ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಷ್ಟ್ರದಲ್ಲಿ ಜಾರಿಗೆ ತಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ರದ್ದುಗೊಳಿಸಿದೆ ಹೀಗಾಗಿ ರಾಜ್ಯ ಸರ್ಕಾರ ಮೆಕಾಲೆ ಶಿಕ್ಷಣ ಪದ್ಧತಿಗೆ ಜೋತು ಬಿದ್ದಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.ಅವರು ನಗರದ ಸಿದ್ದಾರೂಢ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಲಾದ ಈಶಾನ್ಯ ಪದವೀಧರರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, 2016-17ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ರಾಜ್ಯದಲ್ಲಿ ಜಾರಿಗೆ ತರುವುದಕ್ಕೆ ಆಡಳಿತಾತ್ಮಕ ಅನುನೋದನೆ ನೀಡಿದ್ದರು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಈಗ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಬಲವಾಗಿ ವಿರೋಧಿಸುತಿದ್ದಾರೆ.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ರದ್ದುಗೊಳಿಸಿರುವ ರಾಜ್ಯ ಸರ್ಕಾರ ರಾಜ್ಯ ಶಿಕ್ಷಣ ನೀತಿ ಕೂಡ ಕ್ರಮಬದ್ಧವಾಗಿ ಅನುಷ್ಠಾನಕ್ಕೆ ತಂದಿಲ್ಲ ಬೊಮ್ಮಾಯಿ ನುಡಿದರು.ಗ್ರೇಸ್ ಮಾರ್ಕ್ಸ್ ಸರ್ಕಾರ:ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಶೇ.30`ಗ್ರೇಸ್ ಮಾರ್ಕ್ಸ್'''''''' ನೀಡುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಉತ್ತೀರ್ಣರಾಗುವುದು ಬಹಳ ಸುಲಭವಾಗಿದೆ. ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ಕೇವಲ ಶೇ.5ರಷ್ಟು ಅಂಕಗಳನ್ನು ಪಡೆದರು ಕೂಡ ಇದಕ್ಕೆ ಶೇ.30 ಗ್ರೇಸ್ ಮಾರ್ಕ್ಸ್ ಜೋಡಣೆಯಾಗಿ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದಾರೆ. ಇದರಿಂದಾಗಿ ಶಿಕ್ಷಣದ ಗುಣಮಟ್ಟ ಕುಸಿದಿದೆ.
ರಾಜ್ಯ ಸರ್ಕಾರವನ್ನು ಗ್ರೇಸ್ ಮಾರ್ಕ್ಸ್ ಸರ್ಕಾರ ಎಂದು ಲೇವಡಿ ಮಾಡಿದಲ್ಲದೆ ರಾಜ್ಯದಲ್ಲಿನ ಸರ್ಕಾರಿ ಶಾಲೆಗಳ ಒಟ್ಟು 27 ಸಾವಿರ ಕೊಠಡಿಗಳ ದುರಸ್ತಿಗಾಗಿ ನಾನು ಮುಖ್ಯಮಂತ್ರಿಯಾಗಿದ್ದಾಗ ವಿವೇಕ ಯೋಜನೆಯಡಿ ಜಾರಿಗೆ ತಂದು 7,000ಕ್ಕೂ ಹೆಚ್ಚು ಶಾಲಾ ಕೊಠಡಿ ರಿಪೇರಿ ಮಾಡಿಸಿದ್ದೇವೆ ಎಂದರು.ಸದನದಲ್ಲಿ ಶಿಕ್ಷಣದ ವಿಷಯ ಪ್ರಸ್ತಾಪಿಸಲು ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಪರ ಮೊದಲ ಪ್ರಾಶಸ್ತ್ಯ ಮತ ನೀಡಿ ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದ ಅವರು, ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್, ಶಾಸಕ ಡಾ.ಸಿದ್ದು ಪಾಟೀಲ್, ಎಂಎಲ್‌ಸಿ ರಘುನಾಥ ರಾವ್ ಮಲ್ಕಾಪುರೆ, ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ವಿಭಾಗೀಯ ಪ್ರಮುಖರಾದ ಈಶ್ವರಸಿಂಗ ಠಾಕೂರ, ಮಾಜಿ ಶಾಸಕ ಎಂ.ಜಿ.ಮುಳೆ, ಬುಡಾ ಮಾಜಿ ಅಧ್ಯಕ್ಷ ಬಾಬು ವಾಲಿ, ಬಿಜೆಪಿ ನಗರ ಅಧ್ಯಕ್ಷ ಶಶೀಧರ್ ಹೊಸಳ್ಳಿ ಸೇರಿದಂತೆ ಇನ್ನಿತರರು ಇದ್ದರು.