ಅಭಿವೃದ್ಧಿಗೆ ಅನುದಾನ ನೀಡದ ರಾಜ್ಯ ಸರ್ಕಾರ: ಶಾಸಕ ಎಚ್.ಟಿ.ಮಂಜು

| Published : Sep 15 2024, 01:48 AM IST

ಅಭಿವೃದ್ಧಿಗೆ ಅನುದಾನ ನೀಡದ ರಾಜ್ಯ ಸರ್ಕಾರ: ಶಾಸಕ ಎಚ್.ಟಿ.ಮಂಜು
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿದ್ದಾರೆ. ಸಚಿವರ ಕ್ಷೇತ್ರಗಳಿಗೂ ಹೆಚ್ಚಿನ ಅನುದಾನ ನೀಡುತ್ತಿಲ್ಲ. ಎಂದರೆ ಸರ್ಕಾರ ಎಷ್ಟರ ಮಟ್ಟಿಗೆ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡುತ್ತಿದೆ ಎಂಬುದನ್ನು ನೀವೇ ನಿರೀಕ್ಷಿಸಬಹುದು. ಜಿಲ್ಲಾ ಉಸ್ತುವಾರಿ ಸಚಿವರಿಗೆ ಕ್ಷೇತ್ರದ ತುರ್ತು ಕೆಲಸಗಳ ಬಗ್ಗೆ ಅನೇಕ ಬಾರಿ ಮನವಿಪತ್ರ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಶಾಸನಬದ್ದವಾಗಿ ಆಯ್ಕೆಯಾದ ಶಾಸಕರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ ಸರ್ಕಾರ ಅನುದಾನ ನೀಡುತ್ತಿಲ್ಲ. ಬದಲಾಗಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಗಳ ಈಡೇರಿಕೆಯೇ ಮುಖ್ಯ ಗುರಿಯಾಗಿದೆ ಎಂದು ಶಾಸಕ ಎಚ್.ಟಿ ಮಂಜು ಆರೋಪಿಸಿದರು.

ತಾಲೂಕಿನ ನಾಗರಘಟ್ಟ ಗ್ರಾಮದ ಬಿಎಂಸಿ ಘಟಕವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯ ಸರ್ಕಾರ ಚುನಾವಣೆಗೂ ಮುನ್ನ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಲು ನಮ್ಮದೇನು ತಕರಾರಿಲ್ಲ. ಆದರೆ, ಕಾಂಗ್ರೆಸ್ ಪಕ್ಷ ಪ್ರಣಾಳಿಕೆಗಳ ಈಡೇರಿಕೆಗೆ ಆದ್ಯತೆ ನೀಡುತ್ತಿದೆ ಎಂದರು.

ಕಳೆದ ಒಂದೂವರೆ ವರ್ಷದಿಂದ ವಿಪಕ್ಷಗಳನ್ನು ಒಳಗೊಂಡಂತೆ ಆಡಳಿತ ಪಕ್ಷದ ಶಾಸಕರಿಗೂ ಅನುದಾನ ಮರೀಚಿಕೆಯಾಗಿದೆ. ಕ್ಷೇತ್ರದ ಅಭಿವೃದ್ಧಿ ಮಾಡಲಾಗದ ಸ್ಥಿತಿ ಶಾಸಕರಿಗೆ ಎದುರಾಗಿದೆ. ಗ್ಯಾರಂಟಿಗಳ ಜೊತೆಗೆ ಕ್ಷೇತ್ರಗಳ ಅಭಿವೃದ್ಧಿಗೂ ಹೆಚ್ಚಿನ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.

ಗ್ಯಾರಂಟಿಗಳ ಹೆಸರಿನಲ್ಲಿ ಸರ್ಕಾರ ನೀಡಬಹುದಾಗಿದ್ದ ಎಲ್ಲಾ ರೀತಿಯ ಅನುದಾನಗಳನ್ನು ಮೊಟಕುಗೊಳಿಸಲಾಗುತ್ತಿದೆ. ಇದರಿಂದ ಕ್ಷೇತ್ರದ ಮತದಾರರಿಗೆ ಉತ್ತರ ನೀಡಲು ಕಷ್ಟವಾಗುತ್ತಿದೆ. ತಾಲೂಕಿನ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿವೆ. ಕಳೆದ ಕೆಲ ವರ್ಷಗಳ ಹಿಂದೆ ಒಡೆದು ಹೋಗಿರುವ ಕೆರೆಗಳ ಏರಿಗಳನ್ನು ನಿರ್ಮಾಣ ಮಾಡಲಾಗದ ಸ್ಥಿತಿ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿದ್ದಾರೆ. ಸಚಿವರ ಕ್ಷೇತ್ರಗಳಿಗೂ ಹೆಚ್ಚಿನ ಅನುದಾನ ನೀಡುತ್ತಿಲ್ಲ. ಎಂದರೆ ಸರ್ಕಾರ ಎಷ್ಟರ ಮಟ್ಟಿಗೆ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡುತ್ತಿದೆ ಎಂಬುದನ್ನು ನೀವೇ ನಿರೀಕ್ಷಿಸಬಹುದು. ಜಿಲ್ಲಾ ಉಸ್ತುವಾರಿ ಸಚಿವರಿಗೆ ಕ್ಷೇತ್ರದ ತುರ್ತು ಕೆಲಸಗಳ ಬಗ್ಗೆ ಅನೇಕ ಬಾರಿ ಮನವಿಪತ್ರ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.

ಸಂಕಷ್ಟದ ಸನ್ನಿವೇಶದಲ್ಲಿ ಶಾಸಕನಾಗಿ ಆಯ್ಕೆ ಮಾಡಿರುವ ಕ್ಷೇತ್ರದ ಮತದಾರರೊಂದಿಗೆ ಒಡನಾಟ ಇಟ್ಟುಕೊಂಡು ಲಭ್ಯವಿರುವ ಅನುದಾನವನ್ನು ಬಳಸಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಅನುದಾನ ಇಲ್ಲ ಎಂದು ಕೈಕಟ್ಟಿ ಕೂರುವ ಸೋಮಾರಿ ಶಾಸಕ ನಾನಲ್ಲ ಎಂದು ತಿಳಿಸಿದರು.

ವಿಧಾನಸಭಾ ಅಧಿವೇಶನದಲ್ಲಿಯೇ ನಮ್ಮ ಕ್ಷೇತ್ರಕ್ಕೆ ಆಗಬೇಕಾಗಿರುವ ತುರ್ತು ಕೆಲಸಗಳ ಬಗ್ಗೆ ಚರ್ಚಿಸಿದ್ದೇನೆ. ಸಚಿವರ ಕಚೇರಿಗಳಿಗೆ ಭೇಟಿ ನೀಡಿ ಮನವೊಲಿಸಲಿದ್ದೇನೆ. ಹೀಗಾಗಿ ಸ್ವಲ್ಪ ಸ್ವಲ್ಪ ಅನುದಾನ ತರುತ್ತಿದ್ದೇನೆ ಎಂದು ಹೇಳಿದರು.

ಮನ್ಮುಲ್ ನಿರ್ದೇಶಕ ಡಾಲುರವಿ ಮಾತನಾಡಿ, ಸಹಕಾರ ಸಂಘದ ಅಭಿವೃದ್ಧಿಗೆ ಕೈಜೋಡಿಸಿ ಕೆಲಸ ಮಾಡಬೇಕು ಎಂದು ಕೋರಿದರು. ಈ ವೇಳೆ ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಮು, ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರು, ಸಂಘದ ಸರ್ವಸದಸ್ಯರು, ಸಾರ್ವಜನಿಕರು ಹಾಜರಿದ್ದರು.