ಸಾರಾಂಶ
ಹೈಕೋರ್ಟ್‌ನಲ್ಲಿ ಸೋಮವಾರ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕರ್ನಾಟಕ ಹೈಕೋರ್ಟ್ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಾಹಿತಿ ಮತ್ತು ಸಂಹವನ ತಂತ್ರಜ್ಞಾನ ಸುಧಾರಿಸುವಲ್ಲಿ ಮುಂಚೂಣಿಯಲ್ಲಿದ್ದು, ಕಲಾಪಗಳ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆಯಿಂದ ನ್ಯಾಯಾಲಯದ ಸಾಕಷ್ಟು ಸಮಯ ಮತ್ತು ಹಣ ಉಳಿತಾಯವಾಗುತ್ತಿದೆ ಎಂದು ನೂತನ ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ತಿಳಿಸಿದ್ದಾರೆ.ಹೈಕೋರ್ಟ್‌ನಲ್ಲಿ ಸೋಮವಾರ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನ್ಯಾಯದಾನ ವ್ಯವಸ್ಥೆಯನ್ನು ಕ್ರಾಂತಿಕಾರಗೊಳಿಸುವಲ್ಲಿ ಕರ್ನಾಟಕ ಹೈಕೋರ್ಟ್ ಹಲವು ವಿನೂತನ ಕ್ರಮ ಕೈಗೊಂಡಿದೆ. ತಾಂತ್ರಿಕ ಸುಧಾರಣೆ ನ್ಯಾಯದಾನ ವ್ಯವಸ್ಥೆಯಲ್ಲಿ ಅಪಾರ ಬದಲಾವಣೆ ತಂದಿದೆ. ಇ-ಕೋರ್ಟ್, ಪ್ರಕರಣಗಳ ಗಣಕೀಕರಣ, ಪ್ರಕರಣದ ಆರಂಭದಿಂದ ಅಂತ್ಯದವರೆಗೆ ದತ್ತಾಂಶ ನಿರ್ವಹಣೆ ಮಾಡಲಾಗುತ್ತಿದೆ. ಅದಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ನ್ಯಾಯಾಂಗ ಅಧಿಕಾರಿಗಳು, ವಿಷಯ ಪರಿಣತರು ನಿಯೋಜಿಸಲಾಗುತ್ತಿದೆ. ಲೋಕ ಅದಾಲತ್ ಹಾಗೂ ಮಧ್ಯಸ್ಥಿಕೆಯಿಂದ ಸಕಾರಾತ್ಮಕ ಫಲಿತಾಂಶ ಬರುತ್ತಿದೆ ಎಂದು ತಿಳಿಸಿದರು.ವಕೀಲರ ಸಂಘ ಸನ್ಮಾನ:
ಬೆಂಗಳೂರು ವಕೀಲರ ಸಂಘ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಸನ್ಮಾನ ಸೀಕರಿಸಿದ ಮುಖ್ಯ ನ್ಯಾಯಮೂರ್ತಿಗಳು, ಭವಿಷ್ಯದಲ್ಲಿ ವಕೀಲ ವೃತ್ತಿ ಆಯ್ಕೆ ಮಾಡುವವರು ದಾವೆಗಳ ಕುರಿತು ಪ್ರಜ್ಞೆ ಹೊಂದಿರಬೇಕಾದದ್ದು ಮುಖ್ಯ. ನ್ಯಾಯಾಲಯದಲ್ಲಿ ದಾಖಲಾಗುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಪ್ರಕರಣಗಳ ವಿಲೇವಾರಿಗೆ ಆದ್ಯತೆ ನೀಡಬೇಕಿದೆ ಎಂದು ಕರೆ ನೀಡಿದರು.ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಮಾತನಾಡಿ, ಕರ್ನಾಟಕ ಹೈಕೋರ್ಟ್‌ಗೆ ನಮ್ಮವರೇ ಮುಖ್ಯ ನ್ಯಾಯಮೂರ್ತಿಯಾಗಲು ಮೂರು ದಶಕಗಳೇ ಕಾಯಬೇಕಾಯಿತು. ಇದು ಅಪರೂಪದ ಸಂಗತಿ ಸಂತಸ ವ್ಯಕ್ತಪಡಿಸಿದರು.
ಹೈಕೋರ್ಟ್ ನ್ಯಾಯಮೂರ್ತಿ ಕೆ.ಸೋಮಶೇಖರ್, ರಾಜ್ಯ ಅಡ್ವೋಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಜಿ.ರವಿ, ಖಜಾಂಚಿ ಎಂ.ಟಿ.ಹರೀಶ್ ಉಪಸ್ಥಿತರಿದ್ದರು.