ಸಾರಾಂಶ
ರಾಜ್ಯದಲ್ಲಿ ಕಳೆದ ಮಳೆ ವರ್ಷದಲ್ಲಿ ಮುಂಗಾರು ಮತ್ತು ಹಿಂಗಾರು ಮಳೆಗಳು ಸಂಪೂರ್ಣ ಕೈಕೊಟ್ಟಿವೆ.
ಹೊಸಪೇಟೆ: ಕಾಂಗ್ರೆಸ್ ಸರ್ಕಾರ ರಾಜ್ಯದ ಅಭಿವೃದ್ಧಿ ಹಾಗೂ ನಾಡಿನ ರೈತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದ್ದು, ಪ್ರತಿಯೊಂದು ವಿಚಾರಕ್ಕೂ ಕೇಂದ್ರ ಸರ್ಕಾರ ದೂರುವುದು ಸಿಎಂ ಸಿದ್ದರಾಮಯ್ಯಗೆ ಪರಿಪಾಠವಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ ಆರೋಪಿಸಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರ ಪರಿಹಾರ, ಜಿಎಸ್‌ಟಿ ತೆರಿಗೆ ಪಾಲು ಸೇರಿದಂತೆ ಪ್ರತಿಯೊಂದು ವಿಚಾರದಲ್ಲಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲಸವಾಗಿದೆ. ನೈಜವಾಗಿ ರಾಜ್ಯದ ಅಭಿವೃದ್ಧಿ ಮತ್ತು ರೈತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ರಾಜ್ಯದಲ್ಲಿ ಕಳೆದ ಮಳೆ ವರ್ಷದಲ್ಲಿ ಮುಂಗಾರು ಮತ್ತು ಹಿಂಗಾರು ಮಳೆಗಳು ಸಂಪೂರ್ಣ ಕೈಕೊಟ್ಟಿವೆ. ಮುಂಗಾರು ಪರಿಹಾರ ಕೋರಿ ತಕ್ಷಣಕ್ಕೆ ವರದಿ ಸಲ್ಲಿಸದೇ, ಎಫ್ ಐಡಿ ನೋಂದಣಿ ನೆಪದಲ್ಲಿ ಕಾಲಹರಣ ಮಾಡಿದೆ. ಹಿಂಗಾರು ವಿಚಾರದಲ್ಲೂ ರಾಜ್ಯ ಸರ್ಕಾರ ಸಕಾಲಕ್ಕೆ ವರದಿ ಸಲ್ಲಿಸಿಲ್ಲ. ಈಗ ಚುನಾವಣಾ ಸಂದರ್ಭದಲ್ಲಿ ಪರಿಹಾರ ಬಂದಿಲ್ಲವೆಂದು ಜನರಿಗೆ ದಿಕ್ಕು ತಪ್ಪಿಸುತ್ತಿದೆ. ಈ ಬಾರಿ ದೇಶಾದ್ಯಂತ ಬರ ಆವರಿಸಿದ್ದರೂ, ಪರಿಹಾರ ವಿತರಣೆಯಲ್ಲಿ ಕರ್ನಾಟಕಕ್ಕೆ ಮಾತ್ರ ಅನ್ಯಾಯವಾಗಲು ಹೇಗೆ ಸಾಧ್ಯ? ಜಿಎಸ್‌ಟಿ ತೆರಿಗೆ ಪಾಲಿನಲ್ಲೂ ರಾಜ್ಯ ಸರ್ಕಾರ ಹಾದಿ ಬಿದಿಯಲ್ಲಿ ಚರ್ಚೆ ಮಾಡುವುದೇ ಹೆಚ್ಚು ಎಂದು ತರಾಟೆಗೆ ತೆಗೆದುಕೊಂಡರು.ಬರ ನಿರ್ವಹಣೆಗೆ ಸಂಬಂಧಿಸಿ ಜಿಲ್ಲಾ ಮಂತ್ರಿಗಳು ಒಂದೇ ಒಂದು ಸಭೆ ನಡೆಸಿಲ್ಲ. ಜನರ ಜಮೀನುಗಳಿಗೆ ತೆರಳಿ ರೈತರ ನೈಜ ಸ್ಥಿತಿ ಅಧ್ಯಯನ ಮಾಡಿದೇ ಕೇವಲ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುವುದರಲ್ಲೇ ಕಾಲಹರಣ ಮಾಡಿದೆ. ಎಲ್ಲವನ್ನೂ ಕೇಂದ್ರವೇ ಮಾಡುವುದಾದರೆ, ರಾಜ್ಯ ಸರ್ಕಾರದ ಕೆಲವೇನು ಎಂದು ಖಾರವಾಗಿ ಪ್ರಶ್ನಸಿದರು.ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ, ರಾಜ್ಯ ಉಪಾಧ್ಯಕ್ಷ ಗುರುಲಿಂಗನಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಪ್ರಧಾನ ಕಾರ್ಯದರ್ಶಿ ಸಂಜೀವರೆಡ್ಡಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಎಚ್. ರೇವಣ್ಣ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕೊಟ್ರೇಶ್ ಕಿಚಿಡಿ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ. ಶಂಕರಾನಂದ, ಜಿಲ್ಲಾ ಮಾಧ್ಯಮ ಸಂಚಾಲಕ ಬಸವರಾಜ ಕರ್ಕಿಹಳ್ಳಿ, ಅನುರಾಧಾ, ಮಂಡಲ ಅಧ್ಯಕ್ಷ ಶಂಕರ್ ಮೇಟಿ ಉಪಸ್ಥಿತರಿದ್ದರು.