ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ಆರ್ಥಿಕವಾಗಿ ದಿವಾಳಿಯಾಗಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ಲೋಕಸಭಾ ಚುನಾವಣೆ ನಂತರ ಪತನಗೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಶನಿವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರ ಜಾರಿಗೆ ತಂದ ಕಿಸಾನ್ ಸಮ್ಮಾನ್ ಯೋಜನೆ ಸೇರಿ ತಮ್ಮ ಅಧಿಕಾರವಧಿಯಲ್ಲಿ ರೂಪಿಸಿದ ಭಾಗ್ಯಲಕ್ಷ್ಮೀ ಯೋಜನೆ ಸ್ಥಗಿತಗೊಳಿಸಿದ್ದಾರೆ. ಇಂದು ಬಡವರಿಗೆ ನ್ಯಾಯಬೆಲೆ ಅಂಗಡಿಯಲ್ಲಿ ಉಚಿತವಾಗಿ ನೀಡುತ್ತಿರುವ ೫ ಕೆಜಿ ಅಕ್ಕಿ ಕೇಂದ್ರದ ಬಿಜೆಪಿ ಸರ್ಕಾರದ್ದು. ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಟೋಪಿ ಹಾಕುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಖಜಾನೆ ಖಾಲಿಯಾಗಿರುವುದರಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.ಚುನಾವಣೆ ನಂತರ ಸರ್ಕಾರದ ಬಂಡವಾಳ ಜನತೆಗೆ ತಿಳಿಯುತ್ತದೆ. ದೇಶದಲ್ಲಿ ನಿರೀಕ್ಷೆಗೂ ಮೀರಿ ಗೆಲುವು ಸಾಧಿಸುತ್ತೇವೆ. ನಂತರ ಕಾಂಗ್ರೆಸ್‌ಗೆ ವಿಳಾಸ ಇಲ್ಲದಂತಾಗುತ್ತದೆ ಎಂದ ಅವರು, ಕಾಂಗ್ರೆಸ್ ಹಣ, ಹೆಂಡ, ಜಾತಿ ಬಲದಿಂದ ಚುನಾವಣೆ ಮಾಡಲು ಹೊರಟಿದ್ದು, ಜನತೆ ಇದಕ್ಕೆ ಮಣೆ ಹಾಕಬಾರದು ಎಂದರು.‘ಕೈ’ ಅಧಿಕಾರಕ್ಕೆ ಬಂದ್ರೆ ಒಬಿಸಿಗೆ ಸಂಕಷ್ಟ: ಬಿಎಸ್ವೈಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆ ಚುನಾವಣೆ ಗುಂಗಿನಿಂದ ಇನ್ನೂ ಹೊರಬಂದಿಲ್ಲ. ಅವರಿಗೆ ಲೋಕಸಭೆ ಚುನಾವಣೆ ನಡೆಯುತ್ತಿದೆ ಎಂಬುದೇ ಗೊತ್ತಿಲ್ಲ. ಕಾಂಗ್ರೆಸ್‌ನಲ್ಲಿ ವಿಶ್ವಾಸಾರ್ಹ ನಾಯಕತ್ವವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.ಭಾನುವಾರ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ಸಿಗರು ಕೇಂದ್ರ ಸರ್ಕಾರದ ಅನುದಾನದ ವಿಚಾರದಲ್ಲಿ ಜನರನ್ನು ದಾರಿತಪ್ಪಿಸಿ, ವಿವಾದ ಸೃಷ್ಟಿಸುತ್ತಿದ್ದಾರೆ. ಈ ಮೂಲಕ ಜನರ ಬೆಂಬಲ ಗಳಿಸುವ ಭ್ರಮೆಯಲ್ಲಿದ್ದಾರೆ. ಬಿಜೆಪಿ ಮೋದಿಯ ಸಾಧನೆ ಆಧಾರದಲ್ಲಿ ಚುನಾವಣೆ ಎದುರಿಸುತ್ತಿದ್ದರೆ, ಕಾಂಗ್ರೆಸ್ ಸುಳ್ಳಿನ ಆಧಾರದಲ್ಲಿ ಚುನಾವಣೆ ಎದುರಿಸುತ್ತಿದೆ. ಪ್ರಪಂಚದಲ್ಲಿ ಭಾರತ ಬಲಿಷ್ಠ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ ಎಂದರು.
ಬಿಜೆಪಿ ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಪಡಿಸಿದೆ. ಆದರೆ ಕಾಂಗ್ರೆಸ್ ಸರ್ಕಾರ ಬಂದರೆ ಅದನ್ನು ಮರುಸ್ಥಾಪಿಸುವುದಾಗಿ ಹೇಳಿದೆ. ಕಾಂಗ್ರೆಸ್ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಬಿಸಿ ವರ್ಗದ ಜೀವನ ಕಷ್ಟಕರವಾಗಲಿದೆ ಎಂದು ವಾಗ್ದಾಳಿ ನಡೆಸಿದರು.ಕಾಂಗ್ರೆಸ್ ಅಧಿಕಾರದಲ್ಲಿ ಹನುಮಾನ್ ಚಾಲಿಸಾ ಹೇಳಿದವರ ಮೇಲೆ ದಾಳಿಯಾಗುತ್ತಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ 2ಜಿ ಸ್ಕ್ಯಾಮ್ ನಂತೆ ಹಲವು ಹಗರಣಗಳನ್ನು ಮಾಡಲು ಕನಸು ಕಾಣುತ್ತಿದೆ. ರಾಜ್ಯದಲ್ಲಿ ಬರಗಾಲ ತಾಂಡವಾಡುತ್ತಿದ್ದು, ಬೇಜವಾಬ್ದಾರಿ ಸರ್ಕಾರವಿದೆ. ಎಸ್ಸಿ, ಎಸ್ಟಿಗಳಿಗೆ ಸೇರಿದ 23,000 ಕೋಟಿ ಹಣವನ್ನು ರಾಜ್ಯ ಸರ್ಕಾರ ನುಂಗಿ ನೀರು ಕುಡಿದಿದೆ ಎಂದು ಕಿಡಿಕಾರಿದರು.ಇದು ದೇಶದ ಭವಿಷ್ಯ ನಿರ್ಧಾರ ಮಾಡುವ ಚುನಾವಣೆ: ವಿಜಯೇಂದ್ರಈ ಚುನಾವಣೆ ದೇಶದ ಭವಿಷ್ಯವನ್ನು ನಿರ್ಧರಿಸುವ ಚುನಾವಣೆಯಾಗಿದ್ದು, ಕಳೆದ 10 ವರ್ಷಗಳಿಂದ ಭ್ರಷ್ಟಾಚಾರ ರಹಿತ ಆಡಳಿತ ಕೊಟ್ಟ ಮಹಾನ್ ನಾಯಕ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಚುನಾವಣೆಯಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.ಚುನಾವಣಾ ಪ್ರಚಾರದ ಕೊನೆಯ ದಿನವಾದ ಭಾನುವಾರ ಬೆಳಗ್ಗೆ ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪದಲ್ಲಿ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಪರ ಭರ್ಜರಿ ರೋಡ್ ಶೋ ನಡೆಸಿ ಅವರು ಮಾತನಾಡಿದರು. ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ ಚುನಾವಣೆ ಎದುರಿಸುತ್ತಿದ್ದು, ಕನಿಷ್ಠ 3 ಲಕ್ಷ ಮತಗಳ ಅಂತರದಿಂದ ರಾಘಣ್ಣ ಗೆದ್ದು ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೆಲವರು ಬಿಜೆಪಿಗೆ ಪಾಠ ಕಲಿಸಲು ಹೋಗಿ ತಮ್ಮ ಠೇವಣಿ ಕಳೆದುಕೊಳ್ಳಲಿದ್ದಾರೆ ಎಂದು ಈಶ್ವರಪ್ಪ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಮೊನ್ನೆ ಕಲಬುರಗಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಮುಖಂಡರು ಚುನಾವಣಾ ಭಾಷಣ ಮಾಡಲು ಆಯೋಜಿಸಿ 15-20 ಸಾವಿರ ಕುರ್ಚಿ ಹಾಕಿಸಿದ್ದರು. ಆದರೆ, ಅಲ್ಲಿ ಸೇರಿದ್ದು, ಕೇವಲ 2000 ಜನ ಮಾತ್ರ. ಇದು ಕಾಂಗ್ರೆಸ್‌ನ ಹೀನಾಯ ಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಬಿಜೆಪಿ ರಾಜ್ಯದಲ್ಲಿ ಎಲ್ಲ 28 ಕ್ಷೇತ್ರ ಗೆಲ್ಲಲಿದೆ ಎಂದರು.ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಉತ್ತರ ಭಾರತದಲ್ಲಿ ತಿರಸ್ಕರಿಸಿದ ಕಾರಣ ಅವರು, ಶೇ.60ಕ್ಕೂ ಹೆಚ್ಚು ಮುಸಲ್ಮಾನರಿರುವ ಕೇರಳ ರಾಜ್ಯದ ವಯನಾಡಿನಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರು ಈ ಬಾರಿ ವಯನಾಡಿನಲ್ಲೂ ಸೋಲುತ್ತಾರೆ. ಬಿಜೆಪಿ 400 ಸ್ಥಾನಗಳನ್ನು ಗೆದ್ದು, ಮೋದಿ ಮತ್ತೊಮ್ಮೆ ಪ್ರಧಾನಿ ಆಗುತ್ತಾರೆ. ಕಾಂಗ್ರೆಸ್ ಈ ಬಾರಿ 40 ಕ್ಷೇತ್ರದಲ್ಲಿ ಗೆದ್ದು, ಹೀನಾಯ ಸ್ಥಿತಿ ತಲುಪಲಿದೆ ಎಂದರು.ಇದೇ ವೇಳೆ, ಪ್ರಜ್ವಲ್ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ಕಾನೂನು ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರಜ್ವಲ್ ಕೇಸನ್ನು ಕಾಂಗ್ರೆಸ್ ರಾಜಕೀಯ ಕಾರಣಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.