ಬಾಣಂತಿಯರ ಮರಣದಲ್ಲಿ ರಾಜ್ಯ ಸರ್ಕಾರ ಚೆಲ್ಲಾಟ: ಡಾ. ಶೈಲೇಂದ್ರ ಬೆಲ್ದಾಳೆ

| Published : Jan 07 2025, 12:32 AM IST

ಬಾಣಂತಿಯರ ಮರಣದಲ್ಲಿ ರಾಜ್ಯ ಸರ್ಕಾರ ಚೆಲ್ಲಾಟ: ಡಾ. ಶೈಲೇಂದ್ರ ಬೆಲ್ದಾಳೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಆಡೂರು ಗ್ರಾಮದ ಮೃತ ಬಾಣಂತಿ ರೇಣುಕಾ ಹಿರೇಮನಿ ಮನೆಗೆ ರಾಜ್ಯ ಬಿಜೆಪಿ ಬಾಣಂತಿ ಮತ್ತು ಮಕ್ಕಳ ಸಾವಿನ ಕುರಿತ ಸತ್ಯಶೋಧನಾ ತಂಡ ಭೇಟಿ ನೀಡಿತು.

ಕಳಪೆ, ಅವಧಿ ಮುಗಿದ ಔಷಧದಿಂದ ಸಾವು- ಆರೋಪ

ಆಡೂರು ಗ್ರಾಮದ ಮೃತ ಬಾಣಂತಿ ಮನೆಗೆ ಬಿಜೆಪಿ ಸತ್ಯಶೋಧನಾ ತಂಡ ಭೇಟಿ

ಕನ್ನಡಪ್ರಭ ವಾರ್ತೆ ಕುಕನೂರು

ತಾಲೂಕಿನ ಆಡೂರು ಗ್ರಾಮದ ಮೃತ ಬಾಣಂತಿ ರೇಣುಕಾ ಹಿರೇಮನಿ ಮನೆಗೆ ರಾಜ್ಯ ಬಿಜೆಪಿ ಬಾಣಂತಿ ಮತ್ತು ಮಕ್ಕಳ ಸಾವಿನ ಕುರಿತ ಸತ್ಯಶೋಧನಾ ತಂಡ ಭೇಟಿ ನೀಡಿತು.

ತಂಡದ ನೇತೃತ್ವ ವಹಿಸಿದ್ದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಆರೋಗ್ಯ ಇಲಾಖೆಗೆ ಬರುವ ₹2 ರಿಂದ 3 ಸಾವಿರ ಕೋಟಿ ಅನುದಾನದಲ್ಲಿ ಕೇವಲ ಶೇ.3 ಖರ್ಚು ಮಾಡಿ, ಕೊಳ್ಳೆ ಹೊಡೆಯುತ್ತಿದೆ. ಕಳಪೆ ಹಾಗೂ ಅವಧಿ ಮುಗಿದ ಔಷಧ ಸರಬರಾಜು ಮಾಡಿ ಬಾಣಂತಿಯರ ಸಾವಿನ ಮರಣ ಮೃದಂಗದಲ್ಲಿ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.

ಆಡೂರು ಗ್ರಾಮದ ಬಾಣಂತಿ ಹಾಗೂ ಮಗು ಸಾವಿನ ಪ್ರಕರಣ ಸಾಮಾನ್ಯವಾದದ್ದಲ್ಲ. ವೈದ್ಯರು ಇದರ ಹೊಣೆ ಹೊರಬೇಕು. ಔಷಧ ನೀಡುವ ರಾಜ್ಯ ಸರ್ಕಾರ ಇದಕ್ಕೆ ನೇರ ಹೊಣೆ ಆಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಪಾರ ಸಂಖ್ಯೆಯ ಬಾಣಂತಿಯರ ಸಾವಾಗಿದೆ. ಆರೋಗ್ಯ ಇಲಾಖೆಯಲ್ಲಿ ಈ ಬಗ್ಗೆ ಪರಿಶೀಲನೆ ಆಗುತ್ತಿಲ್ಲ. ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ. ಬಾಣಂತಿಯರ, ಮಗುವಿನ ಸಾವಿನ ಕಾರಣವನ್ನು ರಾಜ್ಯಪಾಲರ ಗಮನಕ್ಕೆ ತರುತ್ತೇವೆ. ಕೇಂದ್ರ ಸರ್ಕಾರಕ್ಕೂ ವರದಿ ನೀಡುತ್ತೇವೆ. ಸಿಐಡಿ, ಎಸ್‌ಐಟಿ ಕಾಂಗ್ರೆಸ್ ಸರ್ಕಾರದ ಕೈಗೊಂಬೆ ಆಗಿವೆ. ಇದನ್ನು ವರಿಷ್ಠರೊಂದಿಗೆ ಚರ್ಚಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ತನಿಖೆಗೆ ನೀಡುತ್ತೇವೆ ಎಂದರು.

ಮೃತ ಬಾಣಂತಿಯರ ಕುಟುಂಬಕ್ಕೆ ರಾಜ್ಯ ಸರ್ಕಾರ ₹ 25 ಲಕ್ಷ ಪರಿಹಾರ, ಮನೆಯವರಿಗೆ ಗ್ರೂಪ್ ಡಿ ಹುದ್ದೆ ನೀಡಬೇಕು ಎಂದು ಒತ್ತಾಯಿಸಿದರು.

ಬಾಣಂತಿ ರೇಣುಕಾ ಬ್ಲಡ್ ಟೆಸ್ಟ್‌ನಲ್ಲಿ ವ್ಯತ್ಯಾಸ ಕಾಣುತ್ತಿದೆ. ಆಕೆಯ ಸಾವಿನನಲ್ಲಿ ವೈದ್ಯರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಸಾವಿನ ನಂತರ ಬಾಣಂತಿ ಹಾಗೂ ಮಗು ಸಾವಿನ ಬಗ್ಗೆ ಎಂಎಲ್‌ಸಿ ಮಾಡದೆ, ಪೋಸ್ಟ್ ಮಾರ್ಟಮ್ ಮಾಡದೆ, ಪ್ರಕರಣ ದಾಖಲಿಸದೆ ವೈದ್ಯರು ಶವವನ್ನು ಮನೆಗೆ ಕಳುಹಿಸಿರುವುದು ಮತ್ತಷ್ಟು ಅನುಮಾನಕ್ಕೆ ದಾರಿ ಮಾಡಿದೆ. ಇದು ವೈದ್ಯರ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯದ ಪ್ರತಸ್ವಾ ಆಗಿದೆ ಎಂದು ಆರೋಪಿಸಿದರು.

ಸತ್ಯಶೋಧನಾ ತಂಡದ ಸದಸ್ಯೆ ಡಾ. ಮಂಜುಳಾ ಮಾತನಾಡಿ, ರಾಜ್ಯದಲ್ಲಿರುವ 2500 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಇದೆ. ಮಾತೃ ವಂದನಾ, ಜನನ ಸುರಕ್ಷಾ ಅನುಷ್ಠಾನದಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಬ್ಲಡ್ ಬ್ಯಾಂಕ್ ಹಾಗು ಐಸಿಯು ವ್ಯವಸ್ಥೆ ಸಹ ಆಗಬೇಕಿದೆ ಎಂದರು.

ಶಾಸಕ ದೊಡ್ಡನಗೌಡ ಪಾಟೀಲ್, ಎಂ.ಎಲ್.ಸಿ ಹೇಮಲತಾ ನಾಯಕ, ಮಾಜಿ ಸಚಿವ ಹಾಲಪ್ಪ ಆಚಾರ್, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮುಖಂಡರಾದ ನವೀನ ಗುಳಗಣ್ಣವರ್, ಬಸವರಾಜ ಕ್ಯಾವಟರ್, ಶಿವಲೀಲಾ ದಳವಾಯಿ, ಮಾರುತಿ ಗಾವರಾಳ, ಡಾ. ನಾರಾಯಣ, ಡಾ. ಅರುಣಾ ಇತರರಿದ್ದರು.

ಕ್ರೀಪ್ಟಿ ಕಂಪನಿ ಬ್ಯಾನ್ ಮಾಡಿದ್ದ ಹಾಲಪ್ಪ

ಕಳಪೆ ಔಷಧ ಸರಬರಾಜು ಮಾಡುತ್ತಿದ್ದ ಕ್ರೀಪ್ಟಿ ಕಂಪನಿಯನ್ನು ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾಗಿದ್ದ ಹಾಲಪ್ಪ ಆಚಾರ್ ರಾಜ್ಯದಲ್ಲಿ ಬ್ಯಾನ್ ಮಾಡಿದ್ದರು. ಆದರೆ ಈಗಿನ ರಾಜ್ಯ ಕಾಂಗ್ರೆಸ್ ಸರ್ಕಾರ ಇಂತಹ ಹಲವಾರು ಕಂಪನಿ ಜೊತೆ ಕೈ ಜೋಡಿಸಿ ರಾಜ್ಯದ ಜನರ ಸಾವಿನ ಜೊತೆಗೆ ಚೆಲ್ಲಾಟವಾಡುತ್ತಿದೆ. ಪಶ್ಚಿಮ ಬಂಗಾಳದ ಕಂಪನಿ ತಯಾರಿಸಿದ 30 ಲಕ್ಷ ಐವಿ ಬಾಟಲ್ ಗಳು ಕಳಪೆ ಆಗಿವೆ ಎಂದು ಶಾಸಕ ಶೈಲೆಂದ್ರ ಬೇಲ್ದಾಳೆ ಆರೋಪಿಸಿದರು.