ವೈಫಲ್ಯ ಮುಚ್ಚಿಕೊಳ್ಳಲು ರಾಜ್ಯ ಸರ್ಕಾರ ತಂತ್ರ: ಕೋಟಾ ಆರೋಪ

| Published : Mar 25 2024, 12:52 AM IST

ವೈಫಲ್ಯ ಮುಚ್ಚಿಕೊಳ್ಳಲು ರಾಜ್ಯ ಸರ್ಕಾರ ತಂತ್ರ: ಕೋಟಾ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಂಡು ಪ್ರಚಾರ ಪಡೆಯುವ ದೃಷ್ಠಿಯಿಂದ ಕೆಲವೊಂದು ತಂತ್ರ ಮಾಡುತ್ತಿದೆ ಎಂದು ಉಡುಪಿ-ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಆರೋಪಿಸಿದರು.

ಶಕ್ತಿಯಿಲ್ಲದ ಸರ್ಕಾರದಿಂದ ಸುಪ್ರೀಮ್‌ಗೆ ಹೋಗುವ ನಾಟಕ । ರಂಭಾಪುರಿ ಪೀಠದಲ್ಲಿ ಶ್ರೀಗಳ ಆಶೀರ್ವಾದ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಂಡು ಪ್ರಚಾರ ಪಡೆಯುವ ದೃಷ್ಠಿಯಿಂದ ಕೆಲವೊಂದು ತಂತ್ರ ಮಾಡುತ್ತಿದೆ ಎಂದು ಉಡುಪಿ-ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಆರೋಪಿಸಿದರು.

ರಂಭಾಪುರಿ ಪೀಠದಲ್ಲಿ ಭಾನುವಾರ ಸುದ್ದಿಗಾರರೋಂದಿಗೆ ಮಾತನಾಡಿ, ವಿಪರೀತ ಬರ ಬಂದ ಸಂದರ್ಭದಲ್ಲಿ ಸಮಸ್ಯೆಗಳನ್ನು ಪರಿಹರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ತಿಳಿಸಿದರು.

ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಕರ್ನಾಟಕದಲ್ಲಿ ವಿಪರೀತ ಪ್ರವಾಹ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ಮನೆ ಕಳೆದುಕೊಂಡವರಿಗೆ ₹ 5 ಲಕ್ಷ ಪರಿಹಾರ ಘೋಷಿಸಿ, ಲಕ್ಷಾಂತರ ಮನೆಗಳಿಗೆ ಪರಿಹಾರ ನೀಡಲಾಗಿತ್ತು.

ಅದೇ ರೀತಿ ಇಂದು ಬರ ಬಂದಾಗ ₹10 ಸಾವಿರ ಕೋಟಿ ಬಿಡುಗಡೆ ಮಾಡಿ ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರೂ ಒಂದು ರೂಪಾಯಿಯನ್ನು ನೀಡಿಲ್ಲ. ಕೇಂದ್ರದ ಹಣ ಬಂದೇ ಬರುತ್ತದೆ ಎಂದು ತಿಳಿಸಿದರೂ ರಾಜ್ಯ ಸ್ಪಂದಿಸಿಲ್ಲ. ₹324 ಕೋಟಿಯನ್ನು ಬರಕ್ಕಾಗಿ ಬಿಡುಗಡೆ ಮಾಡಿದ್ದೇವೆ ಎಂದು ಸದನದಲ್ಲಿ ಹೇಳಿಕೆ ನೀಡಿದ್ದರು. ಅದನ್ನು ಪರಿಶೀಲಿಸಿದಾಗ ಅದರಲ್ಲಿ ಶೇ.75ರಷ್ಟು ಕೇಂದ್ರದ ಹಣವಿತ್ತು. ಶೇ.25 ಹಣ ನಾವು ಜೋಡಿಸುತ್ತೇವೆ ಎಂದು ಬಳಿಕ ಹೇಳಿಕೆ ನೀಡಿದ್ದಾರೆ ಎಂದರು.

ಕೇಂದ್ರ ರಾಜ್ಯಕ್ಕೆ ಪ್ರತೀ ತಿಂಗಳು 22 ಲಕ್ಷ ಕ್ವಿಂಟಾಲ್ ಅಕ್ಕಿ ಕಳುಹಿಸುತ್ತಿದೆ. ಇದೂ ಕೂಡ ನಮ್ಮದೇ ಅನ್ನಭಾಗ್ಯ ಎನ್ನುತ್ತಾರೆ. ಬರ ಎದುರಿಸಲಾಗದೆ, ಜನ ಜಾನುವಾರು ಗುಳೆ ಹೋಗುವ ಪರಿಸ್ಥಿತಿ ಎದುರಾದಾಗ ತನ್ನಲ್ಲಿ ಶಕ್ತಿ ಇಲ್ಲದ ರಾಜ್ಯ ಸರ್ಕಾರ ಸುಪ್ರೀಂ ಕೊರ್ಟ್ ಗೆ ಹೋಗುವ ನಾಟಕ ಮಾಡಿದೆ. ಇದು ವಿಫಲತೆ ಮುಚ್ಚುವ ತಂತ್ರವೇ ಹೊರತು ಕೇಂದ್ರ ಸರ್ಕಾರದ ಗೊಂದಲವಲ್ಲ ಎಂದು ಸ್ಪಷ್ಟಪಡಿಸಿದರು.ಚಿಕ್ಕಮಗಳೂರಿನಲ್ಲಿ ಅಡಕೆ, ಕಾಫಿ ಬೆಳೆಗಾರರು ಹೆಚ್ಚು ಇದ್ದಾರೆ. ಬಗರ್‌ಹುಕುಂ, ಅಡಕೆ ಹಳದಿ ಎಲೆ ರೋಗ ಮುಂತಾದ ಭೌಗೋಳಿಕ ಸಮಸ್ಯೆ ಇರುವ ಪ್ರದೇಶ. ಉಡುಪಿ ಜಿಲ್ಲೆ ಕೃಷಿ ಮತ್ತು ಮೀನುಗಾರಿಕೆಗೆ ಹೆಸರಾದ ಜಿಲ್ಲೆ.ಉಡುಪಿಯಲ್ಲಿ ನಾನು ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದು, 4 ಬಾರಿ ಶಾಸಕ, 3 ಬಾರಿ ಮಂತ್ರಿ, 2 ಬಾರಿ ವಿರೋಧ ಪಕ್ಷದ ನಾಯಕನಾಗಿ, ಗ್ರಾಪಂನಿಂದ ಎಂಎಲ್‌ಸಿವರೆಗಿನ ರಾಜಕೀಯ ಚಟುವಟಿಕೆಗಳು ನಡೆಸಿದ್ದೇನೆ ಎಂದರು.ಚಿಕ್ಕಮಗಳೂರಿನ ಅಡಕೆ, ಕಾಫಿ ಬೆಳೆಗಾರರು ಸೇರಿದಂತೆ ರೈತರ ಎಲ್ಲಾ ಸಮಸ್ಯೆ ಬಗೆಹರಿಸುವುದು ನನ್ನ ಆದ್ಯತೆ. ನಾನು ಸಂಸದನಾಗಿ ಆಯ್ಕೆಗೊಂಡಲ್ಲಿ ಜಿಲ್ಲೆಯಲ್ಲಿನ ರೇಲ್ವೇ ಯೋಜನೆ ವಿಸ್ತರಣೆ, ಅಗತ್ಯ ಮೂಲಭೂತ ಸೌಕರ್ಯ, ಪ್ರಧಾನಮಂತ್ರಿ ಯೋಜನೆ ರಸ್ತೆ ನಿರ್ಮಾಣ, ಜಲಜೀವನ ಯೋಜನೆ ಸೇರಿದಂತೆ ಎಲ್ಲಾ ಯೋಜನೆಗಳ ಮೂಲಕ ಸರ್ವತೋಮುಖ ಅಭಿವೃದ್ಧಿ ಉದ್ದೇಶವಿದೆ. ನಿಶ್ಚಿತವಾಗಿ ಜನರ ಜೊತೆ ನಿಂತು ಅಭಿವೃದ್ಧಿ ಕಾರ್ಯ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಸಿದರು.

ಮಾಜಿ ಸಚಿವ ಡಿ.ಎನ್.ಜೀವರಾಜ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ್ ಶೆಟ್ಟಿ, ಬಿಜೆಪಿ ರೈತ ಮೋರ್ಚಾದ ರಾಜ್ಯ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ, ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಮಾಲತೇಶ್ ಸಿಗಸೆ, ಕಾಫಿ ಮಂಡಳಿ ಸದಸ್ಯೆ ಭಾಸ್ಕರ್ ವೆನಿಲ್ಲಾ, ಮುಖಂಡರಾದ ಟಿ.ಎಂ.ಉಮೇಶ್ ಕಲ್ಮಕ್ಕಿ, ಪ್ರಭಾಕರ್ ಪ್ರಣಸ್ವಿ, ಬಿ.ಜಗದೀಶ್ಚಂದ್ರ, ಕೆ.ಟಿ.ವೆಂಕಟೇಶ್, ಶಶಿ ಆಲ್ದೂರು, ಪ್ರೇಮೇಶ್ ಮಾಗಲು ಮತ್ತಿತರರು ಹಾಜರಿದ್ದರು.

--(ಬಾಕ್ಸ್)--

ಕನ್ನಡದಲ್ಲೆ ಪ್ರಮಾಣ ವಚನ: 6 ತಿಂಗಳಲ್ಲಿ ಹಿಂದಿ ಕಲಿಯುವೆ

ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ನನಗೆ ಹಿಂದಿ ಬರುವುದಿಲ್ಲ ಎಂದು ಹೇಳಿದ್ದಾರೆ. ನಾನು ಸಾಮಾನ್ಯ ಕೂಲಿ ಮಾಡುವ ಕುಟುಂಬದಲ್ಲಿ ಹುಟ್ಟಿ ಬೆಳೆದವನು. ಹಾಗಾಗಿ ಇಂಗ್ಲೀಷ್ ಮತ್ತು ಹಿಂದಿ ನನಗೆ ಬರುವುದಿಲ್ಲ.

ಹೆಗ್ಡೆ ಅವರು ನನ್ನ ಮೇಲಿನ ಪ್ರೀತಿ, ಅಭಿಮಾನದಿಂದ ನಾನು ಮುಜುಗರ ಅನುಭವಿಸಬಾರದು ಎಂದು ಹೇಳಿದ್ದಾರೆ. ಹಿರಿಯ ರಾದ ಜಯಪ್ರಕಾಶ್ ಹೆಗ್ಡೆಯವರಲ್ಲಿ ನಾನು ಈ ಬಗ್ಗೆ ಮನವರಿಕೆ ಮಾಡಲಿದ್ದು, ನಿಮ್ಮ ಪ್ರೀತಿ ನನಗೆ ಅರ್ಥವಾಗಿದ್ದು, ಲೋಕ ಸಭೆ ನಾನು ಆಯ್ಕೆಗೊಂಡ ಬಳಿಕ ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸುತ್ತೇನೆ. ಸದನ ಪ್ರವೇಶಿಸಿದ 6 ತಿಂಗಳಲ್ಲಿ ಹಿಂದಿ ಕಲಿತು ಭಾಷಣ ಮಾಡಿ ಬರುತ್ತೇನೆ ಎಂದು ತಿರುಗೇಟು ನೀಡಿದರು.

(ಬಾಕ್ಸ್)ರಂಭಾಪುರಿ ಶ್ರೀ ಆಶೀರ್ವಾದ

ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸಪೂಜಾರಿ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ದೇವಾಲಯ, ಜಗದ್ಗುರು ರೇಣುಕಾಚಾರ್ಯ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಶ್ರೀ ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಸ್ವಾಮೀಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಶ್ರೀಗಳು ಫಲ ಮಂತ್ರಾಕ್ಷತೆ ನೀಡಿ ಹಾರೈಸಿದರು.೨೪ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸಪೂಜಾರಿ ಶ್ರೀ ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಸ್ವಾಮೀಜಿ ಆಶೀರ್ವಾದ ಪಡೆದರು. ಮಾಜಿ ಸಚಿವ ಡಿ.ಎನ್.ಜೀವರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜಶೆಟ್ಟಿ, ಕಲ್ಮರುಡಪ್ಪ, ಭಾಸ್ಕರ್, ಉಮೇಶ್ ಕಲ್ಮಕ್ಕಿ, ಮಾಲತೇಶ್ ಇದ್ದರು.