ಹಳೇ ಪಿಂಚಣಿ ಯೋಜನೆಗೆ ರಾಜ್ಯ ಸರ್ಕಾರ ನಿರ್ಧಾರ

| Published : Jan 17 2024, 01:48 AM IST

ಸಾರಾಂಶ

ರಾಜ್ಯ ಸರ್ಕಾರ ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ತರಲು ಗ್ರೀನ್‌ ಸಿಗ್ನಲ್‌ ನೀಡಿದ್ದು, ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಶೀಘ್ರದಲ್ಲೇ ತೀರ್ಮಾನ ತೆಗೆದುಕೊಳ್ಳಲಾಗುವುದು ಆದರೆ, ಸರ್ಕಾರಿ ನೌಕರರಿಗೆ ಜಾರಿಗೆ ಬರುವಂತೆ ಅನುದಾನಿತ ಖಾಸಗಿ, ಅರೆ ಸರ್ಕಾರಿ ಸ್ವಾಯತ್ತತೆ ಹೊಂದಿರುವ ಸರ್ಕಾರಿ ನೌಕರರಿಗೂ ಈ ಯೋಜನೆಯೂ ವಿಸ್ತಾರವಾಗಬೇಕಿದೆ ಎಂದು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್‌ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ತರಲು ರಾಜ್ಯ ಸರ್ಕಾರ ಗ್ರೀನ್‌ ಸಿಗ್ನಲ್‌ ನೀಡಿದ್ದು, ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಶೀಘ್ರದಲ್ಲೇ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್‌ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮುಂದಿನ ಆಯವ್ಯಯ ಬಜೆಟ್‍ನಲ್ಲಿಯೂ ಚರ್ಚಿಸಲಾಗುತ್ತಿದೆ. ಇದು ಅತ್ಯಂತ ಸ್ವಾಗತದ ವಿಷಯ. ಆದರೆ, ಸರ್ಕಾರಿ ನೌಕರರಿಗೆ ಜಾರಿಗೆ ಬರುವಂತೆ ಅನುದಾನಿತ ಖಾಸಗಿ, ಅರೆ ಸರ್ಕಾರಿ ಸ್ವಾಯತ್ತತೆ ಹೊಂದಿರುವ ಸರ್ಕಾರಿ ನೌಕರರಿಗೂ ಈ ಯೋಜನೆಯೂ ವಿಸ್ತಾರವಾಗಬೇಕಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಣಯವನ್ನು ತೆಗೆದುಕೊಂಡಿದೆ. ಅದೇನೆಂದರೆ, 2005ರಲ್ಲಿ ನೋಟೀಪೀಕೇಷನ್ ಆಗಿ, ಪಟ್ಟಿಯೂ ರೆಡಿ ಇದ್ದು, 2006ರಲ್ಲಿ ನೌಕರಿ ನೀಡಿದ್ದರೆ ಅಂಥವರಿತೂ ಹಳೇ ಪಿಂಚಣಿ ವ್ಯವಸ್ಥೆ ಜಾರಿಯಾಗಲಿದೆ. ಈ ಅನುಕೂಲ ಅನುದಾನಿತ ಶಾಲೆ ನೌಕರರು ಕೂಡ ಪಡೆಯಬೇಕು ಎಂದರು.

ರಾಜ್ಯ ಸರ್ಕಾರ ಹಳೆ ಪಿಂಚಣಿ ವ್ಯವಸ್ಥೆ ಮತ್ತೆ ಜಾರಿಗೆ ತರುವ ಇಂಗಿತ ವ್ಯಕ್ತಪಡಿಸಿದೆ. ಹೊಸ ಪಿಂಚಣಿ ವ್ಯವಸ್ಥೆ ರದ್ದಾಗಲಿದೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಶೀಘ್ರದಲ್ಲೇ ತೀರ್ಮಾನ ತೆಗೆದುಕೊಳ್ಳಲಾಗುವುದು. ಏಕೆಂದರೆ, ಅನುದಾನ ಪಡೆಯುವ ಮೊದಲು ಹಲವು ವರ್ಷಗಳ ತನಕ ಅಲ್ಲಿ ಕೆಲಸ ಮಾಡಿದ್ದಾರೆ. ಹಾಗಾಗಿ, ಇವರಿಗೂ ಒಪಿಎಸ್ ಜಾರಿಯಾಗಬೇಕು. ಸುಮಾರು 11500 ನೌಕರರಿಗೆ ಇದರಿಂದ ಪ್ರಯೋಜನ ಆಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ವೈ.ಹೆಚ್.ನಾಗರಾಜ್, ಪ್ರಮುಖರಾದ ಧೀರರಾಜ್ ಹೊನ್ನವಿಲೆ, ಶಿ.ಜು.ಪಾಶ, ಹಿರಣ್ಣಯ್ಯ, ಲಕ್ಷ್ಮಣ್ಣಪ್ಪ, ಎಸ್.ಪಿ.ಪಾಟೀಲ್, ಕೃಷ್ಣ ಇದ್ದರು.

- - - ಬಾಕ್ಸ್‌-1 ಟಿಕೆಟ್‌ ಸಿಗುವ ವಿಶ್ವಾಸವಿದ್ದು, ಇಂದಿನಿಂದಲೇ ಕ್ಷೇತ್ರದಲ್ಲಿ ಪ್ರವಾಸ ಕಾರ್ಮಿಕರ ಪರವಾಗಿ ಹೋರಾಟ ಮಾಡಿಕೊಂಡು ಬಂದಿರುವ ನಾನು ಅನ್ಯಾಯ ಕಂಡುಬಂದಾಗ ಯಾವುದೇ ಸರ್ಕಾರ ಇದ್ದರೂ ಸದನದಲ್ಲಿ ಕಾರ್ಮಿಕರ ಪರ ಗಟ್ಟಿಧ್ವನಿ ಎತ್ತಿದ್ದೇನೆ. ಈ ಬಾರಿ ನೈರುತ್ಯ ಪದವೀಧರ ಕ್ಷೇತ್ರದಿಂದ ನನಗೆ ಟಿಕೆಟ್ ಸಿಗುವ ನಿರೀಕ್ಷೆ ಇದ್ದು, ಅದಕ್ಕಾಗಿ ಇಂದಿನಿಂದಲೇ ಕ್ಷೇತ್ರದಲ್ಲಿ ಪ್ರವಾಸ ಮಾಡುವೇ ಎಂದು ಆಯನೂರು ಮಂಜುನಾಥ್ ಹೇಳಿದರು.

ತಾವು ಹಲವು ವರ್ಷಗಳಿಂದ ಕಾಲೇಜು ಅತಿಥಿ ಉಪನ್ಯಾಸಕರ ಕಾರ್ಮಿಕರ ಸಮಸ್ಯೆಗಳನ್ನು ಇಟ್ಟುಕೊಂಡು ಯಾವುದೇ ಸರ್ಕಾರವಿದ್ದರೂ ಹೋರಾಟ ನಡೆಸುತ್ತ ಬಂದಿದ್ದೇನೆ. ಸದನದಲ್ಲಿ ಗಟ್ಟಿ ಧ್ವನಿ ಎತ್ತಿದ್ದೇನೆ. ನೈರುತ್ಯ ಪದವೀಧರ ಕ್ಷೇತ್ರದಿಂದ ನನಗೆ ಟಿಕೆಟ್ ಸಿಗುತ್ತದೆ ಎಂಬ ಭರವಸೆ ಇದೆ. ರಾಜ್ಯದ ನಾಯಕರು ಈ ಸೂಚನೆ ನೀಡಿದ್ದಾರೆ. ಕ್ಷೇತ್ರದಲ್ಲಿ ಓಡಾಡುವಂತೆ ಸಲಹೆ ಕೊಟ್ಟಿದ್ದಾರೆ. ಅದರಂತೆ ನಾಳೆಯಿಂದಲೇ ಕ್ಷೇತ್ರದಲ್ಲಿ ಓಡಾಡುತ್ತೇನೆ. ಕಳೆದ 42 ವರ್ಷಗಳಿಂದ ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿಲ್ಲ. ಈ ಬಾರಿ ಗೆದ್ದು ತೋರಿಸುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

- - -

ಬಾಕ್ಸ್‌-2 ಹೆಗಡೆ ನನ್ನ ಗೆಳೆಯ, ಕ್ಷಮೆ ಕೇಳಲಿ

ಸಿಎಂ ಸಿದ್ದರಾಮಯ್ಯ ಅವರನ್ನು ಕುರಿತು ಅನಂತ್‍ಕುಮಾರ್ ಹೆಗಡೆ ಮಾತನಾಡಿರುವುದು ಸರಿಯಲ್ಲ. ಯಾರೇ ಆಗಲಿ, ಯಾವ ಪಕ್ಷದವರೇ ಆಗಲಿ, ಮಾತಿನಲ್ಲಿ ಹಿಡಿತ ಇಟ್ಟುಕೊಳ್ಳಬೇಕು ಎಂದು ಆಯನೂರು ಮಂಜುನಾಥ ಹೇಳಿದರು.

ಸಾರ್ವಜನಿಕರ ವೇದಿಕೆಯಲ್ಲಿ ಮಾತನಾಡುವಾಗ ಪ್ರಜ್ಞೆ ಬಹಳ ಮುಖ್ಯ, ಇದು ಯಾರು ಮಾಡಿದರೂ ತಪ್ಪೇ. ಇತ್ತೀಚೆಗೆ ಶಿವಮೊಗ್ಗದ ಶಾಸಕರು ಕೂಡ, ಬಾರೋ ಮಗನೆ ನೋಡಿಕೊಳ್ಳುತ್ತೇನೆ ಎಂದು ಮಾತನಾಡಿದ್ದರು. ಇದು ಸರಿಯಲ್ಲ. ಅನಂತ್‍ಕುಮಾರ್ ಹೆಗಡೆ ನನ್ನ ಗೆಳೆಯರು. ಅವರು ಕ್ಷಮೆ ಕೇಳಿ ಇದನ್ನು ಮುಗಿಸಬೇಕು. ಬಿಜೆಪಿ ನಾಯಕರು ದೇವಸ್ಥಾನವನ್ನು ಸ್ವಚ್ಛ ಮಾಡಿದರೆ ಮಾತ್ರ ಸಾಲದು, ಅವರ ಮನಸ್ಸನ್ನು ಕೂಡ ಸ್ವಚ್ಛಗೊಳಿಸಬೇಕು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್‌ ಹೇಳಿದರು.

- - - -16ಎಸ್‌ಎಂಜಿಕೆಪಿ04: ಆಯನೂರು ಮಂಜುನಾಥ್‌