ಸಾರಾಂಶ
ಚಾಮರಾಜನಗರ : ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ರಾಜ್ಯ ಮಟ್ಟದ ಪ್ರಥಮ ಆಶಾ ಕಾರ್ಯಕರ್ತೆಯರ ಸಮ್ಮೇಳನವನ್ನು ಸೆ.13, 14 ರಂದು ಕಲಬುರ್ಗಿ ಜಿಲ್ಲೆಯಲ್ಲಿ ಆಯೋಜಿಸಲಾಗಿದೆ ಎಂದು ಮೈಸೂರು ನಗರ ಆಶಾ ಕಾರ್ಯಕರ್ತೆಯರ ಸಂಘದ ಸಲಹೆಗಾರ್ತಿ ಜಿ.ಎಸ್. ಸೀಮಾ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಶಾ ಕಾರ್ಯಕರ್ತೆಯರನ್ನು ಸಂಘಟಿಸಿ ಅವರ ಹಕ್ಕುಗಳನ್ನು ರಕ್ಷಿಸಿಕೊಳ್ಳುವ ಉದ್ದೇಶದಿಂದ ರಾಜ್ಯದ 31 ಜಿಲ್ಲೆಗಳಿಂದ ಆಶಾ ಪ್ರತಿನಿಧಿಗಳು ಸಮ್ಮೇಳನಕ್ಕೆ ಭಾಗವಹಿಸಲಿದ್ದು, 6000ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಬಹಿರಂಗ ಅಧಿವೇಶನಕ್ಕೆ ಭಾಗವಹಿಸಲಿದ್ದಾರೆ ಎಂದರು.
ಸೆ. 13ರಂದು ಬೆಳಗ್ಗೆ 11 ಗಂಟೆಗೆ ಕಲಬುರ್ಗಿಯ ರೈಲ್ವೆ ನಿಲ್ಧಾಣದಲ್ಲಿ ರಾಜ್ಯಾಧ್ಯಕ್ಷ ಕೆ.ಸೋಮಶೇಖರ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಕಲಬುರ್ಗಿಯ ವೀರಶೈವ ಕಲ್ಯಾಣ ಮಂಟಪದ ಮುಂಭಾಗದಲ್ಲಿರುವ ಪಬ್ಲಿಕ್ ಗಾರ್ಡನ್‌ನಲ್ಲಿ 12 ಗಂಟೆಗೆ ಬಹಿರಂಗ ಅಧಿವೇಶನ ನಡೆಯಲಿದೆ ಎಂದರು.
ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಎಸ್‌ಯುಸಿಐ ರಾಜ್ಯ ಕಾರ್ಯದರ್ಶಿ ಉಮಾ, ಅತಿಥಿಗಳಾಗಿ ಮೆಡಿಕಲ್ ಸರ್ವಿಸ್ ಸೆಂಟರ್ ಉಪಾಧ್ಯಕ್ಷೆ ಡಾ.ಸುಧಾ ಕಾಮತ್, ಕರ್ನಾಟಕ ಕೇಂದ್ರಿಯ ವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಶಿವಗಂಗಾ ರುಮ್ಮಾ, ಎಐಎಂಎಸ್‌ಎಸ್ ಮಹಿಳಾ ಸಂಘಟನೆ ರಾಜ್ಯ ಕಾರ್ಯದರ್ಶಿ ಎಸ್. ಶೋಭಾ ಆಗಮಿಸಲಿದ್ದಾರೆ ಎಂದರು.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯಾಧ್ಯಕ್ಷ ಕೆ.ಸೋಮಶೇಖರ್ ಮುಖ್ಯ ಭಾಷಣ ಮಾಡಲಿದ್ದಾರೆ. ಈಗಾಗಲೇ ತಾಲೂಕು, ಜಿಲ್ಲಾ ಮಟ್ಟದಲ್ಲಿ ಸಮ್ಮೇಳನ ನಡೆಸಲಾಗಿದ್ದು, ರಾಜ್ಯ ಮಟ್ಟದ ಸಮ್ಮೇಳನವನ್ನು ಇದೇ ಮೊದಲ ಬಾರಿಗೆ ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ಆಶಾ ಕಾರ್ಯಕರ್ತೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಕವಿತಾ ಮಾತನಾಡಿ, ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸುವ ಸಲುವಾಗಿ ಚರ್ಚಿಸಲು ಸಮ್ಮೇಳನ ಆಯೋಜಿಸಲಾಗಿದೆ. ರಾಜ್ಯದ 31 ಜಿಲ್ಲೆಗಳಿಂದಲೂ ಆಶಾ ಪದಾಧಿಕಾರಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲೆಯಿಂದ ಆಶಾ ಪದಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಹೆಚ್ಚಿನಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸಂಘದ ಪದಾಧಿಕಾರಿಗಳಾದ ಮಂಜುಳಾ, ಯಶೋಧ, ಜಯಲಕ್ಷ್ಮಿ, ಶಶಿಕಲಾ, ಭಾಗ್ಯ ಇದ್ದರು.