ಸಾರಾಂಶ
ನಂಜನಗೂಡು : ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಸುವ ಮೂಲಕ ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಜನರು ದೂರುವಂತಾಗಿದೆ ಎಂದು ಮಾಜಿ ಶಾಸಕ ಬಿ. ಹರ್ಷವರ್ಧನ್ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಜನರ ಮೇಲೆ ಹೆಚ್ಚಿನ ತೆರಿಗೆ ಹೊರೆ ಹೊರೆಸುತ್ತಿದ್ದು, ಈಗ ರಾಜ್ಯದಲ್ಲಿ ಆರ್ಥಿಕ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 53 ಸಾವಿರ ಕೋಟಿ ಹಣವನ್ನು ನೀಡಲಾಗುತ್ತಿದೆ. ರಾಜ್ಯದಲ್ಲಿ ಸಂಪೂರ್ಣವಾಗಿ ಅಭಿವೃದ್ಧಿ ಕುಂಠಿತವಾಗಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಡುಗಡೆಯಾಗಿದ್ದ ಅನುದಾನದಿಂದಲೇ ಈಗಲೂ ಯೋಜನೆಗಳು ಜಾರಿಯಲ್ಲಿವೆ ಎಂದರು.
ಪ.ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿ ವೇತನಕ್ಕೂ ಕಡಿವಾಣ ಹಾಕಲಾಗಿದ್ದು, ಸರ್ಕಾರ ಅಧಿಕಾರಕ್ಕೆ ಬಂದು ಎರಡನೇ ವರ್ಷಕ್ಕೆ ಕಾಲಿಟ್ಟಿದ್ದರೂ ಈವರೆಗೂ ರಾಜ್ಯ ಸರ್ಕಾರ ವಿದ್ಯಾರ್ಥಿ ವೇತನವನ್ನು ನೀಡಿಲ್ಲ. ಇದನ್ನು ಪ್ರಶ್ನೆ ಮಾಡಬೇಕಿದ್ದ ಹೋರಾಟಗಾರರು ಈಗ ಮೌನವಹಿಸಿದ್ದಾರೆ. ಬಿಜೆಪಿ ಸರ್ಕಾರದ ಅಧಿಕಾರಾವಧಿಯಲ್ಲಿ ಸಂವಿಧಾನದ ವಿಚಾರವನ್ನು ತೆಗೆದುಕೊಂಡು ಟೀಕಾ ಪ್ರಹಾರದೊಂದಿಗೆ ಆಗಾಗ ಪ್ರತಿಭಟನೆಗಳನ್ನು ನಡೆಸುತ್ತಿದ್ದ ಹೋರಾಟಗಾರರು ಈಗ ಮಾಯವಾಗಿದ್ದಾರೆ. ಇನ್ನು ಈಗಾಗಲೇ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಬಯಲಾಗಿದ್ದು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ನೂರಾರು ಕೋಟಿ ಹಣ ಲೂಟಿಯ ಬಗ್ಗೆ ಜನರು ಹೋರಾಟಕ್ಕೆ ಮುಂದಾದ ಬಳಿಕ ಸರ್ಕಾರ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆದುಕೊಂಡಿದೆ ಹೀಗಾಗಿ ರಾಜ್ಯದ ಜನರು ಕಾಂಗ್ರೆಸ್ ದುರಾಡಳಿತದ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ.
ಕ್ಷೇತ್ರದಲ್ಲಿ ಆಡಳಿತ ಯಂತ್ರ ಕುಸಿದಿದೆ: ಇನ್ನು ನಂಜನಗೂಡಿನಲ್ಲಿ ತಾಲೂಕು ಆಡಳಿತ ಕಾರ್ಯವೈಖರಿ ಸಂಪೂರ್ಣವಾಗಿ ಕುಸಿದಿದೆ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬೆಚ್ಚಿ ಬೀಳುವಂತಹ ಕಳ್ಳತನ ಪ್ರಕರಣಗಳು ಕೊಲೆ ಸುಲಿಗೆಗಳು ನಡೆಯುತ್ತಿವೆ, ಈಗ ನಂಜನಗೂಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಜನತೆಗೆ ಅರ್ಥವಾಗುತ್ತಿದೆ ಜೊತೆಗೆ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಬೆಳ್ಳಿ ರಥ ನಿರ್ಮಾಣ ಹಾಗೂ ವಸತಿ ಗೃಹಗಳ ನಿರ್ಮಾಣಕಾಮಗಾರಿ ಸ್ಥಗಿತಗೊಂಡಿದ್ದು, ನಂಜನಗೂಡು ಅಭಿವೃದ್ಧಿಯಿಂದ ಹಿಂದೆ ಸರಿಯುತ್ತಿರುವ ಆತಂಕವನ್ನು ಜನರು ವ್ಯಕ್ತಪಡಿಸಿದ್ದಾರೆ.
ನಾಳೆ ಪ್ರತಿಭಟನೆ:
ಇನ್ನು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ಜೂ. 21ರ ಶುಕ್ರವಾರ ನಂಜನಗೂಡಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಅವರು ತಿಳಿಸಿದರು.
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆಂಡಗಣ್ಣಪ್ಪ, ನಗರ ಮಂಡಲ ಅಧ್ಯಕ್ಷ ಸಿದ್ದರಾಜು, ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಬಾಲಚಂದ್ರ, ನಗರಸಭೆ ಮಾಜಿ ಅಧ್ಯಕ್ಷ ಮಹಾದೇವಸ್ವಾಮಿ, ಎನ್.ಸಿ. ಬಸವಣ್ಣ, ಉಮೇಶ್ ಮೋದಿ, ರಾಘವೇಂದ್ರ, ಕುಮಾರ್, ಶಂಕರಪ್ಪ ಭಾಗವಹಿಸಿದ್ದರು.