ಸಾರಾಂಶ
ರಾಜ್ಯದಲ್ಲಿ ಭೀಕರ ಬರ ಬಂದಿದೆ. ಸರ್ಕಾರದ ಯಾವುದೇ ಪ್ರತಿನಿಧಿಗಳು ರೈತರ ಹೊಲಗಳಿಗೆ ಭೇಟಿ ನೀಡಿ ಸಾಂತ್ವನ ಹೇಳದೇ ಕಾಲಹರಣ ಮಾಡುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಕುಷ್ಟಗಿ
ರಾಜ್ಯದಲ್ಲಿ ಭೀಕರ ಬರ ಬಂದಿದೆ. ಸರ್ಕಾರದ ಯಾವುದೇ ಪ್ರತಿನಿಧಿಗಳು ರೈತರ ಹೊಲಗಳಿಗೆ ಭೇಟಿ ನೀಡಿ ಸಾಂತ್ವನ ಹೇಳದೇ ಕಾಲಹರಣ ಮಾಡುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಆರೋಪಿಸಿದರು.ತಾಲೂಕಿಗೆ ಬರ ಅಧ್ಯಯನ ಪ್ರವಾಸಕ್ಕಾಗಿ ಬಂದ ಸಂದರ್ಭದಲ್ಲಿ ಪಟ್ಟಣದ ಸರ್ಕ್ಯೂಟ್ ಹೌಸಿನಲ್ಲಿ ಬರಗಾಲದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹುಟ್ಟಿನಿಂದ ಇಲ್ಲಿವರೆಗೂ ಇಂತಹ ಭೀಕರ ಬರಗಾಲ ಕಂಡಿಲ್ಲ. ಇಂತಹ ಬರಗಾಲದಲ್ಲಿ ಕಾಂಗ್ರೆಸ್ ಸರ್ಕಾರದ ಸಿಎಂ, ಡಿಸಿಎಂ, ಸಚಿವರು, ಶಾಸಕರನ್ನು ಒಳಗೊಂಡಂತೆ ಯಾರೊಬ್ಬರು ಸಹಿತ ರೈತರ ಹೊಲಗಳಿಗೆ ಹೋಗಿ ಬೆಳೆ ನಷ್ಟ ಆಗಿರುವ ಕುರಿತು ಸಾಂತ್ವನ ಹೇಳುವ ಕೆಲಸ ಮಾಡಲಿಲ್ಲ. ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದರು.ಇಂತಹ ಬರಗಾಲದಲ್ಲಿ ಸಚಿವರಿಗೆ ಹೊಸ ಕಾರು ಕೊಡುತ್ತಿರುವುದು ಕಂಡರೆ ಇವರು ರಾಜ್ಯವನ್ನು ಲೂಟಿ ಮಾಡೋಕೆ ಬಂದಿರುವಂತೆ ಕಾಣುತ್ತದೆ. ಇಂತಹ ಬರಗಾಲದಲ್ಲಿ ಇದು ಬೇಕಿತ್ತೇ ಎಂದು ಪ್ರಶ್ನಿಸಿದರು.ರಾಜ್ಯ ಸರ್ಕಾರವು ಬರಗಾಲದ ಕುರಿತು ಇಲ್ಲಿಯವರೆಗೂ ಒಂದು ರುಪಾಯಿ ಪರಿಹಾರ ಕೊಟ್ಟಿಲ್ಲ. ಕೇವಲ ಪ್ರಚಾರಕ್ಕಾಗಿ ಅಷ್ಟು ಕೊಟ್ಟಿದ್ದೇನೆ, ಇಷ್ಟು ಕೊಟ್ಟಿದ್ದೇನೆ ಎಂದು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.ಈ ಸಂದರ್ಭದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ, ಸಂಸದ ಸಂಗಣ್ಣ ಕರಡಿ, ಎಂಎಲ್ಸಿ ಹೇಮಲತಾ ನಾಯಕ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ್, ಬಸವರಾಜ ದಡೇಸಗೂರು ಇದ್ದರು.