ಕಸ್ತೂರಿರಂಗನ್ ವರದಿ ವಿಚಾರದಲ್ಲಿ ಜನರ ಬದುಕು ಮತ್ತು ಭಾವನೆಗಳೊಂದಿಗೆ ರಾಜಕೀಯ ಮಾಡದೆ ಪಶ್ಚಿಮಘಟ್ಟದ ಪರಿಸರ ಸಂರಕ್ಷಣೆ ಹಾಗೂ ಮಲೆನಾಡಿನ ರೈತರ ಹಿತ ಎರಡನ್ನೂ ಗಮನದಲ್ಲಿಟ್ಟುಕೊಂಡು ವೈಜ್ಞಾನಿಕ ನಿರ್ಧಾರ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಸ್ತೂರಿರಂಗನ್ ವರದಿ ವಿಚಾರದಲ್ಲಿ ಜನರ ಬದುಕು ಮತ್ತು ಭಾವನೆಗಳೊಂದಿಗೆ ರಾಜಕೀಯ ಮಾಡದೆ ಪಶ್ಚಿಮಘಟ್ಟದ ಪರಿಸರ ಸಂರಕ್ಷಣೆ ಹಾಗೂ ಮಲೆನಾಡಿನ ರೈತರ ಹಿತ ಎರಡನ್ನೂ ಗಮನದಲ್ಲಿಟ್ಟುಕೊಂಡು ವೈಜ್ಞಾನಿಕ ನಿರ್ಧಾರ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಒತ್ತಾಯಿಸಿದರು.

ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಅವರು, ಕರ್ನಾಟಕಕ್ಕೆ ಕಸ್ತೂರಿ ರಂಗನ್ ವರದಿಯಡಿ 20,668 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವಾಗಿ ಪ್ರಸ್ತಾಪಿಸಲಾಗಿದೆ. ರಾಜ್ಯ ಸರ್ಕಾರದ ಮಾಹಿತಿಯ ಪ್ರಕಾರ ಇದರಲ್ಲಿ ಸುಮಾರು 16,114 ಚದರ ಕಿಲೋಮೀಟರ್ ಪ್ರದೇಶ ಈಗಾಗಲೇ ವಿವಿಧ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ವರ್ಗಗಳಡಿ ರಕ್ಷಿತವಾಗಿದೆ. ಉಳಿಯುವ 4,500 ಚದರ ಕಿ.ಮೀ ಪ್ರದೇಶದಲ್ಲಿ ಯಾವುದು ನೈಸರ್ಗಿಕ ಅರಣ್ಯ, ಯಾವುದು ಕೃಷಿಭೂಮಿ, ತೋಟ ಮತ್ತು ಜನವಸತಿ ಎಂಬುದನ್ನು ಸರ್ವೆ ನಂಬರ್ ಮಟ್ಟದಲ್ಲಿ ಭೌತಿಕವಾಗಿ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.ಪರಿಸರದ ಹೆಸರಿನಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಮತ್ತೊಂದು ರೀತಿಯ ಪರಿಸರ ಹಾನಿಗೆ ಕಾರಣವಾಗಬಾರದು. ಶಿವಮೊಗ್ಗದಲ್ಲಿ ಸ್ಥಳೀಯ ಕಲ್ಲು ಲಭ್ಯತೆಯ ಸಮಸ್ಯೆಯಿಂದ ದಿನಕ್ಕೆ 100 ಲಾರಿಗಳಲ್ಲಿ ದೂರದ ಜಿಲ್ಲೆಗಳಿಂದ ಕಲ್ಲು ಸಾಗಿಸಲಾಗುತ್ತಿದೆ. 200–250 ಕಿ.ಮೀ. ಸಂಚಾರದಿಂದ ವರ್ಷಕ್ಕೆ ಲಕ್ಷಾಂತರ ಲೀಟರ್ ಡೀಸೆಲ್ ಬಳಕೆಯಾಗುತ್ತದೆ. ಪರಿಸರ ಸಂರಕ್ಷಣೆಯ ನಿರ್ಧಾರವೇ ಇಂಧನ ಬಳಕೆ ಮತ್ತು ಮಾಲಿನ್ಯ ಹೆಚ್ಚಿಸುವಂತಾಗಬಾರದು ಎಂದರು.ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ ನೀರನ್ನು ಎತ್ತುವ ವ್ಯವಸ್ಥೆಯ ಅನುಷ್ಠಾನ ವಿಳಂಬವಾಗಿರುವುದನ್ನೂ ಡಾ. ಸರ್ಜಿ ಪ್ರಸ್ತಾಪಿಸಿದರು. ಯೋಜನೆಯ ಮೊದಲ ಹಂತದಲ್ಲಿ ತುಂಗಾದಿಂದ 17.40 ಟಿಎಂಸಿ ನೀರನ್ನು ಭದ್ರಾ ಜಲಾಶಯಕ್ಕೆ ಎತ್ತುವ ವ್ಯವಸ್ಥೆ ಇದೆ. ಇದನ್ನು ಸಕಾಲದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದರೆ ಭದ್ರಾ ಜಲಾಶಯಕ್ಕೆ ಹೆಚ್ಚುವರಿ ನೀರು ಲಭ್ಯವಾಗಿ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಸಹಿತ ಹಲವು ಭಾಗಗಳ ನೀರಿನ ಸಮಸ್ಯೆಗೆ ನೆರವಾಗಬಹುದಿತ್ತು. ತುಂಗಾದಲ್ಲಿ ಲಭ್ಯವಾಗುವ ಹೆಚ್ಚುವರಿ ನೀರು ಕೆಳಹರಿವಿಗೆ ಹರಿದುಹೋಗುತ್ತಿರುವ ಸಂದರ್ಭದಲ್ಲಿ ಅದನ್ನು ವೈಜ್ಞಾನಿಕವಾಗಿ ಭದ್ರಾಕ್ಕೆ ಎತ್ತುವ ವ್ಯವಸ್ಥೆ ಶೀಘ್ರ ಪೂರ್ಣಗೊಳ್ಳಬೇಕಿತ್ತು ಎಂದು ಅಭಿಪ್ರಾಯಪಟ್ಟರು.ಈ ಯೋಜನೆಗೆ ಸಂಬಂಧಿಸಿದ 220 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗಕ್ಕಾಗಿ ಅರಣ್ಯ ಭೂಮಿಯ ಅನುಮತಿ ಪ್ರಕ್ರಿಯೆ 2019ರಿಂದ ಮುಂದುವರಿದು 2026ರ ಜು.10ರಂದು ಮೊದಲ ಹಂತದ ಅನುಮೋದನೆ ದೊರೆತಿರುವುದು ಕೂಡ ವಿಳಂಬದ ಗಂಭೀರತೆ ತೋರಿಸುತ್ತದೆ ಎಂದು ಅವರು ಉಲ್ಲೇಖಿಸಿದರು.ಕಸ್ತೂರಿರಂಗನ್ ವರದಿಗೆ ಸಂಬಂಧಿಸಿ ಆರು ರಾಜ್ಯಗಳ ಪ್ರಸ್ತುತ ಸ್ಥಿತಿಯನ್ನೂ ಕರ್ನಾಟಕ ಆತ್ಮಾವಲೋಕನ ಮಾಡಿಕೊಳ್ಳಬೇಕು. ಕೇರಳವು ತನ್ನ ಪ್ರಸ್ತಾವಿತ ಪರಿಸರ ಸೂಕ್ಷ್ಮ ಪ್ರದೇಶವನ್ನು 13,108 ಚ.ಕಿ.ಮೀ.ಯಿಂದ 9,993.7 ಚ.ಕಿ.ಮೀ.ಗೆ ಪರಿಷ್ಕರಿಸಿ, ನಂತರ ಇನ್ನಷ್ಟು ಪರಿಷ್ಕರಣೆಯ ಪ್ರಸ್ತಾವನೆ ನೀಡಿದೆ. 2026ರ ಜುಲೈ ವೇಳೆಗೆ ಗೋವಾ ಮತ್ತು ಗುಜರಾತ್ ಪ್ರದೇಶ ನಿಗದಿಯ ವಿಷಯದಲ್ಲಿ ಬಹುತೇಕ ಒಪ್ಪಂದ ಹಂತ ತಲುಪಿದ್ದು, ಮಹಾರಾಷ್ಟ್ರದ ಪರಿಷ್ಕೃತ ಪ್ರಸ್ತಾವನೆ ಕೇಂದ್ರದ ತಜ್ಞ ಸಮಿತಿಯ ಪರಿಶೀಲನೆಯಲ್ಲಿದೆ. ಕರ್ನಾಟಕದ ವಿಷಯದಲ್ಲಿ ಮಾತ್ರ ಕೇಂದ್ರ–ರಾಜ್ಯಗಳ ಅಂತಿಮ ಒಮ್ಮತ ಇನ್ನೂ ಮೂಡಿಲ್ಲ. ಈ ಹಿನ್ನಲೆಯಲ್ಲಿ ಇತರ ರಾಜ್ಯಗಳು ತಮ್ಮ ಆಕ್ಷೇಪಣೆ, ಪರ್ಯಾಯ ನಕ್ಷೆ ಮತ್ತು ಭೌತಿಕ ಪರಿಶೀಲನೆಯೊಂದಿಗೆ ಪ್ರಕ್ರಿಯೆ ಮುಂದುವರಿಸಿದರೆ, ಕರ್ನಾಟಕದಲ್ಲಿ ಅಂತಿಮ ವೈಜ್ಞಾನಿಕ ಪ್ರಸ್ತಾವನೆ ಇನ್ನೂ ಏಕೆ ನಿರ್ಧಾರವಾಗಿಲ್ಲ? ಎಂಬುದನ್ನು ಪರಿಶೀಲಿಸಬೇಕು ಎಂದು ಡಾ.ಧಜನಂಜಯ ಸರ್ಜಿ ಆಗ್ರಹಿಸಿದರು.ಕೇಂದ್ರ ಸರ್ಕಾರವು ಮಾಜಿ ಅರಣ್ಯ ಮಹಾನಿರ್ದೇಶಕ ಸಂಜಯ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿ ಪಶ್ಚಿಮಘಟ್ಟದ ಆರು ರಾಜ್ಯಗಳ ಆಕ್ಷೇಪಣೆ ಮತ್ತು ಪರ್ಯಾಯ ಪ್ರಸ್ತಾವನೆಗಳನ್ನು ಪರಿಶೀಲಿಸುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕವೂ ಕೇರಳದ ಮಾದರಿಯಲ್ಲಿ ನೆಲಮಟ್ಟದ ವೈಜ್ಞಾನಿಕ ಸಮೀಕ್ಷೆ ನಡೆಸಿ ಸ್ಪಷ್ಟವಾದ ಅಂತಿಮ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಬೇಕು ಎಂದು ಡಾ. ಸರ್ಜಿ ಒತ್ತಾಯಿಸಿದರು.ನಾವು ಪರಿಸರ ಸಂರಕ್ಷಣೆಯ ವಿರೋಧಿಗಳಲ್ಲ. ಪಶ್ಚಿಮಘಟ್ಟ ಉಳಿಯಬೇಕು, ಕಾಡು ಬೆಳೆಯಬೇಕು, ನದಿಗಳು ಉಳಿಯಬೇಕು, ವನ್ಯಜೀವಿಗಳು ರಕ್ಷಿಸಲ್ಪಡಬೇಕು. ಆದರೆ ಕಾಡನ್ನು ತಲೆಮಾರುಗಳಿಂದ ಕಾಪಾಡಿಕೊಂಡು ಬಂದಿರುವ ರೈತರ ಬದುಕನ್ನೂ ಉಳಿಸಬೇಕು. ಜನರ ಬದುಕು ಮತ್ತು ಭಾವನೆಗಳ ಜತೆ ರಾಜಕೀಯ ಮಾಡದೆ, ಕಾಡನ್ನೂ ಉಳಿಸೋಣ–ರೈತರನ್ನೂ ಉಳಿಸೋಣ ಎಂದು ಡಾ. ಧನಂಜಯ ಸರ್ಜಿ ಹೇಳಿದರು.