ಸಾರಾಂಶ
ಮೂಡುಬಿದಿರೆ: ಕಂಬಳದಲ್ಲಿ ತೀರ್ಪುಗಾರರ ಸಂಖ್ಯೆಯನ್ನು ಕಡಿತಗೊಳಿಸಿ ರುಟಿನ್ ಪ್ರಕಾರ ತೀರ್ಪುಗಾರರನ್ನು ನಿಯುಕ್ತಿಗೊಳಿಸುವುದು ಮತ್ತು ಕೋಣಗಳನ್ನು ಬಿಡಿಸುವವರು ಗಂತಿನಲ್ಲಿ ಅನಾವಶ್ಯಕವಾಗಿ ಅತ್ತಿಂದಿತ್ತ ಓಡಾಡುವುದನ್ನು ನಿಲ್ಲಿಸಬೇಕು ಮತ್ತು ಕೋಣಗಳನ್ನು ಬಿಡಿಸುವಾಗ ಸಮಯ ಪರಿಪಾಲನೆಯನ್ನು ಕಡ್ಡಾಯಗೊಳಿಸುವುದು ಸೇರಿದಂತೆ ಮಹತ್ವದ ವಿಷಯಗಳ ಬಗ್ಗೆ ಬುಧವಾರ ಸಂಜೆ ನಡೆದ ರಾಜ್ಯ ಕಂಬಳ ಅಸೋಸಿಯೇಶನ್ ಸಭೆಯಲ್ಲಿ ಚರ್ಚೆಯಾಯಿತು.ರಾಜ್ಯ ಕಂಬಳ ಅಸೋಸಿಯೇಶನ್, ಜಿಲ್ಲಾ ಕಂಬಳ ಸಮಿತಿ, ವ್ಯವಸ್ಥಾಪಕರು ಹಾಗೂ ಕೋಣಗಳ ಯಜಮಾನರ ಜಂಟಿ ಸಭೆ ಸಮಾಜ ಮಂದಿರದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿದ ಕಂಬಳ ಅಸೋಸಿಯೇಶನ್ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಕಂಬಳಕ್ಕೆ ಈಗಾಗಲೇ ರಾಜ್ಯ ಸರ್ಕಾರದಿಂದ ಮಾನ್ಯತೆ ಸಿಕ್ಕಿರುವುದರಿದ ಕಂಬಳದ ಜನಪ್ರಿಯತೆ ವೃದ್ಧಿಸಿದೆ. ಈ ಕ್ರೀಡೆಗೆ ರಾಷ್ಟ್ರ ಮಾನ್ಯತೆ ಸಿಗಬೇಕೆಂಬ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ನಡೆಯುತ್ತಿದೆ. 22ರಂದು ಉಡುಪಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಬಗ್ಗೆ ಮನವಿ ನೀಡಲಾಗುವುದು ಎಂದರು.
ಗಂತಿನಲ್ಲಿ ಕೋಣಗಳನ್ನು ಬಿಡುವಾಗ ಕೆಲವೊಮ್ಮೆ ೧ ತಾಸಿನ ವರೆಗೂ ವಿಳಂಬವಾಗಿ ಒಂದು ದಿನದಲ್ಲಿ ಮುಗಿಯಬೇಕಾದ ಕಂಬಳ ಎರಡು ದಿನಗಳ ವರೆಗೆ ಮುಂದುವರಿಯುತ್ತದೆ. ಇದರಿಂದ ಕಾನೂನಿನ ಉಲ್ಲಂಘನೆಯ ಆರೋಪ ಆಯೋಜಕರ ವಿರುದ್ಧ ಕೇಳಿಬರುತ್ತಿದೆ. ಕೋಣಗಳನ್ನು ಬಿಡುವಾಗ ತೀರ್ಪುಗಾರರು ೧೦ ನಿಮಿಷಕ್ಕಿಂತ ಹೆಚ್ಚು ವಿಳಂಬವಾಗದಂತೆ ನೋಡಿಕೊಳ್ಳಬೇಕು. ನಿಗದಿತ ಸಮಯದಲ್ಲಿ ಕಂಬಳ ಮುಕ್ತಾಯವಾಗಬೇಕಾದರೆ ತೀರ್ಪುಗಾರರು ಕೂಡ ಸಮಯ ಪರಿಪಾಲನೆ ಮಾಡಿಕೊಳ್ಳುವುದು ಅಗತ್ಯ ಎಂಬ ಅಭಿಪ್ರಾಯ ಸಭೆಯಲ್ಲಿ ಕೇಳಿ ಬಂತು.ಕಂಬಳ ಶಿಸ್ತು ಸಮಿತಿ ಅಧ್ಯಕ್ಷ ಭಾಸ್ಕರ್ ಕೋಟ್ಯಾನ್ ಮಾತನಾಡಿ, ಸದ್ಯ ಕಂಬಳಕ್ಕೆ ೨೪ ಮಂದಿ ತೀರ್ಪುಗಾರರಿದ್ದು ಇಷ್ಟೊಂದು ಸಂಖ್ಯೆಯ ತೀರ್ಪುಗಾರರು ಕಂಬಳಕ್ಕೆ ಬೇಕಿಲ್ಲ. ಖರ್ಚು ವೆಚ್ಚ ನಿಯಂತ್ರಿಸುವ ದೃಷ್ಟಿಯಿಂದಲು ಈ ನಿರ್ಧಾರ ಅನಿವಾರ್ಯ ಇದೆ. ಎಷ್ಟು ಮಂದಿ ಮತ್ತು ಯಾವ್ಯಾವ ತೀರ್ಪುಗಾರರು ಬೇಕೆಂಬುದನ್ನು ಆಯಾಯ ಕಂಬಳ ಆಯೋಜಕರು ನಿರ್ಧರಿಸಬೇಕು. ಇವರಿಗೆ ನೀಡುವ ವೇತದ ಬಗ್ಗೆ ರಾಜ್ಯ ಕಂಬಳ ಸಮಿತಿ ತಿಳಿಸುವುದು ಎಂದರು. ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಎಲ್ಲಾ ಕಂಬಳಗಳಿಗೆ ಸಮಾನವಾಗಿ ಹಂಚಲು ನಿರ್ಧರಿಸಲಾಯಿತು. ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಕಂಬಳ ಕೋಣಗಳ ಯಜಮಾನರಾದ ಭಾಸ್ಕರ್ ಕೋಟ್ಯಾನ್ ಹಾಗೂ ಶಾಂತರಾಮ ಶೆಟ್ಟಿ ಅವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು. ಅಸೋಸಿಯೇಶನ್ ಪ್ರಮುಖರಾದ ಪಿ.ಆರ್ ಶೆಟ್ಟಿ, ಕೋಶಾಧಿಕಾರಿ ಮುಚ್ಚೂರು ಲೋಕೇಶ್ ಶೆಟ್ಟಿ, ವಿಜಯ ಕುಮಾರ್ ಕಂಗಿನ ಮನೆ ಮತ್ತು ಚಂದ್ರಹಾಸ ಸನಿಲ್ ಇದ್ದರು.
;Resize=(128,128))
;Resize=(128,128))
;Resize=(128,128))