ಸಾರಾಂಶ
ಕರ್ನಾಟಕದಲ್ಲಿ ಸಹಕಾರ ಕ್ಷೇತ್ರ ಅಶಕ್ತ ಆಗುತ್ತಿದ್ದು, ರಾಜ್ಯ ಸರ್ಕಾರ ಈ ಕ್ಷೇತ್ರಕ್ಕೆ ಬಲ ತುಂಬುವ ಕೆಲಸ ಮಾಡಬೇಕಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಧಾರವಾಡ: ಕರ್ನಾಟಕದಲ್ಲಿ ಸಹಕಾರ ಕ್ಷೇತ್ರ ಅಶಕ್ತ ಆಗುತ್ತಿದ್ದು, ರಾಜ್ಯ ಸರ್ಕಾರ ಈ ಕ್ಷೇತ್ರಕ್ಕೆ ಬಲ ತುಂಬುವ ಕೆಲಸ ಮಾಡಬೇಕಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಇಲ್ಲಿಯ ಸತ್ತೂರಿನ ಎಸ್.ಡಿ.ಎಂ. ಕಲಾಕ್ಷೇತ್ರದಲ್ಲಿ ಭಾನುವಾರ ನಡೆದ ರಡ್ಡಿ ಬ್ಯಾಂಕ್ ಶತಮಾನೋತ್ಸವ ನಿಮಿತ್ತ ನಡೆದ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಹಕಾರ ಕ್ಷೇತ್ರ ಹಲವು ಕಾರಣಗಳಿಂದ ಕ್ಷೀಣಿಸುತ್ತಿದೆ. ಈ ಮೂಲಕ ಮಧ್ಯಮ ವರ್ಗದ ಜನರು ತೊಂದರೆಗೆ ಒಳಗಾಗುವಂತೆ ಆಗಿದೆ. ಇದರಿಂದ ಕಾರ್ಪೊರೇಟ್ ವ್ಯವಸ್ಥೆಗೆ ಸಲಾಂ ಹೊಡೆಯುತ್ತಿದ್ದು, ನಾಜೂಕಾದ ಈ ಸ್ಥಿತಿಯಲ್ಲಿ ಸರ್ಕಾರ ಈ ಕ್ಷೇತ್ರಕ್ಕೆ ಬಲ ತುಂಬಬೇಕಿದೆ ಎಂದರು.
ಸಹಕಾರ ಕ್ಷೇತ್ರ ಸಾರ್ವಜನಿಕ ಆಸ್ತಿ ಸೃಷ್ಟಿ ಮಾಡಿದೆ. ಆದರೆ, ರಾಜಕೀಯ ಹಾಗೂ ಆಡಳಿತಾತ್ಮಕ ಕಾರಣದಿಂದ ಸಹಕಾರ ಸಂಸ್ಥೆಗಳ ಸಾರ್ವಜನಿಕ ಆಸ್ತಿಯು ವೈಯಕ್ತಿಕ ಆಸ್ತಿಯಾಗಿ ಪರಿವರ್ತನೆ ಆಗುತ್ತಿರುವುದು ಬೇಸರದ ಸಂಗತಿ. ಹಲವು ಸಹಕಾರಿ ಸಂಸ್ಥೆಗಳ ಆಸ್ತಿ ಕಬಳಿಸುವ ಹುನ್ನಾರ ನಡೆಯುತ್ತಿದ್ದು, ಅದನ್ನು ನಿಲ್ಲಿಸುವ ಸವಾಲು ಸರ್ಕಾರದ ಮೇಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿದ್ದ ವೇದಿಕೆಯಲ್ಲಿ ಎಚ್. ಕೆ. ಪಾಟೀಲ ಮನವಿ ಮಾಡಿದರು.ಸಹಕಾರ ಕ್ಷೇತ್ರ ನಿಸ್ವಾರ್ಥ ಸೇವಾ ಕ್ಷೇತ್ರ. ಹೀಗಾಗಿ, ಈ ಕ್ಷೇತ್ರಕ್ಕೆ ಯುವ ಪೀಳಿಗೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಯುವ ಜನತೆಗೆ ಆಕರ್ಷಣೆ ಯೋಜನೆ ಜಾರಿ ಮಾಡಬೇಕಿದೆ ಎಂದರು.