರಿ ಕೆಲಸಗಳಿಗೆ ಆದ್ಯತೆ ಕೊಡಬೇಕು ಎಂದು ಮನವಿ ಮಾಡಿದರು.ಸಭೆಯ ನಂತರ ಅಭ್ಯರ್ಥಿ ವಿ. ಸೋಮಣ್ಣನವರು ಪತ್ರಕರ್ತರು ಸ್ಥಳೀಯ ಸಮಸ್ಯೆಗಳನ್ನಿಟ್ಟುಕೊಂಡು ಪ್ರಶ್ನೆ ಕೇಳುತ್ತಿದ್ದರೆ, ಯಾವ ಪ್ರಶ್ನೆಗಳನ್ನೂ ಸೀರಿಯಸ್ ಆಗಿ ಕೇಳಿಸಿಕೊಳ್ಳದೆ ಉಡಾಫೆಯಾಗಿ ವರ್ತಿಸಿದ್ದರಿಂದ, ಪತ್ರಕರ್ತರು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಿದ್ದನ್ನು ಗಮನಿಸಿದ ಅವರು ಯಾವ ಪ್ರಶ್ನೆಗಳಿಗೂ ಉತ್ತರಿಸದೆ ಜಾಗ ಮಾಡಿದರು.
ಸಭೆಯಲ್ಲಿ ಸಂಸದ ಜಿ.ಎಸ್.ಬಸವರಾಜು, ಜೆಡಿಎಸ್ ಮುಖಂಡರಾದ ಶಿವಸ್ವಾಮಿ, ರಮೇಶ್, ನಟರಾಜು ಹಾಗೂ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಉಪಸ್ಥಿತರಿದ್ದರು.