೪೦೦ ಅತಿಥಿ ಶಿಕ್ಷಕರ ನೇಮಕಕ್ಕೆ ರಾಜ್ಯ ಸರ್ಕಾರ ಆದೇಶ

| Published : Jun 06 2024, 12:30 AM IST

ಸಾರಾಂಶ

೨೦೨೪-೨೫ನೇ ಸಾಲಿನಲ್ಲಿ ಜಿಲ್ಲೆಯ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ವಿಷಯ ಶಿಕ್ಷಕರ ಹುದ್ದೆಗಳಿಗೆ ತಾತ್ಕಾಲಿಕವಾಗಿ ೪೦೦ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದಕ್ಕೆ ರಾಜ್ಯಸರ್ಕಾರ ಆದೇಶ ಹೊರಡಿಸಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

೨೦೨೪-೨೫ನೇ ಸಾಲಿನಲ್ಲಿ ಜಿಲ್ಲೆಯ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ವಿಷಯ ಶಿಕ್ಷಕರ ಹುದ್ದೆಗಳಿಗೆ ತಾತ್ಕಾಲಿಕವಾಗಿ ೪೦೦ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದಕ್ಕೆ ರಾಜ್ಯಸರ್ಕಾರ ಆದೇಶ ಹೊರಡಿಸಿದೆ.

ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿಗೆ ೮೦ ಮದ್ದೂರು -೭೮ ಮಳವಳ್ಳಿ-೮೬, ಮಂಡ್ಯ ಉತ್ತರ-೨೬, ಮಂಡ್ಯ ದಕ್ಷಿಣ-೨೧, ನಾಗಮಂಗಲ-೫೩, ಪಾಂಡವಪುರ-೪೧, ಶ್ರೀರಂಗಪಟ್ಟಣ ತಾಲೂಕಿಗೆ ೧೫ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಂತೆ ಹಂಚಿಕೆ ಮಾಡಿದೆ.

ಸರ್ಕಾರಿ ಪ್ರೌಢ ಶಾಲೆಗಳಿಗೆ ಶಾಲೆ, ತಾಲೂಕುವಾರು ಖಾಲಿ ಇರುವ ಅಗತ್ಯ ಹುದ್ದೆಗಳಿಗೆ ಮಾತ್ರ ಅತಿಥಿ ಶಿಕ್ಷಕಕಕರನ್ನು ತ್ವರಿತವಾಗಿ ನೇಮಕಾತಿ ಮಾಡಲು ಸೂಚಿಸಿದೆ. ಅತಿಥಿ ಶಿಕ್ಷಕರ ಆಯ್ಕೆ ಜವಾಬ್ದಾರಿಯನ್ನು ಸಂಬಂಧಿಸಿದ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕರ ಮೂಲಕವೇ ನೇಮಕ ಮಾಡುವುದು. ಕಠಿಣ ವಿಷಯಗಳಾದ ಗಣಿತ, ವಿಜ್ಞಾನ, ಆಂಗ್ಲ ವಿಷಯದ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಆದ್ಯತೆ ನೀಡುವಂತೆ ತಿಳಿಸಿದೆ. ನಂತರ ಇತರೆ ವಿಷಯಗಳಿಗೆ ಆದ್ಯತೆ ನೀಡಬೇಕು. ಈ ವಿಷಯಗಳಿಗೆ ಹೆಚ್ಚುವರಿ ಶಿಕ್ಷಕರು ಇರುವ ಶಾಲೆಗಳಿಗೆ ಅತಿಥಿ ಶಿಕ್ಷಕರ ಹುದ್ದೆಗಳನ್ನು ಮಂಜೂರು ಮಾಡುವಂತಿಲ್ಲ ಎಂದು ತಿಳಿಸಲಾಗಿದೆ. ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡ ಹುದ್ದೆಗೆ ವರ್ಗಾವಣೆ, ನೇಮಕಾತಿ ಮುಖಾಂತರ ಖಾಯಂ ಶಿಕ್ಷಕರು ನಿಯುಕ್ತಿಗೊಂಡಲ್ಲಿ ಆ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅತಿಥಿ ಶಿಕ್ಷಕರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ತಾಲೂಕಿನಲ್ಲಿ ವರ್ಗಾವಣೆಯಿಂದ ತೆರವಾದ ಹುದ್ದೆಗೆ ಅತಿಥಿ ಶಿಕ್ಷಕರನ್ನು ಹಂಚಿಕೆ ಮಾಡುವಂತೆ ಸೂಚಿಸಲಾಗಿದೆ.

ಅತಿಥಿ ಶಿಕ್ಷಕರನ್ನು ಅತಿ ಹೆಚ್ಚು ಮಕ್ಕಳಿರುವ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇರುವ ಪ್ರೌಢಶಾಲೆಗಳಿಗೆ ಆದ್ಯತೆ ಮೇರೆಗೆ ಒದಗಿಸುವುದು. ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅತ್ಯವಶ್ಯಕ ಖಾಲಿ ಹುದ್ದೆಗಳಿಗೆ ಆದ್ಯತೆ ಮೇರೆಗೆ ನೇಮಿಸುವುದು. ಆಯಾ ಹುದ್ದೆಗೆ ನಿಗದಿಪಡಿಸಿದ ಕನಿಷ್ಠ ವಿದ್ಯಾರ್ಹತೆ ಪರಿಗಣಿಸಿ ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡುವಂತೆ ನಿರ್ದೇಶನ ನೀಡಲಾಗಿದೆ.

ನಾಳೆ ಮಿನಿ ಉದ್ಯೋಗ ಮೇಳ

ಮಂಡ್ಯ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಮೆ.ಗ್ರಾಸಿಂ ಇಂಡಸ್ಟ್ರೀಸ್-ಆದಿತ್ಯಾ ಬಿರ್ಲಾ ಗ್ರೂಪ್, ಮೆ.ಟೊಯೋಟಾ ಇಂಡಸ್ಟ್ರೀಸ್ ಇಂಜಿನ್ ಇಂಡಿಯಾ, ಬಂಧನ್ ಬ್ಯಾಂಕ್ ಲಿಮಿಟೆಡ್ ಮತ್ತು ಮೆ.ಶಾಹಿ ಎಕ್ಸ್ಪೋರ್ಟ್ ಪ್ರೈ. ಲಿ, ಸಂಸ್ಥೆಗಳ ಸಹಭಾಗಿತ್ವದಲ್ಲಿ ಉದ್ಯೋಗ ನೀಡುವ ಕುರಿತು ಜೂ.7 ರಂದು ಮಿನಿ ಉದ್ಯೋಗ ಮೇಳ ಏರ್ಪಡಿಸಲಾಗಿದೆ.ಪಿಯುಸಿ, ಐಟಿಐ (ಯಾವುದೇ ಟ್ರೇಡ್), ಡಿಪ್ಲಮೋ (ಪ್ಯಾರಾಮೆಡಿಕಲ್, ಆಟೋಮೊಬೈಲ್, ಫಿಟ್ಟರ್, ಟರ್ನ್ ರ್ & ಮೆಕ್ಯಾನಿಕಲ್) ಹಾಗೂ ಯಾವುದೇ ಪದವಿ/ ಯು.ಜಿ ಉತ್ತೀರ್ಣರಾದ 18 ರಿಂದ 32 ವರ್ಷದೊಳಗಿನ ಆಸಕ್ತ ಅಭ್ಯರ್ಥಿಗಳು ಜೂ,7ರಂದು ಬೆಳಗ್ಗೆ 10.30 ಗಂಟೆಗೆ ಮಂಡ್ಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ತಮ್ಮ ಬಯೋಡೇಟಾಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ದೂ-08232-295124, ಮೊ-8660061488 & 9164642684 ನ್ನು ಸಂಪರ್ಕಿಸಬಹುದು ಎಂದು ಮಂಡ್ಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.