ರೈತರಿಗೆ ನೀಡಬೇಕಾದ ಹಣವನ್ನು ಸರ್ಕಾರವೇ ಭರಿಸಬೇಕು. ಸಾರಿಗೆ ಇಲಾಖೆ ನಷ್ಟದಲ್ಲಿದ್ದು, ಸಿಬ್ಬಂದಿಗೆ ಅಗತ್ಯ ಸೌಲಭ್ಯಗಳಿಲ್ಲ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸಮರ್ಪಕ ಗೌರವಧನ ನೀಡಲು ಮತ್ತು ಗುತ್ತಿಗೆದಾರರ ಬಿಲ್ ಪಾವತಿಸಲೂ ಸರ್ಕಾರದ ಬಳಿ ಹಣವಿಲ್ಲ.
ಕಾರವಾರ: ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಬಿಜೆಪಿ ಉತ್ತರ ಕನ್ನಡ ಜಿಲ್ಲಾ ಘಟಕ ಶುಕ್ರವಾರ ಕಾರವಾರದಲ್ಲಿ ವಿನೂತನ ಪ್ರತಿಭಟನೆ ನಡೆಸಿತು. ಸರ್ಕಾರಕ್ಕೆ ಭಿಕ್ಷೆ ನೀಡಿ, ಅದರಲ್ಲಾದರೂ ಆಡಳಿತ ನಡೆಸಲಿ ಎಂದು ವ್ಯಂಗ್ಯವಾಡಿದ ಬಿಜೆಪಿ ಕಾರ್ಯಕರ್ತರು, ಸುಭಾಷ್ ವೃತ್ತದಿಂದ ಮೆರವಣಿಗೆ ನಡೆಸಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಎದುರು ಭಿಕ್ಷೆ ಸಂಗ್ರಹಿಸಿದರು.ಪ್ರತಿಭಟನೆಯಲ್ಲಿ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಟೀಕಿಸಿದರು. ಬಸ್ ಪ್ರಯಾಣ ದರ, ಹಾಲು, ಮೊಸರು, ಬೆಣ್ಣೆ ಹಾಗೂ ತುಪ್ಪದ ಬೆಲೆ ಏರಿಸುವ ಮೂಲಕ ಜನಸಾಮಾನ್ಯರ ಮೇಲೆ ಹೆಚ್ಚುವರಿ ಹೊರೆ ಹೇರುತ್ತಿದೆ.
ರೈತರಿಗೆ ನೀಡಬೇಕಾದ ಹಣವನ್ನು ಸರ್ಕಾರವೇ ಭರಿಸಬೇಕು. ಸಾರಿಗೆ ಇಲಾಖೆ ನಷ್ಟದಲ್ಲಿದ್ದು, ಸಿಬ್ಬಂದಿಗೆ ಅಗತ್ಯ ಸೌಲಭ್ಯಗಳಿಲ್ಲ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸಮರ್ಪಕ ಗೌರವಧನ ನೀಡಲು ಮತ್ತು ಗುತ್ತಿಗೆದಾರರ ಬಿಲ್ ಪಾವತಿಸಲೂ ಸರ್ಕಾರದ ಬಳಿ ಹಣವಿಲ್ಲ ಎಂದು ಆರೋಪಿಸಿದರು.ರಾಜ್ಯದಲ್ಲಿ ಸಾಲು ಸಾಲು ಹಗರಣಗಳು ಹಾಗೂ ಆಡಳಿತ ವೈಫಲ್ಯಗಳಿಂದ ಕರ್ನಾಟಕದ ಮಾನ ರಾಷ್ಟ್ರಮಟ್ಟದಲ್ಲಿ ಹರಾಜಾಗುತ್ತಿದೆ. ಕೆಪಿಎಸ್ಸಿ ಹಗರಣವೂ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಮಂಗಳೂರಿನಲ್ಲಿ ನಡೆದ ಸಂಪುಟ ಸಭೆಯಲ್ಲಿ ಸಾವಿರಾರು ಕೋಟಿ ರು. ಮೊತ್ತದ ಯೋಜನೆಗಳನ್ನು ಘೋಷಿಸಿದ್ದರೂ, ಆರ್ಥಿಕ ಇಲಾಖೆಯೇ ಬೊಕ್ಕಸದಲ್ಲಿ ಹಣವಿಲ್ಲದ ಕಾರಣ ಹೊಸ ಯೋಜನೆಗಳನ್ನು ಘೋಷಿಸದಂತೆ ಸೂಚಿಸಿದೆ ಎಂದು ಕಾಗೇರಿ ಟೀಕಿಸಿದರು.ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದೆ ಸರ್ಕಾರ ಅಬಕಾರಿ ಆದಾಯವನ್ನೇ ನೆಚ್ಚಿಕೊಂಡಿದೆ. ಕುಡಿಯುವ ನೀರಿನ ಬದಲು ಮದ್ಯ ಎಲ್ಲೆಡೆ ಲಭ್ಯವಾಗುವಂತೆ ಮಾಡುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು. ಕಾರವಾರದಲ್ಲಿ ಪ್ರಸ್ತುತ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಹಿಂದಿನ ಶಾಸಕರ ಅವಧಿಯಲ್ಲಿ ಮಂಜೂರಾದ ಅನುದಾನದಿಂದ ನಡೆಯುತ್ತಿವೆಯೇ ಹೊರತು ಕಾಂಗ್ರೆಸ್ ಸರ್ಕಾರದ ಕೊಡುಗೆಯಲ್ಲ ಎಂದು ಟೀಕಿಸಿದರು. ಸರ್ಕಾರಕ್ಕೆ ಭಿಕ್ಷೆ ನೀಡುತ್ತೇವೆ, ಅದರಲ್ಲಾದರೂ ಆಡಳಿತ ನಡೆಸಲಿ ಎಂದು ವ್ಯಂಗ್ಯವಾಡಿದರು.ಬಿಜೆಪಿ ಮುಖಂಡ ನಾಗರಾಜ ನಾಯಕ ಅವರು, ಮೊಬೈಲ್ನಲ್ಲೇ ದೀಪಾವಳಿ ಆಚರಿಸುವ ಅವಕಾಶ ಕಲ್ಪಿಸಿರುವುದು ಕಾಂಗ್ರೆಸ್ ಸರ್ಕಾರದ ಕೊಡುಗೆ ಎಂದು ವ್ಯಂಗ್ಯವಾಡಿದರು. ಸಾರಿಗೆ ದರ, ಹಾಲು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಸಿ ಜನರ ಮೇಲೆ ಹೊರೆ ಹೇರುವ ಬದಲು, ಸರ್ಕಾರದ ನಿರ್ವಹಣೆಗಾಗಿ ಬಿಜೆಪಿ ಭಿಕ್ಷೆ ಸಂಗ್ರಹಿಸಿ ನೀಡಲಿದೆ. ಸಂಗ್ರಹಿಸಿದ ಹಣವನ್ನು ಕಾಂಗ್ರೆಸ್ ಮುಖಂಡರು ರಾಜ್ಯ ಸರ್ಕಾರಕ್ಕೆ ತಲುಪಿಸಲಿ ಎಂದರು.ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಪ್ರಶಾಂತ ನಾಯ್ಕ, ಕಿಶನ್ ಕಾಂಬ್ಳೆ, ಜಗದೀಶ ನಾಯಕ ಮೊಗಟಾ, ಸುನಿಲ್ ಸೋನಿ, ನಾಗೇಶ ಕುರ್ಡೇಕರ, ರೇಷ್ಮಾ ಮಾಳ್ಸೇಕರ್ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.