ಒಳ ಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ವಿಳಂಬ

| Published : Aug 01 2025, 11:45 PM IST

ಸಾರಾಂಶ

ಒಳ ಮೀಸಲಾತಿ ಜಾರಿ ಮಾಡದ ರಾಜ್ಯ ಸರ್ಕಾರದ ವಿಳಂಬ ನೀತಿಯನ್ನು ಖಂಡಿಸಿ ಶುಕ್ರವಾರ ನಗರದ ಟಿಬಿ ವೃತ್ತದ ಬಳಿ ಇರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯ ಬಳಿ ಒಂದು ದಿನದ ಸಾಂಕೇತಿಕ ಧರಣಿ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಹಿರಿಯೂರು

ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಪರವಾದ ತೀರ್ಪು ಕೊಟ್ಟು ಒಂದು ವರ್ಷವಾದರೂ ಒಳ ಮೀಸಲಾತಿ ಜಾರಿ ಮಾಡದ ರಾಜ್ಯ ಸರ್ಕಾರದ ವಿಳಂಬ ನೀತಿಯನ್ನು ಖಂಡಿಸಿ ಶುಕ್ರವಾರ ನಗರದ ಟಿಬಿ ವೃತ್ತದ ಬಳಿ ಇರುವ ಡಾ ಬಿ.ಆರ್ ಅಂಬೇಡ್ಕರ್ ಪ್ರತಿಮೆಯ ಬಳಿ ಒಂದು ದಿನದ ಸಾಂಕೇತಿಕ ಧರಣಿ ನಡೆಸಲಾಯಿತು.

ಧರಣಿ ನಿರತರನ್ನು ಉದ್ದೇಶಿಸಿ ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ.ರಾಮಚಂದ್ರ ಮಾತನಾಡಿ, ಮೂರು ದಶಕಗಳ ಕನಸಾಗಿರುವ ಒಳ ಮೀಸಲಾತಿ ಜಾರಿಯನ್ನು ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ. ಚುನಾವಣೆಯಲ್ಲಿ ಮಾತ್ರ ಮಾದಿಗ ಜನಾಂಗದ ಮತಗಳು ಬೇಕಾಗಿದೆ ಇವರಿಗೆ. ಮಾದಿಗರಿಗೆ ಸಾಮಾಜಿಕ ನ್ಯಾಯ ಕೊಡಿ ಎಂದು ಕೇಳಿ ಕೇಳಿ ಬೇಸತ್ತು ಹೋಗಿದ್ದೇವೆ. ಇದೇ ತಿಂಗಳ 4ನೇ ತಾರೀಕಿನಂದು ನಾಗಮೋಹನ್ ದಾಸ್ ಅವರು ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ. ವರದಿ ಬಂದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವುದೇ ತಾರತಮ್ಯ ಮಾಡದೆ ವರದಿಯನ್ನು ಪರಿಶೀಲಿಸಿ ತಳ ಸಮುದಾಯದ ನಮಗೆ ನ್ಯಾಯ ಕೊಡಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಮಹಾನಾಯಕ ದಲಿತ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಕೆ.ಪಿ.ಶ್ರೀನಿವಾಸ್ ಮಾತನಾಡಿ, ಕೇವಲ ಮಾದಿಗರಿಗೆ ಅಂತಲ್ಲ. ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಕಲ್ಪಿಸಿ ಎಂದು ಕೇಳುತ್ತಿದ್ದೇವೆ. ಸರ್ಕಾರಿ ಉದ್ಯೋಗ, ರಾಜಕೀಯ ಅಧಿಕಾರ ಭೋವಿ, ಲಂಬಾಣಿ ಜನಾಂಗಕ್ಕೆ ಹೆಚ್ಚಿನದಾಗಿ ಹೋಗುತ್ತಿದೆ. ಮೀಸಲಾತಿ ಅವಶ್ಯವಿರುವ ಮಾದಿಗ, ಹೊಲೆಯ ಜನಾಂಗಕ್ಕೆ ಅನ್ಯಾಯವಾಗುತ್ತಿದೆ. ಒಳ ಮೀಸಲಾತಿ ಸಂವಿಧಾನ ಬದ್ದ ಹಕ್ಕು ಎಂದು ನ್ಯಾಯಾಲಯವೇ ಹೇಳಿದೆ. ಆದರೆ ಇಲ್ಲಿಯವರೆಗೂ ಜಾರಿಗೊಳಿಸದೇ ಮೀನಾ ಮೇಷ ಎಣಿಸಲಾಗುತ್ತಿದೆ. ಒಳ ಮೀಸಲಾತಿ ಜಾರಿಯಾಗದಿದ್ದರೆ ಆಂಧ್ರ ಮಾದರಿ ಹೋರಾಟ ಹಮ್ಮಿಕೊಳ್ಳಲಾಗುತ್ತದೆ. ರಾಜಕೀಯ ಕ್ರಾಂತಿಗಳು ಸಂಭವಿಸಲಿವೆ ಎಂದು ಎಚ್ಚರಿಸಿದರು.

ಈ ವೇಳೆ ರಾಜ್ಯ ಸಂಘಟನಾ ಕಾರ್ಯದರ್ಶಿ ರವಿ ಘಾಟ್,ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ಜಿಲ್ಲಾ ಕಾರ್ಯದರ್ಶಿ ಹನುಮಂತರಾಯ ಬ್ಯಾಡರಹಳ್ಳಿ,ಜಗದೀಶ್, ಮಹಾಲಿಂಗಪ್ಪ,ಮಾನವ ಬಂಧುತ್ವ ವೇದಿಕೆಯ ಸಂಚಾಲಕ ಮಾರುತೇಶ್ ಕೂನಿಕೆರೆ,ಎ.ಆರ್ ,ಧನಂಜಯ, ಪ್ರದೀಪ್ ಮಹಾಂತೇಶ್,ಗಿರೀಶ್,ಕೃಷ್ಣಮೂರ್ತಿ,ದೇವೇಗೌಡ, ದಲಿತ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಕಣುಮೇಶ್, ಓಂಕಾರ್ ಮಟ್ಟಿ,ಕೇಶವಮೂರ್ತಿ, ರಘು, ಕದುರಪ್ಪ, ಬೆಳ್ಳಿ, ವೀರಭದ್ರ, ಹನುಮಂತರಾಯ, ರಾಘವೇಂದ್ರ ಆರ್, ಲಕ್ಷ್ಮಣ್ ರಾವ್, ಶಿವರಾಜಕುಮಾರ್, ಓಂಕಾರಪ್ಪ ಹೊಸಳ್ಳಿ, ವೀರೇಂದ್ರ ಮುಂತಾದವರು ಹಾಜರಿದ್ದರು.