ಸಾರಾಂಶ
ಶಿವಮೊಗ್ಗ : ರಾಜ್ಯ ಸರ್ಕಾರಿ ನೌಕರರ ಬಹುದಿನದ ಬೇಡಿಕೆಯಾದ ಹಳೆ ಪಿಂಚಣಿ ಯೋಜನೆಯನ್ನು (ಓಪಿಎಸ್) ಆದಷ್ಟು ಬೇಗ ಅನುಷ್ಠಾನಗೊಳಿಸುವ ನಿರ್ಧಾರವನ್ನು ಪ್ರಕಟಿಸಲು ಸರ್ಕಾರ ಬದ್ಧವಾಗಿದೆ ಎಂದು ಸಚಿವ ಎಸ್.ಮಧು ಬಂಗಾರಪ್ಪ ತಿಳಿಸಿದ್ದಾರೆ.
ನಗರದ ನೆಹರು ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರದ ಕಾನೂನು, ಯೋಜನೆಗಳನ್ನು ಅನುಷ್ಠಾನಗೊಳಿಸುವ ಸರ್ಕಾರಿ ನೌಕಕರು ಆರೋಗ್ಯದಿಂದ, ಚೈತನ್ಯದಿಂದ ಇರಬೇಕು. ಇದಕ್ಕೆ ಇಂತಹ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಕಾರಿಯಾಗಿವೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಎನ್‌ಪಿಎಸ್ ಬದಲು ಒಪಿಸ್ ಜಾರಿಗೊಳಿಸುವ ಬಗ್ಗೆ ಶೀಘ್ರದಲ್ಲೇ ಸಿಎಂ ಹಾಗೂ ಡಿಸಿಎಂ ನಿರ್ಧಾರ ಪ್ರಕಟಿಸುವರು. 6ನೇ ವೇತನ ಮತ್ತು 7ನೇ ವೇತನ ಆಯೋಗವನ್ನು ಸಿಎಂ ಜಾರಿಗೊಳಿಸಿರುವುದು ಹೆಮ್ಮೆಯ ವಿಷಯ ಎಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಮಾಜಿ ಸಿಎಂ ಯಡಿಯೂರಪ್ಪ ಅವರು ನೌಕರರ ಪರವಾಗಿ ಸುಮಾರು 24 ಆದೇಶ ಜಾರಿ ಮಾಡಿದ್ದರು. ನೌಕರರು ಒತ್ತಡ ರಹಿತರಾಗಿ ಉತ್ತಮ ಸೇವೆ ನೀಡಬೇಕು. ಇ-ಆಡಳಿತ ನಂ.1 ಸ್ಥಾನ ಪಡೆಯಲು ನೌಕರರು ಕಾರಣ ಎಂದು ಶ್ಲಾಘಿಸಿದರು.
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಸರ್ಕಾರಿ ನೌಕರರು ಆರೋಗ್ಯ ದೃಷ್ಟಿಯಿಂದ ಕ್ರೀಡಾಕೂಟ ಮಾಡುತ್ತಿದ್ದು, ಇದಕ್ಕೆ ಸರ್ಕಾರ ₹3 ಕೋಟಿ ಅನುದಾನ ನೀಡುವ ಭರವಸೆ ನೀಡಿದೆ. ಸಂಘಟನೆ ಸದೃಢವಾಗಿದ್ದು, ಪ್ರಸ್ತುತ ₹25 ಕೋಟಿ ಹಣವಿದೆ. ಕಳೆದ 5 ವರ್ಷದಲ್ಲಿ 25 ಆದೇಶವಾಗಿದ್ದು, ನೌಕರರು ಸಂಘದ ಮೇಲೆ ನಂಬಿಕೆ, ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಚೇತನ್ ಮಾತನಾಡಿ, ರಾಜ್ಯದಲ್ಲಿ 5.5 ಲಕ್ಷ ಜನ ರಾಜ್ಯ ಸರ್ಕಾರಿ ನೌಕರರಿದ್ದು, 11 ಸಾವಿರ ಜನರು ರಾಜ್ಯ ಮಟ್ಟದ ಕ್ರೀಡಾ, ಸಾಂಸ್ಕೃತಿಕ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇಲ್ಲಿ ಜಯ ಗಳಿಸಿದವರು ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಲಿದ್ದಾರೆ ಎಂದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಸಕರಾದ ಬೇಳೂರು ಗೋಪಾಲಕೃಷ್ಣ, ಆರಗ ಜ್ಞಾನೇಂದ್ರ, ಬಿ.ಕೆ.ಸಂಗಮೇಶ್, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಭಾರತಿ ಶೆಟ್ಟಿ, ಬಲ್ಕೀಶ್ ಬಾನು ಮಾತನಾಡಿದರು.
ಕರ್ತವ್ಯನಿರತ ನೌಕರರು ಮೃತಪಟ್ಟರೆ ₹1 ಕೋಟಿ
ರಾಜ್ಯ ಸರ್ಕಾರ 7ನೇ ವೇತನ ಜಾರಿ ಮಾಡಿರುವುದಕ್ಕೆ ಅಭಿನಂದನೆಗಳು. ಜೂನ್‌ನಿಂದ ನೌಕರರಿಗೆ ಉಚಿತ ಚಿಕಿತ್ಸೆ ನೀಡುವ ಯೋಜನೆ ಜಾರಿಗೆ ಬರಲಿದೆ. ಕರ್ತವ್ಯದಲ್ಲಿ ಇದ್ದಾಗ ನೌಕರರು ಮೃತಪಟ್ಟರೆ ₹1 ಕೋಟಿ ಕುಟುಂಬಕ್ಕೆ ನೀಡುವ ಯೋಜನೆಯನ್ನು ಸಂಘದಿಂದ ಜಾರಿ ಮಾಡಲಾಗುತ್ತಿದೆ. ಎಂದು ಸಿ.ಎಸ್.ಷಡಾಕ್ಷರಿ ತಿಳಿಸಿದರು.