ಸಾರಾಂಶ
ರೈತರು ತಾವು ಬೆಳೆದ ಬೆಳೆಗಳಿಗೆ ತಗುಲಿದ ಖರ್ಚು-ವೆಚ್ಚಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ರೈತರ ಮನವಿಗೆ ಸ್ಪಂದಿಸಿದ ಸಮೀಕ್ಷಾ ತಂಡದ ಅಧಿಕಾರಿಗಳು ಬೆಳೆ ಹಾನಿ ಬಗ್ಗೆ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು.
ಧಾರವಾಡ:
ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಹಾನಿಗೊಳಗಾದ ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾಮಗಳಿಗೆ ಬುಧವಾರ ರಾಜ್ಯ ಬೆಳೆ ಹಾನಿ ಸಮೀಕ್ಷಾ ತಂಡವು ಭೇಟಿ ನೀಡಿ ಪರಿಶೀಲಿಸಿತು.ಆರಂಭದಲ್ಲಿ ತಾಲೂಕಿನ ಗರಗ ಹಾಗೂ ಅಮ್ಮಿನಭಾವಿ ಹೋಬಳಿಯ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿದ ತಂಡವು, ತಾಲೂಕಿನಲ್ಲಿ ಕಳೆದ ಕೆಲ ದಿನಗಳ ಹಿಂದೆ ಸುರಿದ ನಿರಂತರ ಮಳೆಯಿಂದಾಗಿ ಬೆಳೆ ಹಾನಿ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಸಮೀಕ್ಷಾ ತಂಡದ ಸದಸ್ಯರು ಆಲೂಗಡ್ಡೆ ಮತ್ತು ಸೇವಂತಿಗೆ ಬೆಳೆಗಳನ್ನು ವೀಕ್ಷಿಸಿದರು.
ಜಂಟಿ ಸಮೀಕ್ಷೆ ತಂಡದ ಮುಖ್ಯಸ್ಥರಾದ ಉಡುಪಿ ಅಪರ ಜಿಲ್ಲಾಧಿಕಾರಿ ಕೆ. ಕಾವ್ಯಾರಾಣಿ, ಉಡುಪಿ ತೋಟಗಾರಿಕೆ ಉಪ ನಿರ್ದೇಶಕ, ಶಿರಸಿ ಉಪ ವಿಭಾಗಾಧಿಕಾರಿ, ಧಾರವಾಡ ತೋಟಗಾರಿಕೆ ಉಪ ನಿರ್ದೇಶಕ ಕಾಶಿನಾಥ ಭದ್ರನವರ, ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ನೇತೃತ್ವದಲ್ಲಿ ತಾಲೂಕಿನ ತಡಕೋಡ ಹಾಗೂ ಕುರುಬಗಟ್ಟಿ, ಅಮ್ಮಿನಬಾವಿ ಗ್ರಾಮಗಳಿಗೆ ಅಧಿಕಾರಿಗಳ ತಂಡ ರೈತರ ಹೊಲಗಳಿಗೆ ನೀಡಿತು. ಹೂದೋಟ, ಆಲುಗಡ್ಡೆ, ಈರುಳ್ಳಿ, ಹತ್ತಿ ಬೆಳೆಗಳ ಹಾನಿ ಕುರಿತು ಮಾಹಿತಿ ಪಡೆದರು.ಈ ಸಂದರ್ಭದಲ್ಲಿ ರೈತರು ತಾವು ಬೆಳೆದ ಬೆಳೆಗಳಿಗೆ ತಗುಲಿದ ಖರ್ಚು-ವೆಚ್ಚಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ರೈತರ ಮನವಿಗೆ ಸ್ಪಂದಿಸಿದ ಸಮೀಕ್ಷಾ ತಂಡದ ಅಧಿಕಾರಿಗಳು ಬೆಳೆ ಹಾನಿ ಬಗ್ಗೆ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಮಧ್ಯಾಹ್ನದ ನಂತರ ತಾಲೂಕಿನ ಮನಸೂರ, ಬಾಡ, ನಿಗದಿ, ಮುಗದ, ಮಂಡಿಹಾಳ ಹಾಗೂ ಅಳ್ನಾವರ ತಾಲೂಕಿನ ಅಂಬೋಲಿ, ಬೆಣಚಿ, ಕುಂಬಾರಕೊಪ್ಪ, ಕಡಬಗಟ್ಟಿ ಗ್ರಾಮಗಳ ರೈತರ ಜಮೀನುಗಳಿಗೆ ತಂಡ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿತು. ಅಧಿಕ ಮಳೆಯಿಂದಾಗಿ ಮೆಕ್ಕೆಜೋಳ ತೆನೆಯಲ್ಲಿ ಮೊಳಕೆ ಒಡೆದು, ಭತ್ತದ ಬೆಳೆ ನೆಲಕಚ್ಚಿ ಹಾಳಾಗಿರುವುದನ್ನು ತಂಡ ವೀಕ್ಷಿಸಿತು. ನಿಗದಿ ಗ್ರಾಮದ ವ್ಯಾಪ್ತಿಯಲ್ಲಿ ಪರಿಶೀಲನೆ ವೇಳೆ ರೈತ ಚನ್ನಪ್ಪ ಜಗದಪ್ಪನವರ ಮಾತನಾಡಿ, ಸಾಕಷ್ಟು ಹಣ ಖರ್ಚು ಮಾಡಿ ಮೆಕ್ಕೆಜೋಳ, ಭತ್ತ ಬೆಳೆಯಲಾಗಿತ್ತು. ಭಾರಿ ಮಳೆಯಿಂದಾಗಿ ಫಸಲು ಕಟಾವು ಮಾಡಲು ಸಾಧ್ಯವಾಗಲಿಲ್ಲ. ಮಳೆಯಿಂದಾಗಿ ಮೆಕ್ಕೆಜೋಳ, ಭತ್ತ ತೆನೆಯಲ್ಲಿಯೇ ಮೊಳಕೆಯೊಡೆದಿವೆ. ರೈತರಿಗೆ ಖರ್ಚು ಮರಳದ ಸ್ಥಿತಿ ಉಂಟಾಗಿದೆ ಎಂದು ತಂಡಕ್ಕೆ ಮನವರಿಕೆ ಮಾಡಿದರು.ಧಾರವಾಡ ತಹಸೀಲ್ದಾರ್ ಡಾ. ಡಿ.ಎಚ್. ಹೂಗಾರ, ಕೃಷಿ ಉಪನಿರ್ದೇಶಕಿ ಜಯಶ್ರೀ ಹಿರೇಮಠ, ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಅಣಗೌಡರ, ಕೃಷಿ ಅಧಿಕಾರಿ ಮಹದೇವ ಸರಶೆಟ್ಟಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಇಮ್ಮಿಯಾಜ್, ಮತ್ತಿತರರು ಇದ್ದರು.