ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ ಅಧಿಕಾರದಲ್ಲಿ ಉಳಿಯುವ ಒಂದೇ ಉದ್ದೇಶದಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ, ವೇತನ ನೀಡದೆ, ಶಾಸಕರುಗಳಿಗೆ ಅನುದಾನ ಬಿಡುಗಡೆ ಮಾಡದೆ ಗ್ಯಾರಂಟಿಗಳ ಸುತ್ತ ಗಿರಕಿಹೊಡೆಯುತ್ತಿರುವ ಸಿದ್ದರಾಮಯ್ಯ ಸರ್ಕಾರ ದಿವಾಳಿಯ ಅಂಚಿಗೆ ಬಂದು ನಿಂತಿದೆ. ಇದನ್ನು ಮರೆಮಾಚಲು ಮುಖ್ಯಮಂತ್ರಿಗಳು ಕೇಂದ್ರದ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದರು. ಅವರು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ನಿಲುವು, ನಡೆಗಳನ್ನು ತೀವ್ರವಾಗಿ ಟೀಕಿಸಿದರು. ಹದಿನೈದು ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರ ಮೇಲೆ ಜನ ಬಹಳ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಆದರೆ ಗ್ಯಾರಂಟಿಗಳ ಸುತ್ತ ತಿರುಗುವಂತೆ ಇರುವ ಬಜೆಟ್, ಜನರನ್ನು ಭ್ರಮ ನಿರಸರನ್ನಾಗಿಸಿದೆ. ಅಭಿವೃದ್ಧಿಗೆ ಬಜೆಟ್ ಮಂಡಿಸಲಾಗದೆ ಸಾಲದ ಹೊರೆಯನ್ನು ಹೊತ್ತುಕೊಂಡು, ಕೇಂದ್ರದ ಮೇಲೆ ಸುಳ್ಳು ಆರೋಪ ಮಾಡಿ ಜನರನ್ನು ದಾರಿತಪ್ಪಿಸುವ ಕೆಲಸ ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಗ್ಯಾರಂಟಿಗಳ ಖರ್ಚಿಗೆ 65 ಸಾವಿರ ಕೋಟಿ ವ್ಯಯ ಮಾಡುವ ಸ್ಥಿತಿಗೆ ಬಂದಿದೆ. ಅಗತ್ಯ ಖರ್ಚುಗಳ ಮಿತಿ ಶೆ. ೧೦೦ ದಾಟಿದ್ದು 1.5 ಲಕ್ಷ ಕೋಟಿಯ ದೊಡ್ಡ ಸಾಲವನ್ನು ಪಡೆಯುವ ಸ್ಥಿತಿ ಬಂದಿದೆ. ಇದರಿಂದ ರಾಜ್ಯದ ಆರ್ಥಿಕ ಸ್ಥಿತಿ 10 ವರ್ಷ ಹಿಂದೆ ಹೋಗಿದೆ ಎಂದರು.
ತೆರಿಗೆ ಪಾವತಿಯಲ್ಲಿ ದ.ಕ ಜಿಲ್ಲೆ 2 ನೇ ಸ್ಥಾನದಲ್ಲಿದ್ದರು ರಾಜ್ಯದ ಬಜೆಟ್‌ನಲ್ಲಿ ಜಿಲ್ಲೆಗೆ ಕೊಡುಗೆ ಶೂನ್ಯವಾಗಿದೆ. ನಾರಾಯಣ ಗುರುಗಳ ನಿಗಮ ಸ್ಥಾಪಿಸುತ್ತೇವೆ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿ ವರ್ಷಕ್ಕೆ 500 ಕೋಟಿ ನೀಡುತ್ತೇವೆ ಎಂದು ಹೇಳಿ ಇದುವರೆಗೂ 1 ರುಪಾಯಿ ಅನುದಾನ ನೀಡಲಿಲ್ಲ, ಎಸ್.ಸಿ, ಎಸ್.ಟಿ ಗಳಿಗೆ ಮೀಸಲಿಟ್ಟ 11 ಸಾವಿರ ಕೋಟಿ ಅನುದಾನವನ್ನು ಗ್ಯಾರಂಟಿಗಳಿಗೆ ಬಳಸಿ ಎಸ್.ಸಿ.- ಎಸ್.ಟಿ.ಗಳಿಗೆ ಅನ್ಯಾಯ ಮಾಡಿದೆ. ಇದರಿಂದ ರಾಜ್ಯದ ಆರ್ಥಿಕ ದಿವಾಳಿ ಎದ್ದು ಕಾಣುತ್ತಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ ಇದ್ದರು.