ಅಭಿವೃದ್ಧಿ ಕೆಲಸಗಳಲ್ಲಿ ರಾಜ್ಯ ಸರ್ಕಾರ ಫೇಲ್‌: ಸಂಸದ ರಮೇಶ ಜಿಗಜಿಣಗಿ

| Published : Apr 22 2025, 01:45 AM IST

ಸಾರಾಂಶ

ಸರ್ಕಾರ ಸಂಪೂರ್ಣವಾಗಿ ಫೇಲ್ ಆಗಿದೆ. ಅಭಿವೃದ್ಧಿ ಕೆಲಸ‌ ಮಾಡಲಾಗದೆ ಸಿಎಂ ಅವರೇ ಹಣೆ ಹಣೆ ಚಚ್ಚಿಕೊಳ್ತಿದ್ದಾರೆ. ಕಾಂಗ್ರೆಸ್ ಶಾಸಕರು ಬಾರಿ ಬಾಯಿ ಬಡ್ಕೊಳ್ತಿದಾರೆ. ಹಳ್ಳಿಗಳಲ್ಲಿನ ರಸ್ತೆಗಳಲ್ಲಿ ಎಮ್ಮೆಗಳು ಸಹ ತಿರುಗಾಡದಂತಾಗಿದೆ. ಅಂತಹ ರಸ್ತೆಗಳಲ್ಲಿ ಜನರು ಓಡಾಡಲು ಆಗುತ್ತಿಲ್ಲ. ಹೀಗಾಗಿಯೇ ನಾವು ಕಾಂಗ್ರೆಸ್ ಸರ್ಕಾರದ ಭಷ್ಟಾಚಾರದ ವಿರುದ್ಧ ಹೋರಾಟ ಮಾಡಿದ್ದೇವೆ. ಇದುವರೆಗೂ ನಡೆದ ಜನಾಕ್ರೋಶ ಕಾರ್ಯಕ್ರಮಗಳಲ್ಲಿ ವಿಜಯಪುರದಲ್ಲೇ ನಂಬರ್ ಒನ್ ಆಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜನಾಕ್ರೋಶ ಸಭೆಯಲ್ಲಿ ನಿರೀಕ್ಷೆ ಮಾಡದಷ್ಟು ಜನರು ಪಾಲ್ಗೊಂಡಿದ್ದರು. ರಾಜ್ಯಾಧ್ಯಕ್ಷರ ನೇತೃತ್ವದ ಹೋರಾಟಕ್ಕೆ ಪೂರಕವಾದ ಸಭೆ ಮಾಡಿದ್ದಾರೆ. ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ಸರ್ಕಾರ ಸಂಪೂರ್ಣವಾಗಿ ಫೇಲ್ ಆಗಿದೆ. ಅಭಿವೃದ್ಧಿ ಕೆಲಸ‌ ಮಾಡಲಾಗದೆ ಸಿಎಂ ಅವರೇ ಹಣೆ ಹಣೆ ಚಚ್ಚಿಕೊಳ್ತಿದ್ದಾರೆ. ಕಾಂಗ್ರೆಸ್ ಶಾಸಕರು ಬಾರಿ ಬಾಯಿ ಬಡ್ಕೊಳ್ತಿದಾರೆ. ಹಳ್ಳಿಗಳಲ್ಲಿನ ರಸ್ತೆಗಳಲ್ಲಿ ಎಮ್ಮೆಗಳು ಸಹ ತಿರುಗಾಡದಂತಾಗಿದೆ. ಅಂತಹ ರಸ್ತೆಗಳಲ್ಲಿ ಜನರು ಓಡಾಡಲು ಆಗುತ್ತಿಲ್ಲ. ಹೀಗಾಗಿಯೇ ನಾವು ಕಾಂಗ್ರೆಸ್ ಸರ್ಕಾರದ ಭಷ್ಟಾಚಾರದ ವಿರುದ್ಧ ಹೋರಾಟ ಮಾಡಿದ್ದೇವೆ. ಇದುವರೆಗೂ ನಡೆದ ಜನಾಕ್ರೋಶ ಕಾರ್ಯಕ್ರಮಗಳಲ್ಲಿ ವಿಜಯಪುರದಲ್ಲೇ ನಂಬರ್ ಒನ್ ಆಗಿದೆ ಎಂದು ರಾಜ್ಯಾಧ್ಯಕ್ಷರೇ ಹೇಳಿದ್ದಾರೆ, ಇದಕ್ಕಿಂದ ಇನ್ನೇನು ಬೇಕು ಎಂದು ತಿಳಿಸಿದರು.

ಶಾಸಕ ಯತ್ನಾಳ ಹಿರಿಯರಿಗೆ ಕೇವಲವಾಗಿ ಮಾತನಾಡುವ ವಿಚಾರದ ಬಗ್ಗೆ ಮಾತನಾಡಿ, ರಾಜಕಾರಣದಲ್ಲಿ ಯಾವಾಗಲೂ ಬೈದಿರುವ ವ್ಯಕ್ತಿ ದೊಡ್ಡವನಾಗಲ್ಲ, ಬೈಸಿಕೊಂಡವನು ಮಾತ್ರ ಬೆಳೆಯುತ್ತಾನೆ. ನನ್ನ ಹಿಂದೆ ಹಣವಿದೆ. ಜಾತಿಇದೆ ಎಂದು ಹೋದರೆ ಆಗೋದಿಲ್ಲ. ವ್ಯಕ್ತಿಗಿಂತ ಪಕ್ಷ ದೊಡ್ಡದು ಎನ್ನುವುದನ್ನು ಅರಿಯಬೇಕು ಎಂದು ಎಚ್ಚರಿಸಿದರು.

ಕಾಂಗ್ರೆಸ್ ವಿರುದ್ಧ ಹರಿಹಾಯ್ದು, ಕಾಂಗ್ರೆಸ್ ನಲ್ಲಿರುವ ನಾಯಕರ ಭಾವನೆ ಹಿಂದುತ್ವದ ವಿರೋಧಿಯಾಗಿದೆ. ಪರೀಕ್ಷೆಗೆ ಉಡದಾರ ಬಿಚ್ಚಿ ಬಾ, ಜನಿವಾರ ಬಿಚ್ಚಿ ಬಾ ಎಂದು ಯಾರಾದರೂ ಹೇಳ್ತಾರಾ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಜಾರಿ ಮಾಡಬೇಕೆಂದು ಆಗ್ರಹ ವಿಚಾರದ ಕುರಿತು ಪ್ರತಿಕ್ರಿಯಿಸಿ, ಸದಾಶಿವ ಆಯೋಗ ಒಳ ಮೀಸಲಾತಿ ಜಾರಿಯಾಗಬೇಕೆಂದು 2011ರಲ್ಲಿ ವರದಿ ಸಲ್ಲಿಸಿದೆ. 2015- 16ರಲ್ಲಿ ಕಾಂತರಾಜ್ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಹಾಗಾದರೆ ಮೊದಲು ಸಲ್ಲಿಕೆಯಾದ ವರದಿ ಯಾವುದು ಎಂದು ಪ್ರಶ್ನಿಸಿದರು.

ಮೊದಲು ಸಲ್ಲಿಕೆಯಾದ ವರದಿ ಜಾರಿ ಯಾಕೆ ಮಾಡಲಿಲ್ಲ ಸಿದ್ದರಾಮಯ್ಯ ಎಂದು ಪ್ರಶ್ನೆ ಮಾಡಿದ ಅವರು, ಒಂದೆಡೆ ಅಹಿಂದ ನಾಯಕನೆಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಒಳ ಮೀಸಲಾತಿ ಜಾರಿ ಮಾಡದ ಕಾರಣ ದಲಿತರು ಯಾಕೆ ಸಿದ್ಧರಾಮಯ್ಯನ ಹಿಂದೆ ಹೋಗಬೇಕು? 1983ರಲ್ಲಿ ಒಳ ಮೀಸಲಾತಿ ಆಗಬೇಕೆಂದು ಒತ್ತಾಯ ಮಾಡಿದವನೇ ನಾನು, ಇದು ಯಾರಿಗೂ ವಿಷಯ ಗೊತ್ತಿಲ್ಲ. ಒಳ ಮೀಸಲಾತಿ ಜಾರಿ ಆಗಲೇಬೇಕು. ಇಲ್ಲದಿದ್ದರೆ ನಿಮ್ಮನ್ನು ಬಿಡಲ್ಲ ಎಂದು ಎಚ್ಚರಿಕೆ ನೀಡಿದರು. ಮುಂದೆ ನಮ್ಮ ಸರ್ಕಾರ ಬರಲಿ ಏನು ಮಾಡುತ್ತೇವೆ ಎಂದು ತೋರಿಸುತ್ತೇವೆ . ಒಳ ಮೀಸಲಾತಿಗಾಗಿ ಹೋರಾಟ ಮಾಡಿ ಎಷ್ಟೋ ಜನ ಪ್ರಾಣಬಿಟ್ಟರು, ಒಳ ಮೀಸಲಾತಿ ಜಾರಿ ಮಾಡಬೇಕು ಜಾರಿಯಾಗಲೇಬೇಕು, ಜಾರಿ ಮಾಡುವವರಿಗೂ ಬಿಡಲ್ಲ ಎಂದು ಖಡಕ್ಕಾಗಿ ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಭ್ರಷ್ಟ ಕಾಂಗ್ರೆಸ್ ವಿರುದ್ಧ ಏಪ್ರಿಲ್ 17ರಂದು ವಿಜಯಪುರದಲ್ಲಿ ನಡೆದ ಜನಾಕ್ರೋಶ ಯಾತ್ರೆ ಭರ್ಜರಿ ಯಶಸ್ವಿ ಕಂಡಿದೆ. ಇದಕ್ಕೆ ಕಾರಣರಾದ ಜಿಲ್ಲೆಯ ನಾಯಕರು, ಕಾರ್ಯಕರ್ತರು ಹಾಗೂ ಜನಸಾಮಾನ್ಯರು ಸೇರಿದಂತೆ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇವೆ ಎಂದು ಹೇಳಿದರು. ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ಘಟನೆಗೆ ನಮ್ಮ ಖಂಡನೆಯಿದೆ. ಈ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರ ಜನಿವಾರದ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಈ ವಿಚಾರದ ಕುರಿತು ಉತ್ತರಿಸಿದ ಸಿಎಂ ಸಿದ್ಧರಾಮಯ್ಯನವರು ಅಧಿಕಾರಿಗಳು ತಪ್ಪು ಮಾಡಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ. ಆದರೆ ಇದರ ಹಿಂದಿನ ಹಿಡನ್ ಅಜೆಂಡಾ ಬೇರೆಯೇ ಆಗಿದೆ. ಅದಕ್ಕೆ ಕೆಲವು ಅಧಿಕಾರಿಗಳು ಹೀಗೆ ಮಾಡಿ ಸಿದ್ದರಾಮಯ್ಯನವರಿಂದ ಪ್ರಮೋಷನ್ ಗಿಟ್ಟಿಸಿಕೊಳ್ಳಲು ಹಿಂದೂ ವಿರೋಧಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ಹಿಂದೂಗಳ ಮತ ಪಡೆದು ಚುನಾಯಿತರಾದ ನೀವು ಕಾಂಗ್ರೆಸ್ ಪಕ್ಷದಲ್ಲಿ ಇರಬೇಕೋ ಬೇಡವೋ ಎಂಬುದನ್ನು ನಿರ್ಧರಿಸಬೇಕು. ಏಕೆಂದರೆ ಕಾಂಗ್ರೆಸ್ ಪಕ್ಷ ಹಾಗೂ ನೀವು ಹಿಂದೂ ವಿರೋಧಿ ಎಂದು ಒಪ್ಪಿಕೊಳ್ಳಿ. ನೀವು ಹಿಂದೂ ವಿರೋಧಿ ಅಲ್ಲದಿದ್ದರೇ ಪಕ್ಷ ತ್ಯಜಿಸಿ ಹೊರಗೆ ಬನ್ನಿ ಎಂದ ಅವರು, ಇನ್ನು ಬೇರೆ ಬೇರೆ ವಿಚಾರಗಳಿಗೆ ಕಾಂಗ್ರೆಸ್ ಮಂತ್ರಿಗಳು ಅನುದಾನವಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಜನಿವಾರದ ವಿಚಾರದಲ್ಲಿ ಹಿಂದೂಗಳಿಗೆ ಇಂತಹ ಅನ್ಯಾಯವಾದರೂ ಏಕೆ ಬಾಯಿ ಬಿಡುತ್ತಿಲ್ಲ ಎಂದು ಪ್ರಶ್ನಿಸಿದರು.

ವಿಪ ಮಾಜಿ ಸದಸ್ಯ ಅರುಣ ಶಹಾಪುರ ಮಾತನಾಡಿ, ರಾಜ್ಯದಲ್ಲಿ ಹಿಜಾಬ್‌ ವಿಚಾರ ಮತ್ತೆ ಮುನ್ನೆಲೆಗೆ ಬರಬೇಕು. ಅದರ ಕುರಿತು ಚರ್ಚೆ ಮಾಡುವ ಉದ್ದೇಶದಿಂದಲೇ ಸಿಇಟಿ ಪರೀಕ್ಷೆಯಲ್ಲಿ ಜನಿವಾರವನ್ನು ತೆಗೆಸಿರಬೇಕು ಎಂದರು. ಹಿಜಾಬ್ ಹಾಕುವುದರಿಂದ ಯುನಿಫಾರ್ಮ್‌ಗೆ ವ್ಯತಿರಿಕ್ತ ಆಗಲಿದೆ ಎಂದು ಅಂದಿನ ಸರ್ಕಾರ ಹಿಜಾಬ್ ತೆಗೆಸಿತ್ತು. ಆದರೆ ಜನಿವಾರ ಒಳಗೆ ಇರುವುದರಿಂದ ಅದನ್ನು ತೆಗೆಸುವ ಪ್ರಶ್ನೆಯೇ ಬರುವುದಿಲ್ಲ. ಇಂತಹ ಕಾಂಗ್ರೆಸ್ ನೀತಿಯ ಬಗ್ಗೆ ವಿರೋಧವಿದೆ ಎಂದು ಹೇಳಿದರು.

ಈ ವೇಳೆ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಮುಖಂಡರಾದ ಕಾಸುಗೌಡ ಬಿರಾದಾರ, ವಿಜುಗೌಡ ಪಾಟೀಲ, ಚಂದ್ರೇಖರ ಕವಟಗಿ, ಈರಣ್ಣ ರಾವೂರ, ಸಾಬು ಮಾಶ್ಯಾಳ, ವಿಜಯ ಜೋಶಿ ಉಪಸ್ಥಿತರಿದ್ದರು.