ಸಾರಾಂಶ
ಹೊಸಪೇಟೆ: ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಹದಗೆಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ ಮೇಲೆ ಹಗರಣಗಳ ಆರೋಪ ಇದೆ. ಈ ಸರ್ಕಾರಕ್ಕೆ ಹೆಚ್ಚಿನ ಆಯುಷ್ಯ ಇಲ್ಲ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ವಿರೋಧ ಪಕ್ಷದ ಮುಖಂಡರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಬಿಜೆಪಿ ಶಾಸಕ ಮುನಿರತ್ನ ಅವರನ್ನು ತರಾತುರಿಯಲ್ಲಿ ಬಂಧನ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡಿದೆ ಎಂದು ಜಾತಿ ನಿಂದನೆ ಪ್ರಕರಣದಲ್ಲಿ ಅರೆಸ್ಟ್ ಮಾಡಲಾಗಿದೆ. ಎಫ್‌ಎಸ್‌ಎಲ್ ವರದಿ ತರಿಸಿಕೊಳ್ಳದೇ ತರಾತುರಿಯಲ್ಲಿ ಎಫ್‌ಐಆರ್ ದಾಖಲಿಸಿ, ಬಂಧನ ಮಾಡಲಾಗಿದೆ. ಆದರೆ, ಯಾದಗಿರಿಯಲ್ಲಿ ಪಿಎಸ್‌ಐ ಪರಶುರಾಮ ಅವರು ಮೃತಪಟ್ಟ ಪ್ರಕರಣದಲ್ಲಿ ಶಾಸಕ ಚೆನ್ನಾರೆಡ್ಡಿ ಹಾಗೂ ಅವರ ಪುತ್ರನ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೂ ಬಂಧನ ಮಾಡಲಾಗಿಲ್ಲ. ನಾಗಮಂಗಲದಲ್ಲೂ ಹಿಂದೂಗಳ ಅಂಗಡಿಗಳನ್ನು ಟಾರ್ಗೆಟ್ ಮಾಡಿ ಗಲಾಟೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಕೇರಳ, ಪಶ್ಚಿಮ ಬಂಗಾಳ ಮೂಲದವರು ಭಾಗಿಯಾಗಿದ್ದಾರೆ. ಇನ್ನೂ ದಲಿತರ ಮೇಲೂ ದೌರ್ಜನ್ಯ ನಡೆಯುತ್ತಿದೆ. ಹಾಗಾಗಿ ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿದೆ ಎಂದು ದೂರಿದರು.ಕಲ್ಯಾಣ ಕರ್ನಾಟಕ ಭಾಗಕ್ಕೆ ರಾಜ್ಯ ಸರ್ಕಾರ ಏನೂ ಕೊಡುಗೆ ನೀಡಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿ ಮೂಲದವರು ಎಂದು ಸಚಿವ ಸಂಪುಟ ಸಭೆ ನಡೆಸಲಾಗಿದೆ. ಆದರೆ, ಸರ್ಕಾರದ ಬಳಿ ಹಣವೇ ಇಲ್ಲ. ಹಾಗಾಗಿ ವಿಜಯನಗರ ಜಿಲ್ಲೆ ಸೇರಿದಂತೆ ಸಮಗ್ರ ಕಲ್ಯಾಣ ಕರ್ನಾಟಕಕ್ಕೆ ಅನುದಾನ ನೀಡಲು ಆಗಿಲ್ಲ ಎಂದು ಆರೋಪಿಸಿದರು.
ರಾಜ್ಯ ಸರ್ಕಾರಕ್ಕೆ ಬಹಳ ದಿನಗಳ ಆಯುಷ್ಯ ಇಲ್ಲ. ಕೇವಲ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸಿಎಂ ಮತ್ತವರ ಕುಟುಂಬದ ಮೇಲೆ ಹಲವು ಆರೋಪಗಳು ಇವೆ. ನ್ಯಾಯಾಲಯದ ತೀರ್ಪು ಬರಬೇಕಿದೆ. ಹಲವರು ಸಿಎಂ ಕುರ್ಚಿ ಮೇಲೆ ಕಣ್ಣು ಹಾಕಿದ್ದಾರೆ ಎಂದರು.ಗ್ಯಾರಂಟಿಗೆ ಪರಿಶಿಷ್ಟರ ಅನುದಾನ: ರಾಜ್ಯ ಕಾಂಗ್ರೆಸ್ ಸರ್ಕಾರ ಕೇವಲ ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಗೊಂದಲ ಮೂಡಿಸುತ್ತಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಹಣ ದುರ್ಬಳಕೆ ಮಾಡಲಾಗುತ್ತಿದೆ. ₹20 ಸಾವಿರ ಕೋಟಿ ಗ್ಯಾರಂಟಿಗಳಿಗೆ ವಿನಿಯೋಗ ಮಾಡಲಾಗಿದೆ. ದಲಿತರ ಉದ್ಧಾರಕ್ಕೆ ಹಣ ಇಲ್ಲದಂತಾಗಿದೆ. ವಾಲ್ಮೀಕಿ ನಿಗಮ ಹಗರಣದಲ್ಲಿ ₹187 ಕೋಟಿ ಪರಿಶಿಷ್ಟ ಪಂಗಡದವರ ಹಣ, ನೇರವಾಗಿ ಬೇರೆ, ಬೇರೆಯವರ ಖಾತೆಗೆ ಹೋಗಿದೆ ಎಂದು ದೂರಿದರು.
ರಾಜ್ಯದಲ್ಲಿ ಅರಣ್ಯ ಭೂಮಿಯನ್ನು ಸಚಿವ ಈಶ್ವರ್ ಖಂಡ್ರೆ ಸಂಬಂಧಿಕರಿಗೆ ಹಂಚಿಕೆ ಮಾಡಲಾಗಿದೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಮೇಲೂ ಆರೋಪ ಇದೆ. ಅರಣ್ಯ ಜಮೀನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.ಮಾಜಿ ಸಚಿವ ನಾಗೇಂದ್ರ ಹಾಗೂ ಶಾಸಕ ದದ್ದಲ್ ಅವರ ಹೆಸರನ್ನು ವಾಲ್ಮೀಕಿ ನಿಗಮ ಹಗರಣದಲ್ಲಿ ಎಸ್‌ಐಟಿ ಹೆಸರು ಕೈಬಿಟ್ಟಿದೆ. ಆದರೆ, ಇಡಿ ಚಾರ್ಜ್‌ಶೀಟ್‌ನಲ್ಲಿ ಇವರ ಹೆಸರಿದೆ. ರಾಜ್ಯ ಸರ್ಕಾರದ ಸಂಸ್ಥೆಗಳಿಂದ ಕ್ಲೀನ್ ಚೀಟ್ ಕೊಡಿಸಲಾಗುತ್ತಿದೆ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಮುಖಂಡರಾದ ಅಯ್ಯಾಳಿ ತಿಮ್ಮಪ್ಪ, ಕೆ.ಎಸ್. ರಾಘವೇಂದ್ರ, ರೇವಣಸಿದ್ದಪ್ಪ, ಶಂಕರ ಮೇಟಿ, ಜಯಪ್ರಕಾಶ, ಕಿಚಿಡಿ ಕೊಟ್ರೇಶ್ ಮತ್ತಿತರರಿದ್ದರು.