ಬರದಿಂದ ಕಂಗೆಟ್ಟಿರುವ ರೈತರಿಗೆ ವಿಶೇಷ ಅಧಿವೇಶನ ಕರೆದು ಪ್ರತಿ ಕುಟುಂಬಕ್ಕೆ ₹2,500 ನೀಡಲು ಸರ್ಕಾರ ಮುಂದಾಗಿದೆ. ರೈತರು ಒಂದು ದಿನಕ್ಕೆ ₹2,500 ಖರ್ಚು ಮಾಡುತ್ತಾರೆ. ಇಂತಹ ಅಲ್ಪ ಮೊತ್ತವನ್ನು ಪರಿಹಾರವೆಂದು ನೀಡಲು ಸರ್ಕಾರಕ್ಕೆ ಹೇಗೆ ಮನಸ್ಸಾಯಿತು ಎಂದು ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯಸಚೇತಕ ಎನ್‌. ರವಿಕುಮಾರ್ ಪ್ರಶ್ನಿಸಿದರು.

ಕೊಪ್ಪಳ: ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದ್ದು, ಇದು ದಿವಾಳಿಯಾಗಿರುವ ಸರ್ಕಾರ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯಸಚೇತಕ ಎನ್‌. ರವಿಕುಮಾರ್ ಆರೋಪಿಸಿದರು.

ಬುಧವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರ ಇದೆಯೋ, ಇಲ್ಲವೋ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಡಳಿತ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ಹೋರಾಟ ಮಾಡುವ ಸ್ಥಿತಿ ಬಂದಿದ್ದು, ಒತ್ತಡಕ್ಕೆ ಮಣಿದು ಸರ್ಕಾರ ಪರಿಹಾರದ ಪಟ್ಟಿಗಳನ್ನು ಸಿದ್ಧಪಡಿಸುತ್ತಿದೆ. ಆಡಳಿತ ಪಕ್ಷದ ಶಾಸಕರೇ ತಾಲೂಕು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲವರು ರಾಜೀನಾಮೆ ನೀಡುವ ಹಂತಕ್ಕೂ ಹೋಗಿದ್ದಾರೆ. ಇದು ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿ ಎಂದರು.

ಬರದಿಂದ ಕಂಗೆಟ್ಟಿರುವ ರೈತರಿಗೆ ವಿಶೇಷ ಅಧಿವೇಶನ ಕರೆದು ಪ್ರತಿ ಕುಟುಂಬಕ್ಕೆ ₹2,500 ನೀಡಲು ಸರ್ಕಾರ ಮುಂದಾಗಿದೆ. ರೈತರು ಒಂದು ದಿನಕ್ಕೆ ₹2,500 ಖರ್ಚು ಮಾಡುತ್ತಾರೆ. ಇಂತಹ ಅಲ್ಪ ಮೊತ್ತವನ್ನು ಪರಿಹಾರವೆಂದು ನೀಡಲು ಸರ್ಕಾರಕ್ಕೆ ಹೇಗೆ ಮನಸ್ಸಾಯಿತು ಎಂದು ಪ್ರಶ್ನಿಸಿದರು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರಿಗೆ ನೀಡುತ್ತಿದ್ದ ₹12 ಸಾವಿರ ನೆರವನ್ನು 2023ರಲ್ಲಿ ಏಕೆ ರದ್ದುಪಡಿಸಲಾಗಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಹಿಂದೆ ಒಣಭೂಮಿ ರೈತರಿಗೆ ಹೆಕ್ಟೇರ್‌ಗೆ ₹16,500, ನೀರಾವರಿ ಜಮೀನಿಗೆ ₹23,500 ಹಾಗೂ ತೋಟಗಾರಿಕೆ ಬೆಳೆಗಳಿಗೆ ₹28,500 ಪರಿಹಾರ ನೀಡಲಾಗುತ್ತಿತ್ತು. ಈಗ ಅದೇ ರೀತಿಯ ಪರಿಹಾರ ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.

ಗೃಹಲಕ್ಷ್ಮೀ ಯೋಜನೆಯ ಎರಡು ತಿಂಗಳ ಹಣ ಸೇರಿದಂತೆ ವಿವಿಧ ಯೋಜನೆಗಳಿಗೆ ಹಣ ನೀಡಲು ಸರ್ಕಾರದ ಬಳಿ ಹಣವಿಲ್ಲ. ಭಾಗ್ಯಲಕ್ಷ್ಮೀ ಬಾಂಡ್‌ಗಳು ಮೆಚ್ಯುರಿಟಿಯಾಗಿದ್ದರೂ ಹಣ ನೀಡಲು ಸಾಧ್ಯವಾಗುತ್ತಿಲ್ಲ. 36 ಲಕ್ಷ ಮಕ್ಕಳಿಗೆ ವಿತರಿಸಿದ ಶೂ, ಸಾಕ್ಸ್‌ಗಳ ಗುಣಮಟ್ಟದ ಬಗ್ಗೆಯೂ ದೂರುಗಳಿವೆ. ಇನ್ನೂ ಕೆಲ ಮಕ್ಕಳಿಗೆ ಪಠ್ಯಪುಸ್ತಕ ತಲುಪಿಲ್ಲ ಎಂದು ಆರೋಪಿಸಿದರು.

ಎಸ್‌ಐಆರ್‌ ಸಾಕ್ಷ್ಯ ಬಿಡುಗಡೆ ಮಾಡಿ: ಎಸ್‌ಐಆರ್‌ ಕುರಿತು ಕಾಂಗ್ರೆಸ್ ಮಾಡುತ್ತಿರುವ ಆರೋಪಗಳಿಗೆ ಸಾಕ್ಷ್ಯಗಳಿದ್ದರೆ ಬಿಡುಗಡೆ ಮಾಡಲಿ. ಮತದಾರರ ಪಟ್ಟಿ ಪರಿಷ್ಕರಣೆ ಮಾಡಬೇಕೋ ಬೇಡವೋ ಎಂಬುದನ್ನು ಮೊದಲು ಕಾಂಗ್ರೆಸ್ ಸ್ಪಷ್ಟಪಡಿಸಬೇಕು. ಅಕ್ರಮ ನಡೆದಿದೆ ಎನ್ನುವುದಕ್ಕೆ ದಾಖಲೆಗಳಿದ್ದರೆ ಸುಪ್ರೀಂ ಕೋರ್ಟ್‌ಗೆ ಹೋಗಲಿ ಎಂದು ಸವಾಲು ಹಾಕಿದರು.

ಇವಿಎಂ ಹ್ಯಾಕ್ ಮಾಡಲು ಸಾಧ್ಯವಿದ್ದರೆ ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರನ್ನು ಸೋಲಿಸಬಹುದಿತ್ತು. ಕೇರಳದಲ್ಲಿ ಕಾಂಗ್ರೆಸ್ ಶಾಸಕರು ಗೆಲ್ಲುತ್ತಿರಲಿಲ್ಲ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಇಷ್ಟು ವರ್ಷ ಬೇಕಾಗುತ್ತಿರಲಿಲ್ಲ. ಜನರು ನೀಡಿದ ಚುನಾವಣಾ ತೀರ್ಪನ್ನು ಗೌರವಿಸಬೇಕು ಎಂದರು.

ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ, ಡಾ. ಬಸವರಾಜ ಕ್ಯಾವಟರ, ಅಮರೇಶ ಮರಳಿ, ಸುನೀಲ ಹೆಸರೂರು ಹಾಗೂ ದೇವರಾಜ ಹಾಲಸಮುದ್ರ ಇದ್ದರು.

ನಿಯೋಗಕ್ಕೆ ಸಿದ್ಧ: ಬರ ನಿರ್ವಹಣೆ ಹಾಗೂ ರೈತರ ಸಮಸ್ಯೆಗಳ ಕುರಿತು ಸರ್ವಪಕ್ಷ ನಿಯೋಗದೊಂದಿಗೆ ಕೇಂದ್ರ ಸರ್ಕಾರದ ಬಳಿ ತೆರಳಲು ಸಿದ್ಧ. ಆದರೆ ಮೊದಲು ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸಬೇಕು. ಕೇಂದ್ರದ ನಿಯಮಾವಳಿಯಂತೆ ಪರಿಹಾರ ಬಿಡುಗಡೆಯಾಗುತ್ತದೆ. ಅಷ್ಟರೊಳಗೆ ರೈತರು ಸಂಕಷ್ಟ ಅನುಭವಿಸಬೇಕೇ ಎಂದು ಎನ್‌. ರವಿಕುಮಾರ್ ಪ್ರಶ್ನಿಸಿದರು. ಸಚಿವ ಶಿವರಾಜ ತಂಗಡಗಿ ಅವರು ಬಿಜೆಪಿ ವಿರುದ್ಧ ಮಾಡುತ್ತಿರುವ ‘ಹಗಲು ದರೋಡೆ’ ಆರೋಪಕ್ಕೆ ಪ್ರತಿಕ್ರಿಯಿಸಿದ ರವಿಕುಮಾರ್, ಯಾರು ಕಳ್ಳರು, ಯಾರು ಹಗಲು ದರೋಡೆ ಮಾಡಿದ್ದಾರೆ ಎಂಬುದನ್ನು ಜನರ ಮುಂದೆ ದಾಖಲೆ ಸಹಿತ ತಿಳಿಸಲಿ. ಆರೋಪ ಮಾಡುವ ಮೊದಲು ತಮ್ಮ ಸರ್ಕಾರದ ಕಾರ್ಯವೈಖರಿ ಪರಿಶೀಲಿಸಲಿ ಎಂದು ತಿರುಗೇಟು ನೀಡಿದರು.