ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಪ್ರತಿ ಟನ್ ಗೆ 1500 ರೂ. ಹೆಚ್ಚುವರಿ ದರ ನೀಡಬೇಕು. ಬಣ್ಣಾರಿ ಸಕ್ಕರೆ ಕಾರ್ಖಾನೆ ಮುಂದೆ ತಕ್ಷಣ ತೂಕದ ಯಂತ್ರ ಅಳವಡಿಸುವುದು ಸೇರಿದಂತೆ ರೈತರ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದವರು ಜಿಲ್ಲಾಧಿಕಾರಿ ಕಚೇರಿ ಬಳಿ ಶುಕ್ರವಾರ ಪ್ರತಿಭಟಿಸಿದರು.ರಾಜ್ಯ ಸರ್ಕಾರ ರೈತರಿಗೆ ಕಬ್ಬಿನ ಕಾರ್ಖಾನೆಗಳಿಂದ ಮೋಸ ಆಗುತ್ತಿದ್ದರೂ ಕಾರ್ಖಾನೆಗಳ ಮುಂದೆ ತೂಕದ ಯಂತ್ರ ಹಾಕುವಲ್ಲಿ ಸರ್ಕಾರ ವಿಫಲವಾಗುತ್ತಿದೆ. ಹೀಗಾಗಿ, ತಕ್ಷಣ ತೂಕದ ಯಂತ್ರ ಅಳವಡಿಸಲು ಕ್ರಮ ಕೈಗೊಳ್ಳಬೇಕು. ಪ್ರಸಕ್ತ ಸಾಲಿಗೆ ಕೇವಲ 3295 ರೂ. ಮಾತ್ರ ಪ್ರತಿ ಟನ್ ಗೆ ರೈತರಿಗೆ ಸಿಗುತ್ತದೆ. ಕಟಾವು ಸಾಗಾಣಿಕೆ ಎಲ್ಲವನ್ನೂ ಕಳೆದು ಕೇವಲ 2000 ಮಾತ್ರ ಸಿಗುತ್ತಿದೆ. ಉತ್ಪಾದನಾ ವೆಚ್ಚ ಜಾಸ್ತಿ ಆಗಿರುವುದರಿಂದ ರಾಜ್ಯ ಸಲಹಾ ಬೆಲೆ ಕಾಯ್ದೆ ಅಡಿಯಲ್ಲಿ ಪ್ರತಿ ಟನ್ ಗೆ 1500 ರೂ. ಹೆಚ್ಚುವರಿ ದರ ನೀಡಬೇಕು. ಕಟಾವು ಸಾಗಣಿಕೆಯನ್ನು ಕಾರ್ಖಾನೆ ಅವರು ಮಾಡುತ್ತಿಲ್ಲ. ಕಾರ್ಖಾನೆ ಮಾಲೀಕರಿಗೆ ಇದನ್ನು ವಹಿಸಬೇಕು. ಇಳುವರಿಯಲ್ಲಿ ಮೋಸ ತೋರುತ್ತಿದ್ದು ತಜ್ಞರ ಸಮಿತಿ ನೇಮಕ ಮಾಡಿ ರೈತರನ್ನು ಸೇರಿಸಬೇಕು ಎಂದು ಅವರು ಒತ್ತಾಯಿಸಿದರು.
ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಭತ್ತ ಖರೀದಿ ಕೇಂದ್ರ ಸರ್ಕಾರದ ಎಫ್‌ಆರ್ ಪಿ ಜೊತೆಗೆ ರಾಜ್ಯ ಸರ್ಕಾರ ಹೆಚ್ಚುವರಿ ಆಗಿ ಬೆಲೆ ನಿಗದಿ ಮಾಡಿ 3500 ರೂ. ಬೆಲೆಗೆ ಖರೀದಿ ಆದೇಶ ನೀಡಬೇಕು. ಹೋಬಳಿ ಮಟ್ಟದಲ್ಲಿ ತೆರೆಯಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಭತ್ತ ಖರೀದಿ ಕೇಂದ್ರಗಳನ್ನು ತೆರೆಯಲು ರಾಜ್ಯ ಸರ್ಕಾರ ಸೂಚನೆ ನೀಡಬೇಕು ಎಂದು ಅವರು ಆಗ್ರಹಿಸಿದರು.ಜಿಲ್ಲೆಯ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆ ವಿಸ್ತರಿಸಬೇಕು. ಗ್ರಾಮೀಣ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು ಬೆಳೆ ನಷ್ಟ ಪರಿಹಾರ ಅಂದಾಜು ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಕಾಡು ಪ್ರಾಣಿಗಳಿಂದ ಆದಂತಹ ಬೆಳೆ ನಷ್ಟಕ್ಕೆ ವೈಜ್ಞಾನಿಕವಾಗಿ ಬೆಳೆ ನಷ್ಟ ನೀಡಬೇಕು. ರೈತನ ಹೊಲದಲ್ಲಿನ ಬೆಳೆ ವಿಮೆ ನಿರ್ಧಾರ ಆಗಬೇಕು ಎಂದು ಅವರು ಒತ್ತಾಯಿಸಿದರು.
ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಮುಖಂಡರಾದ ಹಂಡುವಿನಹಳ್ಳಿ ರಾಜು, ಕೆರೆಹುಂಡಿ ರಾಜಣ್ಣ, ಹನುಮಯ್ಯ, ವಳಗೆರೆ ಗಣೇಶ್, ಮಲಿಯೂರು ಮಹೇಂದ್ರ, ಸತೀಶ್, ಚಿದಂಬರ, ಸಿದ್ದರಾಮಪ್ಪ, ದೇವನೂರು ನಾಗೇಂದ್ರ, ಮುದ್ದಹಳ್ಳಿ ಮಧು, ಹಂಡುವಿನಹಳ್ಳಿ ಮರಿಸ್ವಾಮಿ, ಚೇತನ್ ಕೆರೆಹುಂಡಿ, ಶಿವಣ್ಣ, ಸುಜ್ಜಲೂರು ಜಯಸ್ವಾಮಿ, ದೇವಿರಮ್ಮನಹಳ್ಳಿ ಪ್ರಭುಸ್ವಾಮಿ, ಸಿದ್ದುಬಸಪ್ಪ ಮೊದಲಾದವರು ಇದ್ದರು.