ಟಗರಿನ ಕಾಳಗ, ಹೋರಿ ಓಡಿಸುವುದು, ಚಕ್ಕಡಿ ಸ್ಪರ್ಧೆ, ಕಬಡ್ಡಿ, ಖೋಖೋ, ಅಟ್ಯಾಪಟ್ಯಾದಂಥ ಗ್ರಾಮೀಣ ಕ್ರೀಡೆಗಳಿಗೆ ಸಂಘ- ಸಂಸ್ಥೆಗಳು ಪ್ರೋತ್ಸಾಹ ನೀಡುವ ಅಗತ್ಯ ಇದೆ.
ಲಕ್ಷ್ಮೇಶ್ವರ: ಇಲ್ಲಿನ ಪುರಸಭೆ ಉಮಾ ವಿದ್ಯಾಲಯ ಪ್ರೌಢಶಾಲಾ ಮೈದಾನದಲ್ಲಿ ಸೋಮವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದವರು ಎರಡನೇ ಬಾರಿಗೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಎರಡು ದಿನಗಳ ಟಗರಿನ ಕಾಳಗ ಭಾನುವಾರ ಮುಕ್ತಾಯಗೊಂಡಿತು. ಕಾರ್ಯಕ್ರಮವನ್ನು ಟಗರಿನ ಕಾಳಗದ ಮೂಲಕ ಶನಿವಾರ ಸಮಿತಿ ವತಿಯಿಂದ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕಾಗಿ ಹದಿನೇಳು ದಿನಗಳ ಕಾಲ ಹೋರಾಟ ಮಾಡಿದ ಸಮಗ್ರ ರೈರಪರ ಹೋರಾಟಗಾರರು ಹಾಗೂ ದಾನಿಗಳನ್ನು ಸನ್ಮಾನಿಸಲಾಯಿತು.
ರೈತ ಮುಖಂಡ ಮಂಜುನಾಥ ಮಾಗಡಿ ಮಾತನಾಡಿ, ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವ ಜನತೆ ಮೇಲಿದೆ. ಕ್ರಿಕೆಟ್, ಮೊಬೈಲ್ ಗೀಳಿನಿಂದ ಗ್ರಾಮೀಣ ಕ್ರೀಡೆಗಳೂ ನೇಪಥ್ಯಕ್ಕೆ ಸರಿಯುತ್ತಿರುವುದು ವಿಷಾದನೀಯ. ಟಗರಿನ ಕಾಳಗ, ಹೋರಿ ಓಡಿಸುವುದು, ಚಕ್ಕಡಿ ಸ್ಪರ್ಧೆ, ಕಬಡ್ಡಿ, ಖೋಖೋ, ಅಟ್ಯಾಪಟ್ಯಾದಂಥ ಗ್ರಾಮೀಣ ಕ್ರೀಡೆಗಳಿಗೆ ಸಂಘ- ಸಂಸ್ಥೆಗಳು ಪ್ರೋತ್ಸಾಹ ನೀಡುವ ಅಗತ್ಯ ಇದೆ. ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ರಾಜ್ಯಮಟ್ಟದ ಟಗರಿನ ಸ್ಪರ್ಧೆಯನ್ನು ಅತ್ಯಂತ ಅಚ್ಚುಕಟ್ಟಾಗಿ, ಯಶಸ್ವಿಯಾಗಿ ಹಮ್ಮಿಕೊಂಡಿರುವುದು ಉತ್ತಮ ಕೆಲಸವಾಗಿದೆ ಎಂದರು.ಕಾರ್ಯಕ್ರಮದಲ್ಲಿ ನಿಂಗಪ್ಪ ಬನ್ನಿ, ಶಬ್ಬಿರಲಿ ಶೇಖ್, ಬಸವರಾಜ ಹಿರೇಮನಿ, ಭರಮಣ್ಣ ಶರಸೂರಿ, ಸುರೇಶ ಹಟ್ಟಿ, ರವಿಕಾಂತ ಅಂಗಡಿ, ನಾಗರಾಜ ಚಿಂಚಲಿ, ಮಂಜುನಾಥ ಮುಳಗುಂದ, ಮಾಂತೇಶ ಶರಸೂರಿ, ಸಂತೋಷ ಬಾಲೇಹೊಸೂರು, ನಿಂಗಪ್ಪ ಕೊರಟ್ಟಿ, ಲೆಂಕಪ್ಪ ಶರಸೂರಿ, ಸಿದ್ದು ಹವಳಣ್ಣವರ, ನೀಲಪ್ಪ ಗದ್ದಿ, ಮಂಜುನಾಥ ಗದ್ದಿ, ಹನುಮಂತ ಹುರುಕನವರ, ಗಿರೀಶ ಗೂಳಿ, ಹಾಗೂ ಬಳಗದ ಸದಸ್ಯರು ಇದ್ದರು. ಮಂಜುನಾಥ ಶರಸೂರಿ ನಿರೂಪಿಸಿದರು.ಹಾಲು ಹಲ್ಲಿನ ಮರಿ, ಎರಡು ಹಲ್ಲಿನ ಮರಿ, ನಾಲ್ಕು ಹಲ್ಲಿನ ಮರಿ, ಎಂಟು ಹಲ್ಲಿನ ಮರಿ ಹೀಗೆ ವಿವಿಧ ವಿಭಾಗಗಳಲ್ಲಿ ವಿಜೇತ ಟಗರುಗಳಿಗೆ ಬಹುಮಾನ ವಿತರಿಸಲಾಯಿತು. ಲಕ್ಷ್ಮೇಶ್ವರ ಸೇರಿದಂತೆ ಅನೇಕ ತಾಲೂಕುಗಳಿಂದ ಟಗರುಗಳನ್ನು ಸ್ಪರ್ಧೆಗೆ ಕರೆತರಲಾಗಿತ್ತು. ಟಗರುಗಳ ಸೆಣಸಾಟ ರಣರೋಚಕವಾಗಿತ್ತು.