ಸಾರಾಂಶ
ಕನ್ನಡಪ್ರಭ ವಾರ್ತೆ ಅಫಜಲ್ಪುರ
ಲೋಕಸಭಾ ಚುನಾವಣೆಯಾದ ಮೇಲೆ ಬಿಜೆಪಿ ನೇತೃತ್ವದ ಮಿತ್ರಕೂಟ ಬಹುಮತ ಪಡೆಯುತ್ತದೆ, ಮೋದಿಯವರು 3ನೇ ಬಾರಿಗೆ ಪ್ರಧಾನಿಯಾಗುತ್ತಾರೆ, ಆಗ ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿನ ಕಾಂಗ್ರೆಸ್ ಸರ್ಕಾರ ಢಮಾರ್ ಆಗಲಿದೆ ಎಂದು ವಿಜಯಪುರದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಭವಿಷ್ಯ ನುಡಿದಿದ್ದಾರೆ.ಅವರುತಾಲೂಕಿನ ಮಾಶಾಳ ಗ್ರಾಮದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆದ ಕರಜಗಿ ಮತ್ತು ಮಾಶಾಳ ಜಿಪಂ ಮತಕ್ಷೇತ್ರದ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿ, ದೇಶದಲ್ಲಿ ನೆಮ್ಮದಿಯಿಂದ ಜೀವನ ನಡೆಸಬೇಕಾದರೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದರು.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಭಾರಿ ಜನಬೆಂಬಲದೊಂದಿಗೆ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು, ಕೇಂದ್ರದಲ್ಲಿ ಮೋದಿ ಪ್ರಧಾನಿಯಾದ ತಕ್ಷಣದಲ್ಲಿ ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಉರುಳುವುದು ಖಚಿತ ಎಂದರು.ಜಗತ್ತಿನ ಯಾವ ಶಕ್ತಿ ಕೂಡ ಎದುರಾದರೂ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಅಖಿಲೇಶ್ ಯಾದವ್, ಮಮತಾ ಬ್ಯಾನರ್ಜಿ ಮತ್ತಿತರರು ಒಂದಾದರೂ ಕೂಡಾ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗುವುದು ನಿಚ್ಚಳಗೊಂಡಿದೆ. ಬಳಿಕ ರಾಜಕಾರಣದಲ್ಲಿ ದೊಡ್ಡ ತಿರುವು ಉಂಟಾಗಲಿದ್ದು ನಿತಿನ್ ಗುತ್ತೇದಾರ್, ಚಂದು ಪಾಟೀಲ್ ಮುಂತಾದ ನಾಯಕರು ಭವಿಷ್ಯದ ಶಾಸಕರಾಗಲಿದ್ದಾರೆಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ನಿರಂತರವಾಗಿ ಹಿಂದೂ ಕಾರ್ಯಕರ್ತರ ಕೊಲೆಗಳು ಹೆಚ್ಚಾಗಿ ನಡೆಯುತ್ತಿವೆ ಎಂದು ದೂರಿದ ಯಾತ್ನಾಳ್ ಅವರು, ಬಿಜೆಪಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸುಳ್ಳು ಹೇಳುತ್ತಿದ್ದಾರೆಂದರು.ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಮಾತನಾಡಿ, ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ಬಿಜೆಪಿಗೆ ಮತ ಹಾಕಿ ನನಗೆ ಗೆಲ್ಲಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ್ ಪಾಟೀಲ್ ಅವರು ನಿರಂತರವಾಗಿ ಬಿಜೆಪಿ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಸನಾತನ ಧರ್ಮ, ಮುಂದಿನ ಯುವ ಪೀಳಿಗೆಯ ಭವಿಷ್ಯಕ್ಕಾಗಿ ಬಿಜೆಪಿ ಪಕ್ಷಕ್ಕೆ ಮತ ಹಾಕಿ, ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುವ ದೇಶದ್ರೋಹಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲ ನೀಡುತ್ತಾರೆಂದು ತಿವಿದರು.
ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ಮಾತನಾಡಿ, ಉಮೇಶ್ ಜಾಧವ್ ಅವರ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ. ಮತದಾರರು ಯಾರೂ ಅಪಪ್ರಚಾರಗಳಿಗೆ ಕಿವಿಗೊಡದೇ ಮೋದಿ ಅವರಿಗೆ ಮತ್ತೊಮ್ಮೆ ಪ್ರಧಾನಿಯಾಗಲು ಮತದಾನ ಮಾಡಬೇಕೆಂದರು.ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ನಾಟೀಕಾರ್, ಶಾಸಕ ಬಸವರಾಜ ಮೂತ್ತಿಮೂಡ,ಚಂದು ಪಾಟೀಲ, ಶಿವರಾಜ್ ಪಾಟೀಲ ರದ್ದೇವಾಡಗಿ, ಶಿವಕುಮಾರ ನಾಟೀಕಾರ, ಅವ್ವಣ್ಣ ಮ್ಯಾಕೇರಿ, ವಿದ್ಯಾಧರ ಮಂಗಳೂರೆ, ವಿಶ್ವನಾಥ ರೇವೂರ, ರಮೇಶ ಬಾಕೆ, ಮಲ್ಲಿಕಾರ್ಜುನ ನಿಂಗದಳ್ಳಿ, ಸಿದ್ದಾಜೀ ಪಾಟೀಲ್, ಅಶೋಕ ಬಗಲಿ, ರಾಜಶೇಖರ ಜಿಡ್ಡಗಿ, ಭೀರಣ್ಣಾ ಕಲ್ಲೂರ, ಶರಣು ಪದಕಿ, ಚಂದಮ್ಮ ಪಾಟೀಲ್, ತುಕಾರಾಮಗೌಡ ಪಾಟೀಲ್, ಶಂಕರ ಮ್ಯಾಕೇರಿ, ಸುಭಾಷ್ ರಾಠೋಡ, ಸುರೇಖಾ ಪದಕಿ ಇದ್ದರು.