ನಿಯಂತ್ರಣದಲ್ಲಿ ರಾಜ್ಯ ಕಾನೂನು ಸುವ್ಯವಸ್ಥೆ

| Published : Aug 01 2024, 01:47 AM IST

ಸಾರಾಂಶ

ರಾಜ್ಯದಲ್ಲಿ ಈಗಲೂ ಕೊಲೆ, ಕಳ್ಳತನ ಹಾಗೂ ಡ್ರಗ್ಸ್‌ ದಂಧೆಗಳು ನಡೆಯುತ್ತಿವೆ ನಿಜ. ಆದರೆ, ಅವು ಈಗ ಎಷ್ಟು ಪ್ರಮಾಣದಲ್ಲಿ ನಡೆಯುತ್ತಿವೆ ಎಂಬುದು ಬಹಳ ಮುಖ್ಯ. ಬಿಜೆಪಿ ಅಧಿಕಾರದಲ್ಲೂ ಸಾಕಷ್ಟು ಕೊಲೆ, ಕಳ್ಳತನ ನಡೆದಿವೆ. ಆದರೆ, ನಾವು ಬಂದ ಮೇಲೆ ಎಲ್ಲವನ್ನು ನಿಯಂತ್ರಿಸಿದ್ದೇವೆ ಎಂದು ಗೃಹ ಸಚಿವರು.

ಹುಬ್ಬಳ್ಳಿ:

ರಾಜ್ಯದಲ್ಲಿ ಕೆಲ ಸ್ವಾಭಾವಿಕವಾಗಿ ನಡೆದ ಘಟನೆಗಳನ್ನು ಹೊರತುಪಡಿಸಿದರೆ ಕಾನೂನು ಸುವ್ಯವಸ್ಥೆ ಸಂಪೂರ್ಣ ನಮ್ಮ ಹತೋಟಿಯಲ್ಲಿದೆ. ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂಬ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಹೇಳಿಕೆ ಸತ್ಯಕ್ಕೆ ದೂರವಾದುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಸ್ಪಷ್ಟಪಡಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಕಾನೂನು ಸುವ್ಯವಸ್ಥೆ ನಮ್ಮ ಕೈಮೀರಿ ಹೋಗಿಲ್ಲ. ವ್ಯವಸ್ಥಿತವಾಗಿದೆ ಎಂದರು.

ನಿರ್ಮಲಾ ಸೀತಾರಾಮನ್ ಅವರು ರಾಜ್ಯಕ್ಕೆ ಕೈಗಾರಿಕೆಗಳು ಬರುತ್ತಿಲ್ಲ ಎಂಬ ಆರೋಪಕ್ಕೆ ಉತ್ತರಿಸಿ, ಇದೂ ಸತ್ಯಕ್ಕೆ ದೂರವಾದುದು. ಯಾವ ಕೈಗಾರಿಕೋದ್ಯಮಿಗಳು ರಾಜ್ಯದಿಂದ ಹೊರಗೆ ಹೋಗುತ್ತೇವೆ ಎಂದಿಲ್ಲ. ಜತೆಗೆ ಹೊರಗಿನಿಂದ ಬಂದವರು ಯಾರೂ ಈ ರೀತಿಯ ಅಪವಾದ ಮಾಡಿಲ್ಲ ಎಂದರು.

ರಾಜ್ಯದಲ್ಲಿ ಈಗಲೂ ಕೊಲೆ, ಕಳ್ಳತನ ಹಾಗೂ ಡ್ರಗ್ಸ್‌ ದಂಧೆಗಳು ನಡೆಯುತ್ತಿವೆ ನಿಜ. ಆದರೆ, ಅವು ಈಗ ಎಷ್ಟು ಪ್ರಮಾಣದಲ್ಲಿ ನಡೆಯುತ್ತಿವೆ ಎಂಬುದು ಬಹಳ ಮುಖ್ಯ. ಬಿಜೆಪಿ ಅಧಿಕಾರದಲ್ಲೂ ಸಾಕಷ್ಟು ಕೊಲೆ, ಕಳ್ಳತನ ನಡೆದಿವೆ. ಆದರೆ, ನಾವು ಬಂದ ಮೇಲೆ ಎಲ್ಲವನ್ನು ನಿಯಂತ್ರಿಸಿದ್ದೇವೆ. ಪೊಲೀಸರ ಜತೆ ಸಭೆ ಮಾಡಿ ಡ್ರಗ್ಸ್‌ ದಂಧೆ ನಿಲ್ಲಿಸುವಂತೆ ಘೋಷಣೆ ಮಾಡಿದ್ದೇನೆ. ಎಲ್ಲೆಡೆ ದೊಡ್ಡ ಆಂದೋಲನ ನಡೆಸಲಾಯಿತು. ಸಾವಿರಾರು ಕೋಟಿ ಮೌಲ್ಯದ ಡ್ರಗ್ಸ್‌ ಪತ್ತೆಹಚ್ಚಿ ಸುಟ್ಟು ಹಾಕಿದ್ದೇವೆ. ಕೆಲವು ಡ್ರಗ್ಸ್‌ ದಂಧೆಕೋರರ ಕಾಲಿಗೆ ಗುಂಡು ಹಾಕಿ ಬಂಧಿಸಿರುವ ಪ್ರಯತ್ನ ಆಗಿದೆ ಎಂದು ಹೇಳಿದರು.

ಮೊದಲಿಗಿಂತ ಈಗ ಡ್ರಗ್ಸ್‌ ದಂಧೆ ಕಡಿಮೆಯಾಗಿದೆ. ಹುಬ್ಬಳ್ಳಿಯಲ್ಲೂ ನೂರಾರು ಜನರ ಮೇಲೆ ಕ್ರಮಕೈಗೊಳ್ಳಲಾಗಿದೆ. ವಿವಿಧ ಜಿಲ್ಲೆಗಳಲ್ಲೂ ಕಾರ್ಯಾಚರಣೆ ಮಾಡಿ ನೈಜೇರಿಯಾ ಸೇರಿದಂತೆ ವಿವಿಧ ದೇಶದ ಡ್ರಗ್ಸ್‌ ಫೆಡ್ಲರ್‌ಗಳನ್ನು ಬಂಧಿಸಲಾಗಿದೆ. ನಾವು ಡ್ರಗ್ಸ್‌ ಎಲ್ಲಿಂದ ಬರುತ್ತಿದೆ ಎಂಬ ಮೂಲದ ಶೋಧ ನಡೆಸುತ್ತಿದ್ದೇವೆ ಎಂದರು.

ತಮ್ಮ ತಟ್ಟೆ ನೋಡಿಕೊಳ್ಳಲಿ:

ಸದನದಲ್ಲಿ ಎಸ್ಸಿ-ಎಸ್ಸಿ ಮೀಸಲು ಹಣವನ್ನು ನಾವು ಬೇರೆ ಕಡೆ ವರ್ಗಾವಣೆ ಮಾಡಿದ್ದೇವೆ ಎಂದು ಆರೋಪಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಮೊದಲು ತಮ್ಮ ತಟ್ಟೆಯಲ್ಲಿ ಏನು ಬಿದ್ದಿದೆ ಎಂದು ನೋಡಿಕೊಳ್ಳಲಿ. ನಂತರ ಬೇರೆಯವರ ತಟ್ಟೆಯಲ್ಲಿ ಏನಿದೆ ಎಂದು ಹೇಳಲಿ. ನಾವು ಯಾವುದೇ ಹಣವನ್ನು ಡೈವರ್ಟ್ ಮಾಡಿಲ್ಲ. ಸರ್ಕಾರದ ಕಾರ್ಯಕ್ರಮಕ್ಕೆ ಹಣ ಉಪಯೋಗ ಮಾಡಿದ್ದೇವೆ. ಬಿಜೆಪಿ ಸಂಸದ ಅನುರಾಗ್ ಠಾಕೂರ ಸೇರಿದಂತೆ ಅವರ ಅನೇಕ ನಾಯಕರು ಕೇವಲ ಪ್ರಚಾರಕ್ಕೆ ರಾಹುಲ್ ಗಾಂಧಿ ವಿರುದ್ಧ ಇಲ್ಲ-ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಇದು ಕೇವಲ ತಮ್ಮ ಪ್ರಚಾರಕ್ಕಾಗಿ ರಾಹುಲ್‌ ಗಾಂಧಿ ಅವರ ಹೆಸರು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅಷ್ಟೇ ಎಂದು ಕಿಡಿಕಾರಿದರು.

ವಾಲ್ಮೀಕಿ ಹಗರಣದ ಆರೋಪ ಕೇಳಿ ಬಂದ ನಂತರ. ಕೂಡಲೇ ಎಸ್‌ಐಟಿ ರಚನೆ ಮಾಡಿದ್ದೇವೆ. ಚಂದ್ರಶೇಖರ ಆತ್ಮಹತ್ಯೆಯಾದ ಬಳಿಕ ಡೆತ್‌ನೋಟ್ ಸಿಕ್ಕ ನಂತರ ಸಿಬಿಐ, ಇಡಿ ತನಿಖೆ ಮಾಡುತ್ತಿದ್ದಾರೆ. ಆಪಾದನೆ ಬಂದ ಬಳಿಕ ಬಿ. ನಾಗೇಂದ್ರ ಅವರ ರಾಜೀನಾಮೆ ಪಡೆಯಲಾಗಿದೆ. ಇನ್ನೂ ತನಿಖಾ ವರದಿ ಬರಬೇಕಿದ್ದು, ಬಿಜೆಪಿ ಸುಮ್ಮನೆ ಆಪಾದನೆ ಮಾಡುತ್ತಿದೆ ಎಂದು ಪರಮೇಶ್ವರ ಹೇಳಿದರು.

ವರದಿ ಬರಲಿ:

ಮುಡಾ ಹಗರಣದ ಆರೋಪದ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಿದ್ದಾರೆ. ಅವರಿಗೆ ಯಾರು ಸೈಟ್ ಕೊಟ್ಟಿದ್ದಾರೆ? ಕಮೀಟಿಯಲ್ಲಿ ಜಿ.ಟಿ. ದೇವೆಗೌಡ, ರಾಮದಾಸ್, ತನ್ವೀರ್ ಶೇಠ್ ಸೇರಿದಂತೆ ಅನೇಕರಿದ್ದರು. ಆದರೆ, ಅವರೆಲ್ಲರೂ ಕಾಂಗ್ರೆಸ್ ನವರಲ್ಲ. ವರದಿ ಬರಲಿ, ಅಕಸ್ಮಾತ್ ಮುಖ್ಯಮಂತ್ರಿಗಳು ತಪ್ಪಿತಸ್ಥರಿದ್ದರೆ ಹೈಕಮಾಂಡ್ ಕ್ರಮ ಕೈಗೊಳ್ಳುತ್ತದೆ ಎಂದರು.

ನಾಯಿ ಮಾಂಸವಲ್ಲ:

ಬೆಂಗಳೂರಿನಲ್ಲಿ ನಾಯಿ ಮಾಂಸ ಮಾರಾಟದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ, ನಾವು ಸಹ ಆ ಮಾಂಸವನ್ನು ವಶಕ್ಕೆ ಪಡೆದು ಪರೀಕ್ಷೆಗೆ ಒಳಪಡಿಸಿದ್ದೇವೆ. ಅದು ನಾಯಿ ಮಾಂಸವಲ್ಲ ಎಂದು ಗೊತ್ತಾಗಿದೆ. ವಿನಾಕಾರಣ ಕೆಲವರು ಅಲ್ಲಿ ಹೋಗಿ ಗಲಾಟೆ ಮಾಡಿದ್ದಾರೆ. ಪುನೀತ ಕೆರೆಹಳ್ಳಿ ಶಾಂತಿ ಭಂಗ ಮಾಡಿದ ಕಾರಣಕ್ಕೆ ಅವರ ಮೇಲೆ ಕ್ರಮಕೈಗೊಳ್ಳಲಾಗಿದೆ. ಈ ಹಿಂದೆಯೂ ಅವರ ಮೇಲೆ ಕೆಲ ಪ್ರಕರಣಗಳು ದಾಖಲಾಗಿದ್ದರು ಎಂದರು.

ಕಾನೂನು ವ್ಯವಸ್ಥೆ ಸರಿಯಾಗಿದೆ:

ಸೈಬರ್ ಕ್ರೈಂಗಳು ಹೆಚ್ಚಾದ ಪರಿಣಾಮ ಸೈಬರ್ ಕ್ರೈಂ ಪೊಲೀಸ್ ಠಾಣೆಗಳನ್ನು ಹೆಚ್ಚಿಸಲಾಗಿದೆ. ವಂಚನೆಗೊಳಗಾದ ಸಾವಿರಾರು ಜನರಿಗೆ ನಾವು ಹಣವನ್ನು ಮರಳಿ ಕೊಡಿಸಿದ್ದೇವೆ. ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿದ ಪರಿಣಾಮ ಗಣೇಶ, ರಂಜಾನ್ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಸದ್ಯ ಕಾನೂನು ಸುವ್ಯವಸ್ಥೆ ಸರಿಯಾಗಿದೆ ಎಂದರು.ನಾವೇನು ರಾಜಕೀಯ ಸನ್ಯಾಸಿಯಲ್ಲ.

ಮುಖ್ಯಮಂತ್ರಿ ಬದಲಾವಣೆ ಹಾಗೂ ಮುಂದಿನ ಸಿಎಂ ಜಿ. ಪರಮೇಶ್ವರ ಎಂಬ ಕಾರ್ಯಕರ್ತರ ಘೋಷಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸದ್ಯ ರಾಜ್ಯದಲ್ಲಿ ಆ ತರಹದ ವಾತಾವರಣ ಇಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು. ಇನ್ನು ದಲಿತ ಮುಖ್ಯಮಂತ್ರಿ ಎಂಬ ವಿಚಾರ ಬಂದಾಗ ನಾವೇನು ರಾಜಕೀಯ ಸನ್ಯಾಸಿಗಳಲ್ಲ ಎನ್ನುವ ಮೂಲಕ ನಾನೂ ಮುಖ್ಯಮಂತ್ರಿ ಆಕಾಂಕ್ಷಿ ಎಂದು ಪ್ರತಿಕ್ರಿಯೆ ನೀಡಿದರು.