ಸಾರಾಂಶ
ಶಿಕಾರಿಪುರ : ರಾಜ್ಯ ಸರ್ಕಾರದ ದ್ವಂದ್ವನೀತಿಯಿಂದಾಗಿ ತಾಲೂಕಿನ ಜತೆಗೆ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದ್ದು, ಸ್ವಕ್ಷೇತ್ರ ಶಿಕಾರಿಪುರದಲ್ಲಿ ಸ್ಥಗಿತಗೊಂಡ ಅಭಿವೃದ್ಧಿ ಕಾರ್ಯಗಳನ್ನು ಭವಿಷ್ಯದಲ್ಲಿ ಪೂರ್ಣಗೊಳಿಸುವುದಾಗಿ ಕ್ಷೇತ್ರದ ಶಾಸಕ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಶನಿವಾರ ತಾಲೂಕಿನ ಕಪ್ಪನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಹಿರೇಕಲವತ್ತಿಯ ಶ್ರೀ ಮಣ್ಣು ಬಸವಣ್ಣಸ್ವಾಮಿ ಸಮುದಾಯ ಭವನ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಹಿರೇಕಲವತ್ತಿ ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿದ್ದು, ಉದ್ಬವ ಮಣ್ಣು ಬಸವಣ್ಣಸ್ವಾಮಿ ಅತ್ಯಂತ ಜಾಗರೂಕನಾಗಿ ನಂಬಿದ ಭಕ್ತರ ಇಷ್ಟಾರ್ಥವನ್ನು ಪೂರೈಸುವ ಐತಿಹ್ಯದಿಂದಾಗಿ ಕ್ಷೇತ್ರ ಇತ್ತೀಚಿನ ವರ್ಷದಲ್ಲಿ ಅತ್ಯಂತ ಪ್ರಸಿದ್ಧವಾಗಿದೆ ಎಂದ ಅವರು, ಕ್ಷೇತ್ರದ ಅಭಿವೃದ್ಧಿ ಮೂಲಕ ಭಕ್ತರಿಗೆ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಯಡಿಯೂರಪ್ಪನವರು ಶಾಸಕರಾದ ಸಂದರ್ಭದಿಂದಲೂ ಸಾಧ್ಯವಾದ ರೀತಿಯಲ್ಲಿ ಎಲ್ಲ ಸಹಕಾರ ನೀಡಲಾಗಿದ್ದು, ಇದು ಕುಟುಂಬಕ್ಕೆ ದೊರೆತ ಪುಣ್ಯದ ಅವಕಾಶ ಎಂದು ಭಾವಿಸುವುದಾಗಿ ತಿಳಿಸಿದರು.
ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಅಂದಾಜು 80 ಲಕ್ಷ ರು.ವೆಚ್ಚದಲ್ಲಿ ನಿರ್ಮಾಣವಾದ ಸಮುದಾಯ ಭವನದ ಯೋಜನಾ ವೆಚ್ಚದಲ್ಲಿ ಶೌಚಾಲಯ ಮತ್ತಿತರ ಸೌಲಭ್ಯ ಹೊರತಾಗಿದ್ದು, ಭಕ್ತಾಧಿಗಳ ಅನುಕೂಲಕ್ಕಾಗಿ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರಸ್ತುತ ರಾಜ್ಯ ಸರ್ಕಾರದಿಂದ ಪಕ್ಷಬೇಧವಿಲ್ಲದೆ ಯಾವುದೇ ಶಾಸಕರು ಅನುದಾನ ನಿರೀಕ್ಷಿಸುವಂತಿಲ್ಲ ಪ್ರತಿಯೊಂದು ಯೋಜನೆಗೂ ಗ್ಯಾರೆಂಟಿ ನೆಪದಲ್ಲಿ ಸರ್ಕಾರ ಶಾಸಕರಿಗೆ ಅನುದಾನ ನೀಡದೆ ದ್ರೋಹ ಎಸಗುತ್ತಿದೆ ಸರ್ಕಾರದ ವರ್ತನೆಯಿಂದ ರೋಸಿ ಹೋದ ಕಾಂಗ್ರೆಸ್ ಶಾಸಕ ರಾಜು ಕಾಗೆ ಅನುದಾನ ನೀಡದಿದ್ದಲ್ಲಿ ಜನರಿಗೆ ಉತ್ತರಿಸಲಾಗದೆ ರಾಜಕೀಯ ಆತ್ಮಹತ್ಯೆಗೆ ಶರಣಾಗಬೇಕಾದೀತು ಎಂದು ಎಚ್ಚರಿಸಿದ್ದು, ಸರ್ಕಾರದ ನೀತಿಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ದೇವಸ್ಥಾನ ಸಮಿತಿ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಗ್ರಾ.ಪಂ. ಅಧ್ಯಕ್ಷ ವೀರೇಂದ್ರ ಪಾಟೀಲ್, ಉಪಾಧ್ಯಕ್ಷ ಪ್ರಕಾಶ್ ಸದಸ್ಯರಾದ ರಂಗಪ್ಪ, ನಾಗರತ್ನಮ್ಮ, ರೂಪ, ಕಾಂತೇಶ್, ಗಂಗಮ್ಮ, ಜಯಮ್ಮ, ಹಿರಿಯಮ್ಮ ಮುಖಂಡ ಗುರುಮೂರ್ತಿ, ನಿವೃತ್ತ ಯೋಧ ಬಸವರಾಜ್, ರುದ್ರಪ್ಪ ಕಾಳೇನಹಳ್ಳಿ, ಸೋಮನಗೌಡ, ಕೃಷ್ಣಮೂರ್ತಿ, ರುದ್ರೇಶ್, ಬೆಣ್ಣೆ ಪ್ರವೀಣ, ವೀರಣ್ಣಗೌಡ ದೇವಸ್ಥಾನ ಹಾಗೂ ಗ್ರಾಮದ ಮುಖಂಡ ನಾಗರಾಜ, ರಾಜಣ್ಣ, ಪರಶುರಾಮ ಮತ್ತಿತರರು ಹಾಜರಿದ್ದರು.