ಸಾರಾಂಶ
ಗ್ಯಾರಂಟಿ ಯೋಜನೆಗಳನ್ನೇ ತಮ್ಮ ಸಾಧನೆ ಅಂದುಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರದಿಂದ ಅಭಿವೃದ್ಧಿ ಕಾರ್ಯಗಳು ರಾಜ್ಯದ ಯಾವ ಮೂಲೆಯಲ್ಲೂ ಆಗುತ್ತಿಲ್ಲ.
ಕುಮಟಾ: ಗ್ಯಾರಂಟಿಗಳಿಂದ ಸಮಸ್ಯೆಯ ಸುಳಿಯಲ್ಲಿ ರಾಜ್ಯ ಸರ್ಕಾರ ಸಿಲುಕಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ರೋಟರಿ ಹಾಲ್‌ನಲ್ಲಿ ಗುರುವಾರ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.ಗ್ಯಾರಂಟಿ ಯೋಜನೆಗಳನ್ನೇ ತಮ್ಮ ಸಾಧನೆ ಅಂದುಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರದಿಂದ ಅಭಿವೃದ್ಧಿ ಕಾರ್ಯಗಳು ರಾಜ್ಯದ ಯಾವ ಮೂಲೆಯಲ್ಲೂ ಆಗುತ್ತಿಲ್ಲ. ಗುತ್ತಿಗೆದಾರರಿಗೆ ಕೊಡಲು ಹಣವಿಲ್ಲ. ಭ್ರಷ್ಟಾಚಾರ, ಲಂಚಾವತಾರದ ಬಗ್ಗೆ ಕಾಂಗ್ರೆಸ್ಸಿಗರೇ ಹೇಳಿಕೊಳ್ಳುವಂತಾಗಿದೆ ಎಂದರು.
ಹೊಸ ಸರ್ಕಾರ ಬಂದ ನಂತರ ಮೊದಲ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರು ಜಿಲ್ಲೆಯ ಯಾವುದೇ ಶಾಲೆಯನ್ನು ರಿಪೇರಿ ಮಾಡುವುದು ಬೇಡ, ಅಂಥ ಶಾಲೆಗಳನ್ನು ಹೊಸದಾಗಿ ಕಟ್ಟಿಸಿಕೊಡುತ್ತೇವೆ ಎಂದಿದ್ದರು. ಒಂದೆಡೆ ಶಾಲೆಗಳ ದುರಸ್ತಿಯೂ ಇಲ್ಲ, ಇನ್ನೊಂದೆಡೆ ಎರಡು ವರ್ಷದ ಬಳಿಕ ಇಡೀ ಜಿಲ್ಲೆಗೆ ಒಂದೇ ಶಾಲೆಗೆ ಮಾತ್ರ ಕಟ್ಟಡ ಮಂಜೂರಾಗಿದೆ ಎಂದರೆ ಪರಿಸ್ಥಿತಿ ಊಹಿಸಬಹುದು. ಹಿಂದೆ ನಮ್ಮ ಬಿಜೆಪಿ ಸರ್ಕಾರ ಇದ್ದಾಗ ರಸ್ತೆಗಳು, ಶಾಲೆ ಕಟ್ಟಡಗಳು, ಮನೆಗಳು, ಸಹಿತ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ಲಭ್ಯವಾಗಿತ್ತು. ಇಂದು ವರ್ಷಕ್ಕೆ ಹತ್ತಾರು ಕೋಟಿಗೂ ತತ್ವಾರವಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಮಂಜೂರು ಮಾಡಿದ್ದ ಯೋಜನೆಗಳ ಅನುಷ್ಠಾನಕ್ಕೂ ಹಣ ಕೊಡುತ್ತಿಲ್ಲ. ವಸತಿ ಯೋಜನೆಯ ಕಂತು ಕೊಡುತ್ತಿಲ್ಲ. ಕೇಂದ್ರದ ಯೋಜನೆಗಳು ಮಾತ್ರ ನೆರವಾಗುತ್ತಿದೆ ಎಂದರು.ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಮಾತನಾಡಿ, ಬಿಜೆಪಿಯ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿದ್ದು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಪಕ್ಷದ ಸಂರಚನೆ ಪ್ರಕ್ರಿಯೆ ಮುಗಿದಿದೆ. ಕಾರ್ಯಕರ್ತರಿಗೆ ಹೆಚ್ಚಿನ ಜವಾಬ್ದಾರಿ ಇದೆ. ಪ್ರಬಲ ವಿರೋಧ ಪಕ್ಷವಾಗಿ ಸರ್ಕಾರದ ವೈಫಲ್ಯತೆ ವಿರುದ್ಧ ನಿರಂತರ ಹೋರಾಟ ಮಾಡಿದ್ದೇವೆ ಎಂದರು.
ಬಳಿಕ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಮಾತನಾಡಿ, ಪ್ರಸ್ತುತ ಕಾಂಗ್ರೆಸ್ ಸರ್ಕಾರದ ವಿಫಲ ನೀತಿಗಳು ಮತ್ತು ಸಾರ್ವಜನಿಕರಿಗೆ ಆಗುತ್ತಿರುವ ನಷ್ಟದ ಕುರಿತು ತೀವ್ರ ನಿರಾಶೆ ವ್ಯಕ್ತಪಡಿಸಿದರು. ಜನವಿರೋಧಿ ಆಡಳಿತವನ್ನು ಖಂಡಿಸಿ, ಬಿಜೆಪಿ ಮಾತ್ರವೇ ಸ್ಥಿರ ಹಾಗೂ ಅಭಿವೃದ್ಧಿಪರ ಆಡಳಿತ ನೀಡಬಲ್ಲದು ಎಂದರು.ಸಭೆಯಲ್ಲಿ ಪಕ್ಷದ ಭವಿಷ್ಯಾತ್ಮಕ ಯೋಜನೆಗಳು, ಸಂಘಟನೆ ಬಲಪಡಿಸುವ ಕ್ರಮಗಳು ಹಾಗೂ ಮುಂಬರುವ ಚುನಾವಣೆಗಳಲ್ಲಿ ವಿಜಯ ಸಾಧಿಸಲು ಕೈಗೊಳ್ಳಬೇಕಾದ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು.
ಮಾಜಿ ಸಚಿವ ಶಿವಾನಂದ ನಾಯ್ಕ ಭಟ್ಕಳ, ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ಈಶ್ವರ ನಾಯ್ಕ, ಜಿಲ್ಲಾ ಹಿಂದುಳಿದ ಮೋರ್ಚಾ ಅಧ್ಯಕ್ಷ ರಾಜೇಂದ್ರ ನಾಯ್ಕ, ಮಾಜಿ ಜಿಲ್ಲಾಧ್ಯಕ್ಷ ಎಂ.ಜಿ.ನಾಯ್ಕ, ರಾಜ್ಯವಕ್ತಾರ ಹರಿಪ್ರಕಾಶ ಕೋಣೆಮನೆ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶಿವಾನಿ ಶಾಂತಾರಾಮ್, ಶಿವಾಜಿ ನರಸಾನಿ, ನಂದನ ಬೋರ್ಕರ್, ಸಂತೋಷ ತಳವಾರ, ಗುರುಪ್ರಸಾದ ಹೆಗಡೆ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರೇಮಕುಮಾರ್, ಜಿಲ್ಲಾ ಕೋರ್ ಕಮಿಟಿ ಸದಸ್ಯ ಆರ್.ಡಿ.ಹೆಗಡೆ ಇನ್ನಿತರರು ಇದ್ದರು. ಸುಬ್ರಾಯ ದೇವಾಡಿಗ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ ನಿರೂಪಿಸಿದರು.