ಸಾರಾಂಶ
ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ ಎಚ್ಎನ್ ಪ್ರಶಸ್ತಿ ಪುರಸ್ಕೃತರಿಗೆ ಮತ್ತು 35 ಮಹಿಳಾ ಸಾಧಕರಿಗೆ ರಾಜ್ಯ ಮಟ್ಟದ ಚೈತನ್ಯ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಮೂಲಕ ನೀಡುವ ರಾಜ್ಯ ಮಟ್ಟದ ಎಚ್ ಎನ್ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಜಿ. ರಾಜೇಂದ್ರ ಹಾಗೂ ಮಹಿಳಾ ಸಾಧಕರಿಗೆ ನೀಡಲಾಗುವ ರಾಜ್ಯಮಟ್ಟದ ಚೈತನ್ಯಶ್ರೀ ಪ್ರಶಸ್ತಿಯನ್ನು ಪದ್ಮಶ್ರೀ ಪುರಸ್ಕೃತ ರಾಣಿ ಮಾಚಯ್ಯ ಅವರಿಗೆ ನೀಡಿ ಗೌರವಿಸಲಾಯಿತು.ಬೆಂಗಳೂರಿನ ಸಮೀಪದ ಬಾಗಲೂರು ವಿ.ಜೆ. ಇಂಟರ್‌ನ್ಯಾಶನಲ್ ಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಪರಿಷತ್ 4ನೇ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಶನಿವಾರ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇಸ್ರೋ ಮಾಜಿ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಗೌರವ ಮಾರ್ಗದರ್ಶಕರಾದ ಡಾ.ಎ.ಎಸ್. ಕಿರಣ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಿಲ್ಲೆಯ ಇಬ್ಬರು ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ ಎಚ್ಎನ್ ಪ್ರಶಸ್ತಿ ಪುರಸ್ಕೃತರಿಗೆ ಮತ್ತು 35 ಮಹಿಳಾ ಸಾಧಕರಿಗೆ ರಾಜ್ಯಮಟ್ಟದ ಚೈತನ್ಯ ಶ್ರೀ ಪ್ರಶಸ್ತಿ ನೀಡಲಾಯಿತು. ಸಮಾರಂಭದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಮ್ಮೇಳನದ ಸರ್ವಾಧ್ಯಕ್ಷರಾದ ರಂಗಕರ್ಮಿ ಚಲನಚಿತ್ರ ನಟಿ ಮತ್ತು ವಿಧಾನ ಪರಿಷತ್ ಸದಸ್ಯರಾದ ಉಮಾಶ್ರೀ, ಪರಿಷತ್ ಸಂಸ್ಥಾಪಕ ಅಧ್ಯಕ್ಷರಾದ ಡಾ. ಹುಲಿಕಲ್ ನಟರಾಜ್, ಗಣ್ಯರು ಹಾಗೂ ಪರಿಷತ್ ಕೊಡಗು ಜಿಲ್ಲಾ ಅಧ್ಯಕ್ಷೆ ವನಿತ ಚಂದ್ರಮೋಹನ್ ಮತ್ತು ಪ್ರಮುಖರು ಇದ್ದರು.