ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಬೆಲೆ ಏರಿಕೆ ನಿಶ್ಚಿತ ಮತ್ತು ಖಚಿತ. ಇದು ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ನೀಡಿರುವ ಆರನೇ ಗ್ಯಾರಂಟಿ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಂ.ಆರ್.ಕುಮಾರಸ್ವಾಮಿ ಟೀಕಿಸಿದರು.ಪಟ್ಟಣದ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರೈತರಿಗೆ ಅಗತ್ಯವಾಗಿ ಬೇಕಾಗಿರುವ ಬಿತ್ತನೆ ಬೀಜಗಳ ಬೆಲೆ ಏರಿಸುವ ಮೂಲಕ ರೈತರಿಗೆ ದ್ರೋಹ ಬಗೆಯುತ್ತಿದೆ ಎಂದು ದೂರಿದರು.
ರಾಜ್ಯದ ಜನತೆಗೆ ಉಚಿತ ಗ್ಯಾರಂಟಿಗಳ ಅಮಿಷ ಒಡ್ಡಿ ಅಧಿಕಾರಿಕ್ಕೆ ಬಂದ ಕಾಂಗ್ರೆಸ್ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಲು ಹೊರಟಿದೆ. ಇದರ ಜತೆಗೆ ಭತ್ತ, ರಾಗಿ, ತೊಗರಿ ಮತ್ತು ಜೋಳ ಮುಂತಾದ ಬಿತ್ತನೆ ಬೀಜಗಳ ದರವನ್ನು ದುಬಾರಿಗೊಳಿಸಿ ರೈತರನ್ನು ಆತ್ಮಹತ್ಯೆದೆಡೆಗೆ ದೂಡುತ್ತಿದೆ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ನಿರ್ಧಾರದಿಂದ ಸಣ್ಣ ರೈತರು ನಿರ್ನಾಮವಾಗಿ, ರಾಜ್ಯದ ಆಹಾರ ಭದ್ರತೆಗೆ ಧಕ್ಕೆಯಾಗುತ್ತದೆ. ಬರದಿಂದ ಕಂಗೆಟ್ಟ ರೈತರು ಬೆಲೆ ಏರಿಕೆಯಿಂದ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರ ನೀಡಿದ್ದ ಕಿಸಾನ್ ಸಮ್ಮಾನ್ ಯೋಜನೆಗೂ ಕತ್ತರಿ ಹಾಕಿದ್ದ ಸರ್ಕಾರ ಈಗ ಬಿತ್ತನೆ ಬೀಜದ ಹೆಸರಿನಲ್ಲಿ ರೈತರನ್ನು ಲೂಟಿ ಮಾಡಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದರು.ಬರ ಪರಿಹಾರ ವಿತರಿಸಲು ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಸರ್ಕಾರದ ನಿರ್ಧಾರದಿಂದ ರೈತರು ಸಾಲ ಮಾಡಿ ವ್ಯವಸಾಯ ಮಾಡುವ ಪರಿಸ್ಥಿತಿಗೆ ತಲುಪಿದ್ದಾರೆ. ಮುಂಗಾರಿನ ಬಿತ್ತನೆಗೆ ಅನುಕೂಲವಾಗುವಂತೆ ಬಿತ್ತನೆ ಬೀಜದ ದರ ನಿಗದಿಪಡಿಸಬೇಕು. ಹತ್ತಾರು ಎಕರೆಗೆ ಬಿತ್ತನೆ ಬೀಜ ಖರೀದಿಸಲು ಮುಂದಾದರೆ ಸಾವಿರಾರು ರು. ಹೊರೆಯಾಗಿ ರೈತ ವ್ಯವಸಾಯದಿಂದಲೇ ವಿಮುಖನಾಗುತ್ತಾನೆ ಎಂದು ಎಚ್ಚರಿಸಿದರು.
ಉತ್ತರ ಕರ್ನಾಟಕದ ಪ್ರಮುಖ ಬೆಳೆಗಳಾದ ತೊಗರಿ, ಹೆಸರು, ಜೋಳದ ಬಿತ್ತನೆ ಬೀಜದ ಬೆಲೆ ಹೆಚ್ಚಿಸಲಾಗಿದೆ. ಸರ್ಕಾರದ ಬೆಲೆ ಏರಿಕೆ ನಿರ್ಧಾರದಿಂದ ಒಟ್ಟಾರೆ ರೈತ ಕುಲ ಸಂಕಷ್ಟ ಸಿಲುಕಿದೆ ಎಂದು ಆರೋಪಿಸಿದರು.ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲೂಕುಗಳ ಕೃಷಿ ಇಲಾಖೆ ಮುಂದೆ ರೈತರ ಪರವಾಗಿ ಪ್ರತಿಭಟನೆ ನಡೆಸಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.ಬಿತ್ತನೆ ಬೀಜಗಳ ಬೆಲೆ ಏರಿಕೆ: ಅನ್ನದಾತರ ಮೇಲೆ ಗದಾಪ್ರಹಾರಕನ್ನಡಪ್ರಭ ವಾರ್ತೆ ಮಂಡ್ಯ
ಬಿತ್ತನೆ ಬೀಜಗಳ ಬೆಲೆಯನ್ನು ಅವೈಜ್ಞಾನಿಕ ರೀತಿಯಲ್ಲಿ ಏರಿಕೆ ಮಾಡುವ ಮೂಲಕ ಅನ್ನದಾತರ ಮೇಲೆ ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ಗದಾ ಪ್ರಹಾರ ಮಾಡಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅವೈಜ್ಞಾನಿಕ ರೀತಿಯಲ್ಲಿ ಬಿತ್ತನೆ ಬೀಜದ ಬೆಲೆ ಏರಿಕೆ ಮಾಡಿ ಸಣ್ಣ ರೈತರನ್ನು ನಿರ್ನಾಮ ಮಾಡಲು ಹೊರಟಿದೆ. ಇದರೊಂದಿಗೆ ಆಹಾರ ಭದ್ರತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.ತೀವ್ರ ಬರದಿಂದ ತತ್ತರಿಸಿರುವ ರಾಜ್ಯದ ರೈತರ ನೆರವಿಗೆ ಬಂದು ಉಚಿತ ಬಿತ್ತನೆ ಬೀಜ ಪೂರೈಸಬೇಕಿದ್ದ ಸರ್ಕಾರ, ನೇರವಾಗಿ ಅನ್ನದಾತರ ಜೇಬಿಗೆ ಕೈ ಹಾಕುವ ಮೂಲಕ ರೈತರಿಗೆ ಅನ್ಯಾಯ ಮಾಡಿದೆ. ಕಳೆದ ಹಂಗಾಮಿನಲ್ಲಿ ಭೀಕರ ಬರದಿಂದ ರೈತರು ಕಂಗಾಲಾಗಿದ್ದಾರೆ. ಸಾಲ ಮಾಡಿ ಬೆಳೆದ ಬೆಳೆಗಳು ಬಿಸಿಲಿನ ತಾಪಕ್ಕೆ ಒಣಗಿ ನಾಶವಾಗಿವೆ. ಕೊಳವೆಬಾವಿಗಳು ನೀರಿಲ್ಲದೆ ಬತ್ತಿ ಹೋಗಿವೆ. ಇಂತಹ ಶೋಚನೀಯ ಸ್ಥಿತಿಯಲ್ಲಿದ್ದ ರೈತರಿಗೆ ಕಾಂಗ್ರೆಸ್ ಸರ್ಕಾರ ಬಿತ್ತನೆ ಬೀಜಗಳ ದರ ಏರಿಸಿ ಶಾಕ್ ನೀಡಿದೆ ಎಂದು ಕಿಡಿಕಾರಿದರು.
ಮುಕ್ತ ಮಾರುಕಟ್ಟೆಯಲ್ಲಿಯೂ ದರ ಭಾರೀ ಹೆಚ್ಚಳವಾಗಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಂದು ಕೈಯಲ್ಲಿ ಗ್ಯಾರಂಟಿ ಕೊಟ್ಟು ಇನ್ನೊಂದು ಕೈಯಲ್ಲಿ ಸುಲಿಗೆ ಮಾಡುತ್ತಿದೆ. ಬೆಲೆ ಏರಿಸುವ ಮೂಲಕ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ರೈತನ ಜೇಬಿಗೆ ಕೈ ಹಾಕಿ ಪಿಕ್ ಪಾಕೆಟ್ ಮಾಡುತ್ತಿದೆ. ಇದು ಕಿಡಿಗೇಡಿತನದ ಪರಮಾವಧಿ ಎಂದು ದೂರಿದ್ದಾರೆ.