ಹುಬ್ಬಳ್ಳಿ:
ದೇವಸ್ಥಾನ ನಿರ್ವಹಣೆ ಹಾಗೂ ಅಭಿವೃದ್ಧಿಪಡಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹಾಗಾಗಿ ದತ್ತಿ ಇಲಾಖೆ ಅಧೀನದಲ್ಲಿರುವ ಎಲ್ಲ ದೇವಸ್ಥಾನಗಳನ್ನು ಟ್ರಸ್ಟ್‌ಗಳಿಗೆ ಹಸ್ತಾಂತರಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ್ ಗೌಡ ಒತ್ತಾಯಿಸಿದರು.ಕರ್ನಾಟಕ ಮಂದಿರ ಮಹಾಸಂಘ ಹಾಗೂ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಭಾನುವಾರ ನಗರದಲ್ಲಿ ಆಯೋಜಿಸಿದ್ದ ದೇವಾಲಯ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜ್ಯದಲ್ಲಿ 34 ಸಾವಿರ, ತಮಿಳುನಾಡಿನಲ್ಲಿ 44 ಸಾವಿರ, ಕೇರಳದಲ್ಲಿ 3 ಸಾವಿರ, ಆಂಧ್ರಪ್ರದೇಶದಲ್ಲಿ 24 ಸಾವಿರ ಹಾಗೂ ತೆಲಂಗಾಣದಲ್ಲಿ 12 ಸಾವಿರ ದೇವಸ್ಥಾನಗಳಿವೆ. ಇವುಗಳಲ್ಲಿ ಹಲವಾರು ದೇವಸ್ಥಾನಗಳು ಸರ್ಕಾರದ ನಿಯಂತ್ರಣದಲ್ಲಿದ್ದು, ಸಮರ್ಪಕವಾಗಿ ಅಭಿವೃದ್ಧಿಪಡಿಸಿ ಭಕ್ತರನ್ನು ಆಕರ್ಷಿಸಿದರೆ ಪ್ರವಾಸೋದ್ಯಮ ವೃದ್ಧಿಯಾಗುತ್ತದೆ. ಆದರೆ, ಸರ್ಕಾರ ದೇವಸ್ಥಾನ ನಿರ್ವಹಿಸುವಲ್ಲಿ ವಿಫಲವಾಗಿದೆ. ದೇಶದ ಪ್ರವಾಸೋದ್ಯಮದ ಆದಾಯದಲ್ಲಿ ಶೇ. 65ರಷ್ಟು ಪಾಲು ಆಧ್ಯಾತ್ಮಿಕ ಪ್ರವಾಸೋದ್ಯಮದ್ದೇ ಆಗಿರುವುದರಿಂದ, ದೇವಸ್ಥಾನಗಳ ಅಭಿವೃದ್ಧಿಗೆ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.ಅಯೋಧ್ಯೆ ರಾಮಮಂದಿರ ನಿರ್ಮಾಣವಾದ ನಂತರ ಅಲ್ಲಿಯಷ್ಟೇ ಅಲ್ಲ, ಉತ್ತರ ಪ್ರದೇಶದ ಇತರ ಭಾಗಗಳಲ್ಲಿಯೂ ಮೂಲಸೌಕರ್ಯ ಅಭಿವೃದ್ಧಿ ಹೊಂದಿದೆ. ಇದು ಪ್ರವಾಸೋದ್ಯಮದ ಅಭಿವೃದ್ಧಿಗೆ ಕಾರಣವಾಗಿ, ಆದಾಯವು ಹೆಚ್ಚಳವಾಗಲು ಅನುಕೂಲವಾಗಿದೆ ಎಂದರು.
ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿ, ಕೆಲವು ಮಠಗಳು ಸಮಾಜ ಸುಧಾರಣೆಯಲ್ಲಿ ತೊಡಗಿಸಿಕೊಂಡಿವೆ. ಆದರೆ, ಕೆಲವು ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಆಸಕ್ತಿ ವಹಿಸುತ್ತಿರುವುದರಿಂದ ಸಮಾಜ ಪರಿವರ್ತನೆಗೆ ಕೊಡುಗೆ ನೀಡುತ್ತಿಲ್ಲ. ಮಠಗಳು ಮತ್ತು ದೇವಸ್ಥಾನಗಳು ಸಾಮಾಜಿಕ ಶಕ್ತಿ ಕೇಂದ್ರಗಳಾಗಬೇಕು ಎಂದು ಹೇಳಿದರು.
ಸಿದ್ಧಾರೂಢ ಮಠ ಟ್ರಸ್ಟ್ ಸಮಿತಿ ಮಾಜಿ ಅಧ್ಯಕ್ಷ ಚನ್ನವೀರ ಮುಂಗರವಾಡಿ, ಶಿರಸಂಗಿ ಕಾಳಿಕಾದೇವಿ ದೇವಸ್ಥಾನದ ಪ್ರಧಾನ ಅರ್ಚಕ ಇಂದ್ರಾಚಾರ್ಯ, ವಿನಾಯಕ ಅಕಲವಾಡಿ ಸೇರಿದಂತೆ ಹಲವರಿದ್ದರು.