ಸಾರಾಂಶ
ಹುಬ್ಬಳ್ಳಿ:
ರಾಜ್ಯ ಸರ್ಕಾರವು ವಕ್ಫ್ ಮಂಡಳಿ ಮೂಲಕ ಲ್ಯಾಂಡ್ ಜಿಹಾದ್‌ಗೆ ಮುಂದಾಗಿದೆ. ಅಮಾಯಕರ ಪಹಣಿಗಳಲ್ಲಿ ವಕ್ಫ್ ಹೆಸರು ಸೇರಿಸುವಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ನೇರವಾಗಿ ಭಾಗಿಯಾಗಿದ್ದಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಆರೋಪಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿ, ಮಠಗಳು, ದಲಿತರ ಜಮೀನುಗಳಿಗೆ ಕೂಡ ನೋಟಿಸ್ ನೀಡಲಾಗಿದೆ. ಕೇವಲ ವಿಜಯಪುರ ಮಾತ್ರವಲ್ಲ ಧಾರವಾಡ, ಗದಗ, ಯಾದಗಿರಿ ಜಿಲ್ಲೆಗಳಲ್ಲೂ ಈ ರೀತಿಯ ಘಟನೆಗಳು ನಡೆದಿವೆ. ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಈ ಕೆಲಸ ನಡೆಯುತ್ತಿದೆ. ಲ್ಯಾಂಡ್ ಜಿಹಾದಿ ಇದಾಗಿದ್ದು, ಮುಂದಿನ ದಿನಗಳಲ್ಲಿ ಇದೇ ಭೂಮಿಯನ್ನು ಅಲ್ಪಸಂಖ್ಯಾತರಿಗೆ ನೀಡಿ ದುರ್ಬಳಕೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಭೂಮಿ ಕಬಳಿಸುವ ಹುನ್ನಾರ:ಪಹಣಿಗಳಲ್ಲಿ ವಕ್ಫ್ ಹೆಸರು ಸೇರಿಸುವುದರಲ್ಲಿ ಸಚಿವ ಜಮೀರ್ ಅಹ್ಮದ್‌ಖಾನ್ ಅವರು ನೇರವಾಗಿ ಭಾಗಿಯಾಗಿದ್ದಾರೆ. ಅಲ್ಲದೆ ಕಾನೂನು ತಿದ್ದುಪಡಿಯಲ್ಲಿ ಇವರು ಬಹಳ ಮುತುವರ್ಜಿ ವಹಿಸಿದ್ದಾರೆ. ಇತ್ತೀಚೆಗೆ ವಿಜಯಪುರದಲ್ಲಿ ಅವರು ನಡೆಸಿದ ಸಭೆಯ ನಡಾವಳಿಗಳನ್ನು ಪಡೆದಾಗ ಅದರಲ್ಲಿ ಸ್ಪಷ್ಟವಾಗಿದ್ದು, ಪಹಣಿಯಲ್ಲಿ ವಕ್ಫ್ ಹೆಸರನ್ನು 15 ದಿನದಲ್ಲಿ ಸೇರಿಸುವಂತೆ ಸೂಚಿಸಿದ್ದು, ಇದಕ್ಕೆ ಮುಖ್ಯಮಂತ್ರಿಗಳ ಮೌಖಿಕ ಆದೇಶ ಮೇರೆಗೆ ಎಂದು ನಡಾವಳಿಯಲ್ಲಿ ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ಅಧಿಕಾರಿಗಳ ಮೇಲೆ ಬಹಳ ಒತ್ತಡ ತಂದು ಈ ಕೆಲಸ ಮಾಡುತ್ತಿದ್ದಾರೆ. ಹಲವು ಭೂಮಿಗಳನ್ನು ಕಬಳಿಸುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಅಲ್ಪಸಂಖ್ಯಾತರ ತುಷ್ಟೀಕರಣ:ವಕ್ಫ್ ಆಸ್ತಿ ವಿಚಾರವನ್ನು ಬಿಜೆಪಿ ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದಂತೆ ರಾಜ್ಯ ಸರ್ಕಾರ ನೋಟಿಸ್ ಹಿಂಪಡೆಯುವುದಾಗಿ ಘೋಷಿಸಿರುವುದು ಎಲ್ಲೊ ಒಂದು ಕಡೆ ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಮುಂದಾಗಿರುವುದು ಸ್ಪಷ್ಟ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದರು.