ಪುಕ್ಕಟೆ ಗ್ಯಾರಂಟಿಗಳಿಂದ ರಾಜ್ಯ ಸರ್ಕಾರ ದಿವಾಳಿ: ಎಸ್.ಪಿ.ಸ್ವಾಮಿ ಆರೋಪ

| Published : Apr 18 2024, 02:18 AM IST

ಪುಕ್ಕಟೆ ಗ್ಯಾರಂಟಿಗಳಿಂದ ರಾಜ್ಯ ಸರ್ಕಾರ ದಿವಾಳಿ: ಎಸ್.ಪಿ.ಸ್ವಾಮಿ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಗ್ಯಾರಂಟಿ ಯೋಜನೆಗಳಿಗೆ ಹಣ ಮೀಸಲಿಟ್ಟ ಪರಿಣಾಮ ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿದೆ. ಸರ್ಕಾರದಿಂದ ಅಭಿವೃದ್ಧಿ ನಿರೀಕ್ಷಿಸೋದು ಮೂರ್ಖತನ. ರೈತರ ಬಗ್ಗೆ ಕಾಳಜಿ ಇಲ್ಲ. ಐದು ಗ್ಯಾರಂಟಿ ಪ್ರಸ್ತಾಪಿಸಿ ಬರದಿಂದ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಮೋಸ ಮಾಡಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಖಜಾನೆ ಖಾಲಿಯಾಗಿ ದಿವಾಳಿ ಅಂಚಿನಲ್ಲಿದೆ ಎಂದು ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಆರೋಪಿಸಿದರು.

ಮದ್ದೂರು ವಿಧಾನಸಭಾ ಕ್ಷೇತ್ರದ ಹೊಸಕೆರೆ, ನಿಲುವಾಗಿಲು ಹಾಗೂ ಬೆಸಗರಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪರ ಬುಧವಾರ ಪ್ರಚಾರ ನಡೆಸಿ ಮಾತನಾಡಿದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬ ದುರುದ್ದೇಶದಿಂದ ರಾಜ್ಯ ಸರ್ಕಾರ ಪುಕ್ಕಟೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದೆ. ಇಂತಹ ಯೋಜನೆಗಳಿಂದ ರಾಜ್ಯದ ಸಮಗ್ರ ಅಭಿವೃದ್ಧಿಗೆ ಮಾರಕವಾಗಲಿದೆ ಎಂದು ಎಚ್ಚರಿಸಿದರು.

ಗ್ಯಾರಂಟಿ ಯೋಜನೆಗಳಿಗೆ ಹಣ ಮೀಸಲಿಟ್ಟ ಪರಿಣಾಮ ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿದೆ. ಸರ್ಕಾರದಿಂದ ಅಭಿವೃದ್ಧಿ ನಿರೀಕ್ಷಿಸೋದು ಮೂರ್ಖತನ. ರೈತರ ಬಗ್ಗೆ ಕಾಳಜಿ ಇಲ್ಲ. ಐದು ಗ್ಯಾರಂಟಿ ಪ್ರಸ್ತಾಪಿಸಿ ಬರದಿಂದ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಮೋಸ ಮಾಡಿದೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಭೀಕರ ಬರಗಾಲ ಇದೆ. ರೈತರ ಸಾಲ ಮನ್ನಾ ಮಾಡದೆ, ಕೇಂದ್ರ ಸರ್ಕಾರ ಪರಿಹಾರ ನೀಡಿಲ್ಲ ಎಂದು ಸಬೂಬು ಹೇಳುತ್ತಿದೆ. ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಎದುರಾದ ಬರಗಾಲದ ಸನ್ನಿವೇಶದಲ್ಲಿ ಕೇಂದ್ರದ ಮೊರೆ ಹೋಗದೆ ರೈತರ ಸಾಲವನ್ನು ಮನ್ನಾ ಮಾಡಿದ್ದರು. ಅದೇ ರೀತಿ ಕಾಂಗ್ರೆಸ್‌ ಸರ್ಕಾರಕ್ಕೂ ಮಾಡಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು.

ಜಿಪಂ ಮಾಜಿ ಅಧ್ಯಕ್ಷ ಎಸ್.ಗುರುಚರಣ್ ಮಾತನಾಡಿ, ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆಯುಷ್ಮಾನ್ ಯೋಜನೆ, ಜಲಜೀವನ್ ಮಿಷನ್, ಕಿಸಾನ್ ಸಮ್ಮಾನ್ ಯೋಜನೆ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.

ಈ ಬಾರಿಯೂ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮತದಾರರು 2 ಲಕ್ಷಕ್ಕೂ ಅಂತರಿದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಜೆಡಿಎಸ್ ಮುಖಂಡ ಡಿ.ಟಿ.ಸಂತೋಷ್ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಜನತೆಗೆ ಕಿವಿಗೆ ಹೂ ಮುಡಿಸುವ ಕೆಲಸ ಮಾಡುತ್ತಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಮಹಿಳೆಯರಿಗೆ 2000 ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, ಮತ್ತೊಂದು ಕಡೆ ಮದ್ಯದ ಬೆಲೆಯಲ್ಲಿ ಹೆಚ್ಚಿಸಿದ್ದಾರೆ.

ಜಮೀನುಗಳಿಗೆ ರೈತರು ವಿದ್ಯುತ್‌ ಪರಿವರ್ತಕ ಹಾಕಬೇಕಾದರೆ ಈಗ 3 ಲಕ್ಷ ರು ಹಣ ಕಟ್ಟಬೇಕು. ಒಂದು ಕೈಯಲ್ಲಿ ಕೊಟ್ಟು, ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ನವರು ಹಣ, ತೋಳು, ಹೆಂಡದ ಬಲದಿಂದ ಚುನಾವಣೆ ಮಾಡುತ್ತಾರೆ ಎಂದು ದೂರಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕ ತಿಮ್ಮೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ್, ಜಿಪಂ ಮಾಜಿ ಸದಸ್ಯರಾದ ಮರಿಹೆಗ್ಗಡೆ, ಬೋರಯ್ಯ, ಪುರಸಭಾ ಸದಸ್ಯೆ ಪ್ರಿಯಾಂಕಾ ಅಪ್ಪುಗೌಡ ಮುಖಂಡರಾದ ಕಾಳಯ್ಯ, ಸ್ವಾಮಿ, ದಯಾನಂದ, ಮಧು, ಲೋಕೇಶ್ ಮತ್ತಿತರರು ಇದ್ದರು.