ರಾಜ್ಯಮಟ್ಟದ ಅಹಿಂದ ಸಮಾವೇಶವು ಹುಬ್ಬಳ್ಳಿಯ ಇಂದಿರಾ ಗಾಂಧಿ ಗಾಜಿನ ಮನೆಯಲ್ಲಿ ಜ.21ರಂದು ಬೆಳಗ್ಗೆ 10.30 ಗಂಟೆಗೆ ನಡೆಯಲಿದೆ ಎಂದು ಒಕ್ಕೂಟದ ಮಾಜಿ ಸೈನಿಕರ ಘಟಕದ ರಾಜ್ಯಾಧ್ಯಕ್ಷ, ಮಾಜಿ ಸೈನಿಕ ಎಂ.ವಾಸಪ್ಪ ಹೇಳಿದ್ದಾರೆ.

- ಸಿಎಂ ಸಿದ್ದರಾಮಯ್ಯ ಬದಲಾವಣೆ ಮಾಡಿದರೆ ಹುಷಾರ್‌: ಎಂ.ವಾಸಪ್ಪ ಎಚ್ಚರಿಕೆ - - -

ದಾವಣಗೆರೆ: ರಾಜ್ಯಮಟ್ಟದ ಅಹಿಂದ ಸಮಾವೇಶವು ಹುಬ್ಬಳ್ಳಿಯ ಇಂದಿರಾ ಗಾಂಧಿ ಗಾಜಿನ ಮನೆಯಲ್ಲಿ ಜ.21ರಂದು ಬೆಳಗ್ಗೆ 10.30 ಗಂಟೆಗೆ ನಡೆಯಲಿದೆ ಎಂದು ಒಕ್ಕೂಟದ ಮಾಜಿ ಸೈನಿಕರ ಘಟಕದ ರಾಜ್ಯಾಧ್ಯಕ್ಷ, ಮಾಜಿ ಸೈನಿಕ ಎಂ.ವಾಸಪ್ಪ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 31 ಜಿಲ್ಲೆಗಳು, ತಾಲೂಕು ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಅಂದು ನಡೆಯಲಿದೆ. ಅಹಿಂದ ವರ್ಗದ ಮುಖಂಡರಿಗೆ ಸನ್ಮಾನ, ಅಹಿಂದ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಸುದೀರ್ಘ ಅ‍ವಧಿಗೆ ಆಡಳಿತ ನಡೆಸಿದ ಸಾಧನೆ ಸಿದ್ದರಾಮಯ್ಯ ಮಾಡಿದ್ದಾರೆ. ಅಹಿಂದ ನಾಯಕ ಸಿದ್ದರಾಮಯ್ಯ 5 ವರ್ಷ ಪೂರ್ಣಾವಧಿ ಸಿಎಂ ಆಗಿ ಮುಂದುವರಿಯಬೇಕು. ಅಹಿಂದ ನಾಯಕರಿಗೆ ಹೆಚ್ಚಿನ ಆದ್ಯತೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಸಮಾವೇಶದಲ್ಲಿ ಚರ್ಚಿಸಲಾಗುವುದು. ಶೇ.84ರಷ್ಟು ಅಹಿಂದ ವರ್ಗ ರಾಜ್ಯದಲ್ಲಿದ್ದು, ಸಿದ್ದರಾಮಯ್ಯ ಸಿಎಂ ಆಗಿರಲೆಂದೇ ಮತ ಹಾಕಿದ್ದಾರೆ. ಹಾಗಾಗಿ, ಮಧ್ಯದಲ್ಲಿ ಇಳಿಸುವಂತಹ ಯಾವುದೇ ಪ್ರಯತ್ನವೂ ಸರಿಯಲ್ಲ. ಸಿಎಂ ಸ್ಥಾನದಿಂದ ಇಳಿಸುವ ಪ್ರಯತ್ನ ನಡೆದರೆ, ಅಹಿಂದ ವರ್ಗ ಪ್ರಬಲವಾಗಿ ವಿರೋಧಿಸುತ್ತದೆ ಎಂದರು.

ಅಹಿಂದ ಜನರು ಒಗ್ಗಟ್ಟಾಗಿ ತಮ್ಮ ಹಕ್ಕು ಪಡೆಯಲು ಮುಂದಾಗಬೇಕು. ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕೊಡಿಸುವ ಹಾಗೂ ಬುದ್ಧ, ಬಸವ, ಅಂಬೇಡ್ಕರ್ ತತ್ವ- ಸಿದ್ಧಾಂತದ ತಳಹದಿಯ ಮೇಲೆ ಅಹಿಂದ ಸಂಘಟನೆ ರೂಪುಗೊಂಡು ಕೆಲಸ ಮಾಡುತ್ತಿದೆ. ರಾಜ್ಯವ್ಯಾಪಿ ಸಂಘಟನೆಯನ್ನು ಬಲಪಡಿಸುವ ಕೆಲಸವಾಗುತ್ತಿದೆ. ಪ್ರತಿ ಜಿಲ್ಲೆಯಲ್ಲೂ ಪದಾಧಿಕಾರಿಗಳನ್ನು ನೇಮಿಸಿ, ಸಂಘಟನೆ ಬಲವೃದ್ಧಿಪಡಿಸಲಾಗುತ್ತಿದೆ ಎಂದು ವಾಸಪ್ಪ ಮಾಹಿತಿ ನೀಡಿದರು.

ಸಂಘಟನೆಯ ಜಿಲ್ಲಾಧ್ಯಕ್ಷ ದೇವೇರಿ ದೊಡ್ಡಪ್ಪ, ಮಹಿಳಾ ಘಟಕ ಅಧ್ಯಕ್ಷೆ ಎಸ್.ಸುಜಾತಾ, ಜಗಳೂರು ತಾಲೂಕು ಅಧ್ಯಕ್ಷೆ ವೈ.ಜಿ. ಉಮಾದೇವಿ ಇತರರು ಇದ್ದರು.

- - -

-20ಕೆಡಿವಿಜಿ2: