ಹಿರೇಕೆರೂರು: ವಿಬಿ ಜಿ ರಾಮ್ ಜಿ ಯೋಜನೆ ಬಗ್ಗೆ ರಾಜ್ಯ ಸರ್ಕಾರ ಸುಳ್ಳು ಹೇಳಿ ಬಡವರ ಕೂಲಿಕಾರರ ದಾರಿ ತಪ್ಪಿಸುತ್ತಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ದೂರಿದರು.ತಾಲೂಕಿನ ಸಾತೇನಹಳ್ಳಿ ಹಾಗೂ ಮಡ್ಲೂರು ಗ್ರಾಮದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ವಿಕಸಿತ ಭಾರತ ಉದ್ಯೋಗ ಖಾತ್ರಿ ಮತ್ತು ಅಜೀವಿಕಾ ಮಿಷನ್ ಗ್ರಾಮೀಣ ಕಾಯ್ದೆ ಕುರಿತು ನಡೆದ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.ಹಿಂದಿನ ನರೇಗಾ ಯೋಜನೆಯಲ್ಲಿ ಪ್ರತಿ ವರ್ಷ ನೂರು ದಿನಗಳ ಉದ್ಯೋಗ ಖಾತ್ರಿ ಇತ್ತು. ಈಗ 125 ದಿನಗಳಿಗೆ ಹೆಚ್ಚಿಗೆ ಮಾಡಿದೆ. ಈ 125 ದಿನಗಳನ್ನು ಗ್ರಾಮ ಪಂಚಾಯಿತಿಗಳೇ ನಿರ್ಧಾರ ಮಾಡಬಹುದು. ಆದರೆ ಕೇಂದ್ರ ಸರ್ಕಾರ ನಿರ್ಧಾರ ಮಾಡುತ್ತಿದೆ ಎಂಬ ಭೀತಿಯನ್ನು ಕಾರ್ಮಿಕರಲ್ಲಿ ಹುಟ್ಟಿಸುತ್ತಿದೆ. ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ಒಂದು ವಾರದಿಂದ ಹದಿನೈದು ದಿನಗಳ ಒಳಗೆ ಕಡ್ಡಾಯವಾಗಿ ಕಾರ್ಮಿಕರ ವೇತನ ಕೊಡುವ ಬಗ್ಗೆ ಸ್ಪಷ್ಟವಾಗಿದೆ, ಅದಾಗ್ಯೂ ರಾಜ್ಯ ಸರ್ಕಾರ ಅನುದಾನ ಸಿಗದೇ ಇರುವ ವಿಚಾರವನ್ನು ಹೇಳಿ ಕಾರ್ಮಿಕರಿಗೆ ಈ ಯೋಜನೆಯಿಂದ ದೂರ ಮಾಡುತ್ತಿದೆ. ನರೇಗಾ ಯೋಜನೆಯಲ್ಲಿ ಹಲವಾರು ಪ್ರಕರಣಗಳು ಭ್ರಷ್ಟಾಚಾರದಿಂದ ಕೂಡಿರುವುದು ಯೋಜನೆಯ ದುರ್ಬಳಕೆ ಆಗಿರುವುದು, ಸುಳ್ಳು ಕೂಲಿಕಾರರ ಹೆಸರು ಹೇಳಿ ವೇತನ ತೆಗೆದಿರುವ ಲೋಪ ಇದ್ದು ಇದನ್ನು ಸರಿಪಡಿಸಲು ಬಯೋಮೆಟ್ರಿಕ್ ತಂತ್ರಜ್ಞಾನ ಬಳಸಿ ಸೋರಿಕೆ ತಡೆಗಟ್ಟಲು ಯೋಜನೆ ಮಾಡಿದರೆ ಇದರಿಂದ ವಂಚನೆ ಆಗುತ್ತದೆ ಎಂದು ಸುಳ್ಳನ್ನು ರಾಜ್ಯ ಸರ್ಕಾರ ಹೇಳುತ್ತಿದೆ ಎಂದರು.ಕೇಂದ್ರ ಮತ್ತು ರಾಜ್ಯ ಸರ್ಕಾರ 60:40 ಅನುಪಾತದಲ್ಲಿ ಅನುದಾನ ಹಂಚಿಕೊಳ್ಳುವ ನಿರ್ಧಾರದಿಂದ ಹೆಚ್ಚು ದಿನ ಹೆಚ್ಚು ಜನರಿಗೆ ಉದ್ಯೋಗ ಕೊಡಲು ಮತ್ತು ರಾಜ್ಯ ಸರ್ಕಾರಗಳು ದುಂದು ವೆಚ್ಚ, ಅನುಪಯುಕ್ತ ವೆಚ್ಚ ಭ್ರಷ್ಟಾಚಾರ ಕಡಿಮೆ ಮಾಡಿ ರೈತ ಕೂಲಿಕಾರರಿಗೆ ಸಹಾಯ ಮಾಡುವ ಚಿಂತನೆಯನ್ನು ಮಾಡುತ್ತಿದೆ. ಆದರೆ ರಾಜ್ಯ ಸರ್ಕಾರ ಯೋಜನೆಯನ್ನು ಮಾಡದೆ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. 125 ದಿವಸದ ಉದ್ಯೋಗ ಕೊಡುವುದರಿಂದ ಗ್ರಾಮೀಣ ನಿರುದ್ಯೋಗ ಸಮಸ್ಯೆಯನ್ನು ನಿವಾರಣೆ ಸಾಧ್ಯವಾಗುತ್ತದೆ. ಈ ಯೋಜನೆಯಲ್ಲಿದ್ದ ಭ್ರಷ್ಟಾಚಾರ ಸಂಪೂರ್ಣ ನಿವಾರಣೆ ಆಗುತ್ತದೆ. ಬಡವರು, ಕಾರ್ಮಿಕರು, ದೀನದಲಿತರಿಗೆ ನ್ಯಾಯ ಸಮ್ಮತ ಕೆಲಸ ಮತ್ತು ಕೂಡಲೇ ವೇತನ ಸಿಗುವ ವ್ಯವಸ್ಥೆ ಆಗುತ್ತದೆ. ಪಂಚಾಯಿತಿಗಳು ಯೋಜನೆಯನ್ನು ರೂಪಿಸುವ, ಅನುಷ್ಠಾನ ಮಾಡುವ ಸರ್ವ ಸ್ವತಂತ್ರವನ್ನು ಹೊಂದುತ್ತವೆ, ಗ್ರಾಮೀಣ ಅವಶ್ಯಕತೆಯ ತಕ್ಕಂತೆ ಆಸ್ತಿಗಳ ನಿರ್ಮಾಣವಾಗುತ್ತದೆ. ಇದರಿಂದ ವಿಕಸಿತ ಭಾರತದ ಗುರಿಗೆ ಗ್ರಾಮೀಣ ಪ್ರದೇಶದ ಬದುಕು ಮತ್ತು ವಿಕಾಸ ಮುಖಾಂತರ ಸಾಧನೆ ಹಾಗೂ ಕಲ್ಪನೆಯಿಂದ ಈ ಯೋಜನೆಯನ್ನು ಕೇಂದ್ರ ಸರ್ಕಾರ ತಂದಿದೆ ಎಂದರು.