ರಾಜ್ಯ ಸರ್ಕಾರ ಕೃಷಿ ಕಾಯ್ದೆ ಹಿಂಪಡೆಯಲಿ: ಎಂ.ಜಡೆಪ್ಪ

| Published : Jul 22 2025, 12:00 AM IST

ರಾಜ್ಯ ಸರ್ಕಾರ ಕೃಷಿ ಕಾಯ್ದೆ ಹಿಂಪಡೆಯಲಿ: ಎಂ.ಜಡೆಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತರ ಹುತಾತ್ಮ ದಿನವನ್ನು ನಗರದ ಗಾಂಧಿಚೌಕ್ ವೃತ್ತದ ಹತ್ತಿರ ಸೋಮವಾರ ಆಚರಣೆ ಮಾಡಲಾಯಿತು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಕಾರ್ಯಾಧ್ಯಕ್ಷ

ಕನ್ನಡಪ್ರಭ ವಾರ್ತೆ ಹೊಸಪೇಟೆ

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತರ ಹುತಾತ್ಮ ದಿನವನ್ನು ನಗರದ ಗಾಂಧಿಚೌಕ್ ವೃತ್ತದ ಹತ್ತಿರ ಸೋಮವಾರ ಆಚರಣೆ ಮಾಡಲಾಯಿತು.

ರೈತ ಮುಖಂಡ ಸಣ್ಣಕ್ಕಿ ರುದ್ರಪ್ಪ ಮಾತನಾಡಿ, ರೈತರು ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದು, ಅದರಲ್ಲಿ ಮುಖ್ಯವಾಗಿ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಿಸುವ ಬಗ್ಗೆ ಅನೇಕ ಬಾರಿ ಮುಖ್ಯಮಂತ್ರಿಯವರಿಗೆ, ಸಚಿವರಿಗೆ, ಶಾಸಕರಿಗೆ, ಹಾಗೂ ಇತರೆ ಸ್ಥಳೀಯ ಎಲ್ಲಾ ಗೌರವಾನ್ವಿತ ಅಧಿಕಾರಿ ವರ್ಗಗಕ್ಕೂ ಮನವಿ ಮಾಡಿಕೊಂಡರೂ ಇದುವರೆಗೆ ಯಾವುದೇ ಕ್ರಮವನ್ನು ಜರುಗಿಸದೇ ಇರುವುದು ಬೇಸರದ ಸಂಗತಿಯಾಗಿದೆ ಎಂದರು.

ನಗರದಲ್ಲಿ ಮೇ 20ರಂದು ನಡೆದ ಸಾಧನಾ ಸಮಾವೇಶದಲ್ಲಿ ಎರಡು ತಿಂಗಳು ಗಡುವಿನಲ್ಲಿ ಸಕ್ಕರೆ ಸ್ಥಾಪನೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹಮದ್‌ ಖಾನ್‌ ಆಶ್ವಾಸನೆ ನೀಡಿದ್ದರು. ಆದರೆ ಇದುವರೆಗೂ ಸಕ್ಕರೆ ಕಾರ್ಖಾನೆ ಆರಂಭದ ಲಕ್ಷಣಗಳಿಲ್ಲ. ಹೊಸಪೇಟೆ ಭಾಗದಲ್ಲಿಯೇ 5 ಲಕ್ಷ ಟನ್ ನಷ್ಟು ಕಬ್ಬು ಬೆಳೆಯಲಾಗುತ್ತದೆ. ಈ ಕೂಡಲೇ ಸಕ್ಕರೆ ಕಾರ್ಖಾನೆ ಆರಂಭಿಸಬೇಕು. ಇಲ್ಲವಾದಲ್ಲಿ ಹೋರಾಟ ಅನಿವಾರ್ಯ ಎಂದರು.

ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಜಡೆಪ್ಪ ಮಾತನಾಡಿ, ಈ ಹಿಂದೆ ಬಿಜೆಪಿ ಸರ್ಕಾರ ಜಾರಿ ಮಾಡಿದ ಕೃಷಿ ಕಾಯ್ದೆಗಳನ್ನು ಈಗಿನ ಕಾಂಗ್ರೆಸ್ ಸರ್ಕಾರ ಕೂಡ ಮುಂದುವರೆಸಿಕೊಂಡು ಹೋಗುತ್ತಿರುವುದು ತುಂಬಾ ವಿಪರ್ಯಾಸ ಸಂಗತಿಯಾಗಿದೆ. ಈ ಕಾಯ್ದೆಗಳನ್ನು ಕೂಡಲೇ ವಾಪಸ್‌ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧ್ಯಕ್ಷರಾದ ಟಿ.ನಾಗರಾಜ್ ಮಾತನಾಡಿ, ಈ ವರ್ಷದ ಮುಂಗಾರು ಬೇಗನೆ ಆರಂಭವಾಗಿರುವುದರಿಂದ ಯೂರಿಯಾ, ಗೊಬ್ಬರ, ರೈತರಿಗೆ ತುಂಬಾ ಅಭಾವವಾಗಿರುತ್ತದೆ. ಈ ಕೂಡಲೇ ರೈತರಿಗೆ ಸಮರ್ಪಕವಾಗಿ ಯೂರಿಯಾ ಗೊಬ್ಬರವನ್ನು ಪೂರೈಸಬೇಕು ಮತ್ತು ಕಳೆದ ವರ್ಷ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್ ಮುರಿದು ಹೋಗಿದ್ದು, ಹೊಸದಾಗಿ ಗೇಟ್‌ಗಳನ್ನು ನಿರ್ಮಾಣ ಮಾಡಿ ಅಳವಡಿಸಬೇಕು. ಜಲಾಶಯದಲ್ಲಿ ಈಗ ಕೇವಲ ೮೦ ಟಿಎಂಸಿ ನೀರನ್ನು ಸಂಗ್ರಹಿಸಲಾಗುತ್ತಿದೆ. ಇದರಿಂದ ರೈತರಿಗೆ ಎರಡು ಬೆಳೆ ನೀರು ಸಾಕಾಗುವುದಿಲ್ಲ. ಆದಷ್ಟು ಬೇಗ ಎಲ್ಲಾ ಗೇಟ್‌ಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಆರ್.ಆರ್.ತಾಯಪ್ಪ, ವಿ.ಗಾಳೆಪ್ಪ, ಮೂರ್ತಿ, ರೇವಣಸಿದ್ದಪ್ಪ, ಕೆ.ಜಹಿರುದ್ದೀನ್, ಕೆ.ಸುರೇಶ್, ಕೆ.ಮಲ್ಲಿಕಾರ್ಜುನ, ಎಲ್.ನಾಗೇಶಿ, ಜಿ.ಹನುಮಂತ ರೆಡ್ಡಿ, ಎಂ.ಯರ‍್ರಿಸ್ವಾಮಿ, ನಲ್ಲಾಪುರ ಬಸವರಾಜ್, ಜೆ.ಕೊಟ್ರಪ್ಪ, ಅಯ್ಯಣ್ಣ, ಸತೀಶ, ಎಚ್. ಹನುಮಂತ ರೆಡ್ಡಿ, ಅಂಕ್ಲೇಶ್, ಜಾಕೀರ್ ಮತ್ತಿತರರಿದ್ದರು.