ಯೂರಿಯಾ ಅಭಾವಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ; ಶ್ರೀರಾಮುಲು

| Published : Jul 29 2025, 01:02 AM IST

ಯೂರಿಯಾ ಅಭಾವಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ; ಶ್ರೀರಾಮುಲು
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಎದುರಾಗಿರುವ ಯೂರಿಯಾ ಸಮಸ್ಯೆಗೆ ರಾಜ್ಯ ಸರ್ಕಾರವೇ ಕಾರಣವಾಗಿದ್ದು, ಮೂರು ತಿಂಗಳು ಮೊದಲೇ ಮುಂಜಾಗ್ರತೆ ವಹಿಸಿದ್ದರೆ ರೈತರು ಪರದಾಡುವ ಪರಿಸ್ಥಿತಿ ಬರುತ್ತಿರಲಿಲ್ಲ.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಆರೋಪ

ಕನ್ನಡಪ್ರಭ ವಾರ್ತೆ ಬಳ್ಳಾರಿ

ರಾಜ್ಯದಲ್ಲಿ ಎದುರಾಗಿರುವ ಯೂರಿಯಾ ಸಮಸ್ಯೆಗೆ ರಾಜ್ಯ ಸರ್ಕಾರವೇ ಕಾರಣವಾಗಿದ್ದು, ಮೂರು ತಿಂಗಳು ಮೊದಲೇ ಮುಂಜಾಗ್ರತೆ ವಹಿಸಿದ್ದರೆ ರೈತರು ಪರದಾಡುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ಸರಿಯಾದ ಸಮಯಕ್ಕೆ ರಸಗೊಬ್ಬರ ವಿತರಣೆ ಮಾಡುವಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಯೂರಿಯಾ ಸಿಗಲಿಲ್ಲ ಎಂಬ ಕಾರಣಕ್ಕೆ ಕೊಪ್ಪಳದ ರೈತರೊಬ್ಬರು ಮಣ್ಣು ತಿಂದಿದ್ದಾರೆ. ಅನ್ನನೀಡುವ ರೈತರನ್ನು ಮಣ್ಣು ತಿನ್ನುವ ಪರಿಸ್ಥಿತಿಗೆ ತಂದೊಡ್ಡಿರುವ ಕಾಂಗ್ರೆಸ್ ಸರ್ಕಾರ, ಅನ್ನದಾತರ ಹಿತ ಕಾಯುವ ಯಾವೊಂದು ಕಾಳಜಿಯ ಕಾರ್ಯ ಕೈಗೊಂಡಿಲ್ಲ ಎಂದು ದೂರಿದರು.

ಬಿತ್ತನೆ ಬೀಜ, ರಸಗೊಬ್ಬರ ಸಮಸ್ಯೆ ಮತ್ತಿತರ ಸಮಸ್ಯೆಗಳಿಂದಾಗಿ ರೈತರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಕಳೆದ ಒಂದುವರೆ ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ 981 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಸಾವಿಗೆ ರಾಜ್ಯ ಸರ್ಕಾರವೇ ಕಾರಣ. ಸರಿಯಾದ ಸಮಯಕ್ಕೆ ರೈತರಿಗೆ ರಸಗೊಬ್ಬರ, ಬಿತ್ತನೆಬೀಜ, ಬೆಂಬಲಬೆಲೆ ನೀಡಿದ್ದರೆ ರೈತರ ಸಾವು ಸಂಭವಿಸುತ್ತಿರಲಿಲ್ಲ. ರಾಜ್ಯದಲ್ಲಿ ನೂರಾರು ಜನರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ ರಾಜ್ಯದ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ರೈತರಿಗೆ ಪರಿಹಾರ ನೀಡುವ ಕಾಳಜಿ ತೆಗೆದುಕೊಂಡಿಲ್ಲ. ಸಾವಿನ ಮನೆಗೆ ತೆರಳಿ ಸಾಂತ್ವಾನ ಹೇಳುವ ಕೆಲಸವು ಸಹ ಸಚಿವರಿಂದಾಗಿಲ್ಲ. ಹೀಗಾಗಿ ಕೂಡಲೇ ಕೃಷಿ ಸಚಿವರು ರಾಜಿನಾಮೆ ನೀಡಬೇಕು. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮದ್ದೂರು ಸಮಾವೇಶದಲ್ಲಿಯೇ ಕೃಷಿ ಸಚಿವರ ರಾಜಿನಾಮೆ ಪಡೆಯಲಿ ಎಂದು ಶ್ರೀರಾಮುಲು ಒತ್ತಾಯಿಸಿದರು.

ಎಚ್‌ಡಿಕೆ ಬೈಯ್ಯೊದಕ್ಕೆ ಸಮಾವೇಶ:

ಕಾಂಗ್ರೆಸ್ ಸರ್ಕಾರ ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಸಾಧನಾ ಸಮಾವೇಶ ಹಮ್ಮಿಕೊಂಡಿದ್ದು, ಯಾವ ಪುರುಷಾರ್ಥಕ್ಕಾಗಿ? ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಬೈಯ್ಯೊದಕ್ಕೆ ಸಮಾವೇಶ ಮಾಡುತ್ತಿದ್ದಾರಷ್ಟೇ ಎಂದು ಟೀಕಿಸಿದರು.

ಹೊಸಪೇಟೆಯಲ್ಲಿ ಜರುಗಿದ ಸಾಧನಾ ಸಮಾವೇಶದಲ್ಲಿ ತುಂಗಭದ್ರಾ ಜಲಾಶಯದ ಗೇಟ್‌ಗಳನ್ನು ದುರಸ್ತಿಪಡಿಸುವುದಾಗಿ ಹೇಳಿದ್ದರು. ಸಕ್ಕರೆ ಕಾರ್ಖಾನೆ ಆರಂಭಿಸುವುದಾಗಿ ತಿಳಿಸಿದ್ದರು. ಆದರೆ, ಈ ಎರಡು ಭರವಸೆ ಈಡೇರಿಸಿಲ್ಲ. ಇದೀಗ ಮದ್ದೂರಿನಲ್ಲಿ ಮತ್ತೊಂದು ಸಮಾವೇಶ ಮಾಡಿ ಸುಳ್ಳು ಹೇಳಲು ಹೊರಟಿದ್ದಾರೆ. ರಾಜ್ಯದಲ್ಲಿ ರೈತರು ಯೂರಿಯಾ ಸೇರಿದಂತೆ ಅನೇಕ ಸಮಸ್ಯೆಗಳ ಒದ್ದಾಡುತ್ತಿದ್ದು, ಸಾವಿನ ಮೊರೆ ಹೊಗುತ್ತಿರುವ ಸಂದರ್ಭ ಕಾಂಗ್ರೆಸ್ ಸರ್ಕಾರ ಸಾಧನೆ ಸಮಾವೇಶದ ಹೆಸರಿನಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡುತ್ತಿದೆ. ರೈತರ ಸಮಾಧಿ ಮೇಲೆ ರಾಜಕೀಯ ಮಾಡಲು ಹೊರಟಿದೆ ಎಂದು ಆರೋಪಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ, ಮುಖಂಡರಾದ ಎಸ್.ಗುರುಲಿಂಗನಗೌಡ, ಐನಾಥ ರೆಡ್ಡಿ, ರೈತ ಸಂಘದ ಅಧ್ಯಕ್ಷ ಜಿ.ಪುರುಷೋತ್ತಮಗೌಡ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ಶ್ರೀಲಂಕಾ-ಬಾಂಗ್ಲಾಕ್ಕೆ ಯೂರಿಯಾ:

ಯೂರಿಯಾ ರಸಗೊಬ್ಬರ ಶ್ರೀಲಂಕಾ ಹಾಗೂ ಬಾಂಗ್ಲಾದೇಶಗಳಿಗೆ ಕಾಳಸಂತೆಯ ಮೂಲಕ ರವಾನೆಯಾಗುತ್ತಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ.

ಬೇಡಿಕೆಯಷ್ಟು ಯೂರಿಯಾ ಪೂರೈಕೆಯಾಗಿಲ್ಲ. ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಕುರಿತು ಮಾಹಿತಿ ಬಂದಿದೆ. ಹೀಗಾಗಿಯೇ ರೈತರು ಯೂರಿಯಾ ಸಿಗದೆ ಒದ್ದಾಡುವಂತಾಗಿದೆ ಎಂದು ದೂರಿದರು.

ಆರ್‌ಸಿಬಿ ಸಂಭ್ರಮ ವೇಳೆ ಕಾಲ್ತುಳಿತದಲ್ಲಿ ಹನ್ನೊಂದು ಜನರಲ್ಲ; 20 ಜನ ಸಾವನ್ನಪ್ಪಿದ್ದಾರೆ. ಹೆಚ್ಚಿದ ಸಾವಿನ ಸಂಖ್ಯೆಯನ್ನು ಮುಚ್ಚಿ ಹಾಕಲಾಗಿದೆ. ಸಾವಿಗೀಡಾದ ಎಲ್ಲರಿಗೂ ಸರ್ಕಾರ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.