ಕನ್ನಡಪ್ರಭ ವಾರ್ತೆ ನವದೆಹಲಿ
ಕರ್ನಾಟಕದಲ್ಲಿ ನೀರಾವರಿ ಯೋಜನೆಗಳನ್ನು ಸಕಾಲಕ್ಕೆ ಕಾರ್ಯಗತ ಮಾಡಲಾಗದೇ ರಾಜ್ಯದ ಕಾಂಗ್ರೆಸ್ ಸರಕಾರ, ಕೇಂದ್ರ ಸರಕಾರವನ್ನು ಅನಗತ್ಯವಾಗಿ ದೂರುತ್ತಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ದೂರಿದರು.ರಾಜ್ಯಸಭೆಯಲ್ಲಿ ಸೋಮವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ದೇವೇಗೌಡ, ಎತ್ತಿನಹೊಳೆ, ಮೇಕೆದಾಟು ಯೋಜನೆಗಳ ವಿಳಂಬಕ್ಕೆ ರಾಜ್ಯ ಸರಕಾರವೇ ಕಾರಣ. ಅದನ್ನು ಮರೆಮಾಚಿಕೊಳ್ಳಲು ಕೇಂದ್ರವನ್ನು ದೂರುತ್ತಿದೆ. ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷದಿಂದಲೇ ಎತ್ತಿನಹೊಳೆ ಯೋಜನೆ ಆಮೆಗತಿಯಲ್ಲಿ ಸಾಗುತ್ತಿದೆ ಎಂದರು.
ಎತ್ತಿನಹೊಳೆ ಯೋಜನೆಯನ್ನು ಕಾರ್ಯಗತ ಮಾಡುವಲ್ಲಿ ರಾಜ್ಯ ಸರಕಾರ ಅನೇಕ ತಪ್ಪುಗಳನ್ನು ಮಾಡಿದೆ. ಪರಿಸರಕ್ಕೆ ಧಕ್ಕೆ ತಂದಿದೆ. ಅನೇಕ ಕಾನೂನು, ನಿಯಮಗಳನ್ನು ಉಲ್ಲಂಘನೆ ಮಾಡಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಈ ಯೋಜನೆಗೆ ಶಂಕುಸ್ಥಾಪನೆ ಮಾಡಲಾಗಿತ್ತು. ಆಗ ಜಗದೀಶ ಶೆಟ್ಟರ್ ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ಆಗ ಆ ಯೋಜನೆಯ ಅಂದಾಜು ವೆಚ್ಚ ₹8,000 ಕೋಟಿ. ಈಗ ಅದು ₹33,000 ಕೋಟಿ ಮೀರಿದೆ. ಆದರೆ, ಈವರೆಗೂ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳಿಗೆ ತೊಟ್ಟು ನೀರು ಹೋಗಿಲ್ಲ. ಅಷ್ಟೇ ಅಲ್ಲದೆ, ಆ ಯೋಜನೆ ಕಾರ್ಯಗತ ಆಗುತ್ತಿರುವ ಹಾಸನ ಜಿಲ್ಲೆಯ ಸಕಲೇಶಪುರಕ್ಕೆ, ಹತ್ತಿರದಲ್ಲಿರುವ ಅರಸೀಕರೆಗೇ ನೀರು ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಅದೇ ಜಿಲ್ಲೆಗಳಿಗೆ ಬೆಂಗಳೂರಿನ ಕೊಳಚೆ ನೀರನ್ನು ಮೂರು ಹಂತಗಳಲ್ಲಿ ಶುದ್ಧೀಕರಿಸದೆ, ಮಲೀನ ನೀರನ್ನು ಹರಿಸಲಾಗುತ್ತಿದೆ. ಆ ನೀರು ಮಾನವ ಬಳಕೆಗೆ ಯೋಗ್ಯವಲ್ಲದ್ದು. ಇದರ ಪರಿಣಾಮವಾಗಿ ಆ ಭಾಗದಲ್ಲಿ ಬೆಳೆಯುತ್ತಿರುವ ಬೆಳೆಗಳು ಹಾಗೂ ತರಕಾರಿಗಳು ವಿಷಕಾರಿಯಾಗುತ್ತಿವೆ. ಜನರ ಜೀವದ ಜೊತೆ ರಾಜ್ಯ ಸರ್ಕಾರ ಚೆಲ್ಲಾಟವಾಡುತ್ತಿದೆ. ಈ ಜಿಲ್ಲೆಗಳು ಎದುರಿಸುತ್ತಿರುವ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಅರಣ್ಯ, ಪರಿಸರ ಜೀವಿಶಾಸ್ತ್ರ ಖಾತೆ ಮಂತ್ರಿಗಳಾದ ಭೂಪೇಂದ್ರ ಯಾದವ್ ಮಧ್ಯ ಪ್ರವೇಶಿಸಬೇಕು. ಇಲ್ಲವಾದರೆ ಈ ಜಿಲ್ಲೆಯ ಜನರು ವಿಪರೀತ ಬೆಲೆ ತೆರಲಿದ್ದಾರೆ ಎಂದು ದೂರಿದರು.
ಮೇಕೆದಾಟು ಯೋಜನೆಗೂ ರಾಜ್ಯ ಸರಕಾರವೇ ಅಡ್ಡಿಯಾಗಿದೆ. ಈ ಯೋಜನೆ ಕಾರ್ಯಗತವಾಗುವ ಪ್ರಸ್ತಾವಿತ ಜಾಗ ನನಗೆ ಗೊತ್ತು. ಒಂದು ಕಡೆ ಆನೆ ಕಾರಿಡಾರ್, ಮತ್ತೊಂದೆಡೆ ಅರಣ್ಯ ಮತ್ತು ವನ್ಯಜೀವಿ ಸಂಪತ್ತು ಇದೆ. ಪ್ರತಿದಿನವೂ ನಡೆಯುತ್ತಿರುವ ಮಾನವ-ವನ್ಯಜೀವಿ ಸಂಘರ್ಷದಿಂದ ಅಮಾಯಕರು ಬಲಿ ಆಗುತ್ತಿದ್ದಾರೆ. ಇದನ್ನು ತಡೆಯಲು ರಾಜ್ಯ ಸರಕಾರಕ್ಕೆ ಆಗಿಲ್ಲ ಎಂದು ಅವರು ಆರೋಪಿಸಿದರು.
ಪ್ರತಿ ದಿನವೂ ಮಾನವ-ವನ್ಯಜೀವಿ ಸಂಘರ್ಷ ನಡೆಯುತ್ತಿದೆ. ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ತರೀಕೆರೆ ಸೇರಿದಂತೆ ಅನೇಕ ಸ್ಥಳಗಳಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆನೆಗಳು ಬೆಳೆಗಳನ್ನು ನಾಶ ಮಾಡುತ್ತಿವೆ. ತೋಟಗಳಲ್ಲಿ ದುಡಿಮೆ ಮಾಡುವ ರೈತರನ್ನು ಕೊಲ್ಲುತ್ತಿವೆ. ಇದನ್ನು ತಪ್ಪಿಸುವ ಕೆಲಸವನ್ನು ರಾಜ್ಯ ಸರಕಾರ ಮಾಡುತ್ತಿಲ್ಲ ಎಂದು ಅವರು ದೂರಿದರು.